ಲಿಂಗಸುಗೂರು: ಸರ್ಕಾರದ ಸೌಲಭ್ಯ ಹಾಗೂ ರಾಜಕೀಯ ಸ್ಥಾನಮಾನಕ್ಕಾಗಿ ಕೊರಮ, ಕೊರಚ ಸಮಾಜದವರು ಸಂಘಟಿತರಾಗಬೇಕು ಮತ್ತು ಒಗ್ಗಟ್ಟಾಗಿರಬೇಕು ಎಂದು ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು.
ಅಖೀಲ ಕರ್ನಾಟಕ ಕೊರಮ, ಕೊರಚ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ರವಿವಾರ ಪಟ್ಟಣದ ಸಾಯಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕೊರಮ, ಕೊರಚ ಸಮಾಜ ಸಂಘಟಿತರಾಗುವ ಜೊತೆಗೆ ಅನ್ಯ ಸಮಾಜವನ್ನು ಗೌರವದಿಂದ ಕಾಣಬೇಕು. ಎಸ್‌ಸಿ ಜಾತಿಯಲ್ಲಿ 101 ಉಪಜಾತಿಗಳಿವೆ.
ಇಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆ ಇದ್ದೇ ಇರುತ್ತದೆ. ಸ್ಪರ್ಧೆ ಇರಬೇಕೇ ವಿನಃ ದ್ವೇಷ ಸಾಧಿಸುವಂತಾಗಬಾರದು. ಸಹೋದರತ್ವದಿಂದ ಕಂಡಾಗ ಮಾತ್ರ ಸಮಾಜದಲ್ಲಿ ಬೆಳವಣಿಗೆ ಸಾಧ್ಯ ಎಂದು ಹೇಳಿದರು.
ಕೊರಮ, ಕೊರಚ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸಮಾಜದ ಸರ್ಕಾರಿ ನೌಕರರು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ಆದರೆ ಪ್ರತಿ ವರ್ಷವೂ ಈ ಕಾರ್ಯಕ್ರಮ ಆಯೋಜನೆ ಮಾಡಿದರೆ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ವಿದ್ಯಾರ್ಥಿಗಳು ಸಮಾಜದಿಂದ ಗೌರವ ಸ್ವೀಕರಿಸಿ ಉನ್ನತ ಸ್ಥಾನಕ್ಕೇರಿದಾಗ ಸಮಾಜದ ಋಣ ತೀರಿಸುವುದನ್ನು ಮರೆಯಬಾರದು ಎಂದ ಅವರು, ಕೊರಮ, ಕೊರಚ ಕ್ಷೇಮಾಭಿವೃದ್ಧಿ ಸಂಘದ ಭವನ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಹಿರಿಯ ಮುಖಂಡ ಭೂಪನಗೌಡ ಕರಡಕಲ್ ಮಾತನಾಡಿ, ಬಸವಾದಿ ಶರಣರ ಕಾಲಘಟದಲ್ಲಿದ್ದ ನೂಲಿ ಚಂದಯ್ಯ ಶರಣರು ತಮ್ಮ ಕಾಯಕದ ಮೂಲಕ ಬದುಕು ಸಾಗಿಸಿದ್ದಾರೆ. ಅಂತಹ ಶರಣರ ಮಾರ್ಗದರ್ಶನದಲ್ಲಿ ಕೊರಮ, ಕೊರಚ ಸಮಾಜದವರು ನಡೆಯಬೇಕಾಗಿದೆ. ಸಣ್ಣ ಸಮಾಜ ಎಂಬ ಕೀಳರಮೆ ಬಿಡಬೇಕು. ಪ್ರತಿಯೊಂದು ಸಮಾಜದವರಿಗೆ ಹುಟ್ಟಿನಿಂದ ಸಾವಿನವರೆಗೂ ಕೊರಮ ಸಮಾಜದವರು ಅಗತ್ಯವಾಗಿ ಬೇಕು ಎಂದರು.
ಶಿವಣಗಿ ನೂಲಿ ಚಂದಯ್ಯ ಗುರುಪೀಠದ ಶ್ರೀ ವೃಷಭೇಂದ್ರ ಗುರುಗಳು ಸಾನಿಧ್ಯ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಹನುಮಂತಪ್ಪ ಕಂದಗಲ್, ಕೊರಮ, ಕೊರಚ ಸಂಘದ ಜಿಲ್ಲಾ ಅಧ್ಯಕ್ಷ ಮರಿಯಪ್ಪ ಭಜಂತ್ರಿ ತುರಡಗಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ತಾಲೂಕು ಅಧ್ಯಕ್ಷ ಯಮನಪ್ಪ ಭಜಂತ್ರಿ, ಜಾನಪದ ವಿವಿ ಸಹಾಯಕ ಪ್ರಾಧ್ಯಾಪಕ ಡಾ| ಮಲ್ಲಿಕಾರ್ಜುನ ಮಾನ್ಪಡೆ, ಮುಖ್ಯ ಶಿಕ್ಷಕಿ ಮಂಜುಳಾ, ಆಮದಿಹಾಳ ಗ್ರಾಪಂ ಅಧ್ಯಕ್ಷೆ ನಿರ್ಮಲಾ ಪ್ರಕಾಶ, ಎಇಇ ಮಹಾಲಿಂಗಪ್ಪ ಭಜಂತ್ರಿ, ನೀಲಕಂಠಪ್ಪ ಮಸ್ಕಿ, ಭೀಮಣ್ಣ ಆಲ್ಕೋಡ, ಹುಲಗಪ್ಪ ಮಾಣಿಕ್, ರಾಮಚಂದ್ರಪ್ಪ, ಅಮರೇಶ ನಿಲೋಗಲ್, ಚೆನ್ನಬಸವ ತಲೇಖಾನ್, ಶಿವಶಂಕರಪ್ಪ ಇತರರು ಇದ್ದರು.