ಕೊರಟಗೆರೆ: ಸಂಕ್ರಾಂತಿ ಎಂದರೆ ಗ್ರಾಮೀಣ ಭಾಗದ ರೈತರು ಬಂದ ಬೆಳೆಗಳನ್ನು ಒಟ್ಟು ಕೂಡಿಸಿಕೊಂಡು ಪೂಜೆ ಮಾಡಿ, ಸಂಕ್ರಾಂತಿ ಹಬ್ಬದ ದಿನದಂದು ವರ್ಷ ಪೂರ್ತಿ ದುಡಿದ ರಾಸುಗಳಿಗೆ ಪೂಜೆ ಸಲ್ಲಿಸಿ ಕಡಲೆಕಾಯಿ, ಗೆಣಸು, ಹಾಗೂ ಅವರೆಕಾಯಿಯನ್ನು ಹಸುಗಳಿಗೆ ತಿನ್ನಿಸಿ ಸಂತಸ ಪಡುವ ಹಬ್ಬವಾಗಿದೆ.
ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ವಜ್ಜನಕುರಿಕೆ ಗ್ರಾಮದಲ್ಲಿರುವ ರೈತರೊಬ್ಬರು ಸಂಕ್ರಾಂತಿ ಹಬ್ಬದಂದು ತಮ್ಮ ಮನೆಯಲ್ಲಿರುವ ಹಸುಗಳ ಮೈ ತೊಳೆದು, ಸಿಂಗಾರ ಮಾಡಿ, ಮನೆ, ಮಕ್ಕಳೆಲ್ಲ ಪೂಜೆ ಸಲ್ಲಿಸಿ ಕಡಲೆಕಾಯಿ, ಗೆಣಸು, ಹಾಗೂ ಅವರೆಕಾಯಿಯನ್ನು ಹಸುಗಳಿಗೆ ತಿನ್ನಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ.
ವಜ್ಜನಕುರಿಕೆ ರೈತ ಕಾಮರಾಜು ಮಾತನಾಡಿ, ನಮ್ಮ ಪೂರ್ವಜರ ಕಾಲದಿಂದಲೂ ವರ್ಷ ಪೂರ್ತಿ ರೈತರಿಗೆ ಅನ್ನ ನೀಡುವ ಹಸುಗಳಿಗೆ ಮಕರ ಸಂಕ್ರಾಂತಿ ಹಬ್ಬದ ದಿನದಂದು ಮನೆಯಲ್ಲಿರುವ ಹಸುಗಳಿಗೆ ಸ್ನಾನ ಮಾಡಿಸಿ, ಹೂವಿನಿಂದ ಸಿಂಗಾರ ಮಾಡಿ ವಜ್ಜನಕುರಿಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಸುಗಳನ್ನು ಮೆರವಣಿಗೆ ಮಾಡಲಾಗುತ್ತದೆ ಎಂದರು.
ಮನೆಯಲ್ಲಿರುವ ಎಲ್ಲರೂ ಹಸುಗಳಿಗೆ ಪೂಜೆ ಮಾಡಿ, ಹಬ್ಬಕ್ಕೆ ತಯಾರು ಮಾಡಿದ ಕಡಲೆಕಾಯಿ, ಗೆಣಸು, ಅವರೆಕಾಯಿ ತಿನ್ನಿಸಿ ಮನೆಯಲ್ಲಿ ಸಿಹಿ ಅಡಿಗೆ ಮಾಡಿ ಎಲ್ಲರು ತಿಂದು ಹಬ್ಬವನ್ನು ಹಿಂದಿನ ಕಾಲದಿಂದ ನಮ್ಮ ಪೂರ್ವಿಕರು ಆಚರಣೆ ಮಾಡಿದಂತೆ ನಾವು ಕೂಡ ಅದನ್ನ ಪಾಲಿಸಲಾಗುತ್ತದೆ ಎಂದು ತಿಳಿಸಿದರು.