ಕೊರಟಗೆರೆ: ತಾಲೂಕು ಕೇಂದ್ರದಲ್ಲಿ ರೈತರ ಅನುಕೂಲಕ್ಕಾಗಿ ತಕ್ಷಣ ರಾಗಿ ಖರೀದಿ ಕೇಂದ್ರವನ್ನು ತೆಗೆಯುವಂತೆ ಶಾಸಕ ಡಾ.ಜಿ.ಪರಮೇಶ್ವರ ತುಮಕೂರಿನ ಜಂಟಿ ಕೃಷಿ ನಿರ್ದೇಶಕರನ್ನು ಆಗ್ರಹಿಸಿದ್ದಾರೆ.
ಕೊರಟಗೆರೆ ತಾಲ್ಲೂಕು ಅತೀ ಹೆಚ್ಚು ರಾಗಿ ಬೆಳೆಯುವ ತಾಲ್ಲೂಕುಗಳಲ್ಲಿ ಒಂದಾಗಿದ್ದು, ಪ್ರತೀ ವರ್ಷ ಸುಮಾರು 10 ಸಾವಿರ ಹೆಕ್ಟೇರ್ ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ರೈತರು ರಾಗಿ ಬಿತ್ತನೆ ಮಾಡಿ ಬೆಳೆಯುತ್ತಿದ್ದಾರೆ, ಪ್ರಸಕ್ತ ಸಾಲಿನಲ್ಲಿ ಕೃಷಿಕರು ಮಳೆಯ ಅತಿ ವೃಷ್ಟಿ ಮತ್ತು ಅನಾವೃಷ್ಟಿಯಿಂದ ಬಳಲಿ ಕೋವಿಡ್ ಮಹಾಮಾರಿ ಮಧ್ಯೆಯು ಶ್ರಮವಹಿಸಿ ಹೆಚ್ಚಿನ ಪ್ರಮಾಣದಲ್ಲಿ ರಾಗಿಯನ್ನು ಬೆಳೆದಿದ್ದಾರೆ.ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ರಾಗಿ ಖರೀದಿ ಕೇಂದ್ರಗಳನ್ನು ತೆರೆದಿದ್ದು, ಕೊರಟಗೆರೆ ತಾಲ್ಲೂಕಿನಲ್ಲಿ ರೈತರ ಒಕ್ಕೊರಲ ಬೇಡಿಕೆ ನಡುವೆಯೂ ರಾಗಿ ಕೇಂದ್ರವನ್ನು ತೆರೆಯದೇ ಇರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ ಎಂದಿದ್ದಾರೆ.
ತಾಲೂಕಿನ ರೈತರು ನೆರೆಯ ತಾಲೂಕಿನ ರಾಗಿ ಕೇಂದ್ರಗಳಿಗೆ ಖರೀದಿಗೆ ಮಾರಲು ಹೋಗಬೇಕಾದರೆ ರೈತರಿಗೆ ಸಾಗಾಣೆ ಮತ್ತು ಕೂಲಿ ವೆಚ್ಚವು ಸಹ ಹೊರೆಯಾಗುತ್ತದೆ ಆದ್ದರಿಂದ ಕೂಡಲೇ ರಾಗಿ ಕೇಂದ್ರವನ್ನು ಕೊರಟಗೆರೆ ತಾಲ್ಲೂಕು ಕೇಂದ್ರದಲ್ಲಿ ತೆರೆಯುವಂತೆ ಜಿಲ್ಲೆಯ ಜಂಟಿ ಕೃಷಿ ನಿದೇರ್ಶಕರಿಗೆ ಶಾಸಕರು ಆಗ್ರಹಿಸಿದ್ದಾರೆ.