ಕೊಪ್ಪಳ: ಮುನಿರತ್ನ ತಪ್ಪು ಮಾಡಿದ್ದಾರೆಂಬ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ. ಅವರು ಆಡಿಯೋದಲ್ಲಿ ಏನು ಮಾತಾಡಿದ್ದಾರೆ ಎನ್ನುವುದು ಕೇಳಿ. ಅವರ ಬಂಧನ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ವರದಿ ಗಮನಕ್ಕಿದೆ. ನಾನು ವಿಠ್ಠಲಾಪುರಕ್ಕೆ ಹೋಗುತ್ತೇನೆ. ಅಲ್ಲಿ ಸ್ಥಿತಿಯ ನಂತರ ಅಧಿಕಾರಿಗಳೊಂದಿಗೆ ಮಾಹಿತಿ ನೀಡುತ್ತೇನೆ ಎಂದರು.
ಮೋದಿ ಅವರು ಗಣೇಶನ ಅರೆಸ್ಟ್ ಮಾಡಿದ್ದಾರೆ ಎನ್ನುತ್ತಾರೆ. ಮೋದಿಯವರು ಈ ಮಾತು ಶೋಭೆ ತರುವಂತದ್ದಲ್ಲ. ಬಿಜೆಪಿಯವರಿಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಎಂದರು.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದು ಕುಮಾರಸ್ವಾಮಿ ಸಮಾಧಾನವಿಲ್ಲ. ದಲಿತರ, ಬಡವರ ಕೆಲಸ ಮಾಡದೆ ಸಿಎಂ ವಿರುದ್ದ ಮಾತನಾಡುತ್ತಾರೆ ಎಂದು ತಂಗಡಗಿ ಹೇಳಿದರು.
ಮೀಸಲಾತಿ ಹೆಚ್ಚಳದ ಬಗ್ಗೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿ. ರಾಹುಲ್ ಗಾಂಧಿ ಸಮಾನತೆ ಇರುವವರೆಗೂ ಮೀಸಲಾತಿ ಇರುತ್ತದೆ ಎಂದಿದ್ದಾರೆ. ರಾಹುಲ್ ಗಾಂಧಿ ಹೇಳಿರುವುದರಲ್ಲಿ ತಪ್ಪೇನಿಲ್ಲ. ಕಾಂಗ್ರೆಸ್ ದಲಿತರ, ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ವಹಿಸುತ್ತದೆ ಎಂದರು.
ಸಿಎಂ ಸ್ಥಾನ ಖಾಲಿ ಇಲ್ಲ. ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ತಂಗಡಗಿ ಹೇಳಿದರು.