ಕೊಪ್ಪಳ: ಬರದ ನಾಡಿನ ದಶಕಗಳ ಬೇಡಿಕೆಯಾದ ಕೃಷ್ಣಾ ಬಿ ಸ್ಕಿಂನಡಿ ಬರುವ ಕೊಪ್ಪಳ ಏತ ನೀರಾವರಿ ಯೋಜನೆಗೆ ಮೈತ್ರಿ ಸರ್ಕಾರ ಬಜೆಟ್‌ನಲ್ಲಿ 210 ಕೋಟಿ ರೂ. ಘೋಷಣೆ ಮಾಡಿ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಅನುದಾನ ನೀಡಿ ಕೈ ತೊಳೆದುಕೊಂಡಿದೆ. 2013ರಲ್ಲೇ ಯೋಜನೆಗೆ ಚಾಲನೆ ಸಿಕ್ಕಿದ್ದರೂ ಅನುದಾನ ಸಿಗದೇ ಆಮೆಗತಿಯಲ್ಲಿ ನಡೆದು ನಿತ್ರಾಣಕ್ಕೆ ಬಿದ್ದಿದೆ. ಹಾಗಾಗಿ ಈ ಭಾಗದ 2.80 ಲಕ್ಷ ಎಕರೆ ಪ್ರದೇಶಕ್ಕೆ ಕೃಷ್ಣೆಯ ನೀರು ಗಗನ ಕುಸುಮದಂತಾಗಿದೆ.
ಕೃಷ್ಣಾ ಕೊಳ್ಳದ ನದಿಗಳ ಮೂಲದಿಂದ ಬರದ ನಾಡಿಗೆ ನೀರಾವರಿ ಭಾಗ್ಯ ಕಲ್ಪಿಸಿ ಎಂದು ರೈತರು ದಶಕಗಳಿಂದಲೂ ಹೋರಾಟ ಮಾಡುತ್ತಿದ್ದಾರೆ. ಇಲ್ಲಿನ ನೀರಾವರಿ ಯೋಜನೆಗಳ ಸ್ಥಿತಿಯನ್ನೊಮ್ಮೆ ನೋಡಿದರೆ ಅಯ್ಯೋ.. ಎಂದೆನಿಸುತ್ತದೆ.
ಕೃಷ್ಣಾ ಜಲವಿವಾದ ನ್ಯಾಯಾಧೀಕರಣ-2ರ ಅಂತಿಮ ತೀರ್ಪಿನಂತೆ ಕೃಷ್ಣಾ ಮೂರನೇ ಹಂತದ ಎಲ್ಲ ಯೋಜನೆಗಳಿಗೆ 177 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದೆ. ಈ ಯೋಜನೆಯಲ್ಲಿ ಒಟ್ಟು 9 ಯೋಜನೆಗಳು ಒಳಪಡಲಿವೆ. ಅದರಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಯೂ ಒಂದಾಗಿದೆ. ಈ ಕೊಪ್ಪಳ ಏತ ನೀರಾವರಿ ಯೋಜನೆಗೆ 12 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಇದನ್ನು ಹನಿ ನೀರಾವರಿ(ಮೈಕ್ರೋ ಇರಿಗೇಷನ್)ಅಡಿಯಲ್ಲಿ ನೀರಾವರಿಯಾಗಲಿದೆ. ಕೊಪ್ಪಳ ಜಿಲ್ಲೆಯ ಜನರು ದಶಕಗಳಿಂದಲೂ ಬರದ ನಾಡಿಗೆ ಕೃಷ್ಣೆಯ ನೀರು ಹರಿಸಿ ಎಂದು ಹೋರಾಟ ಮಾಡುತ್ತಲೇ ಇದ್ದಾರೆ. ಆದರೆ, ರೈತರ ಕೂಗು ಸರ್ಕಾರಕ್ಕೆ ಕೇಳುತ್ತಲೇ ಇಲ್ಲ. 2013ರಲ್ಲಿ ಈ ಭಾಗದ ನೂರಾರು ನಾಯಕರು ಬೆಂಗಳೂರಿಗೆ ನಿಯೋಗ ತೆರಳಿ ಆಗಿನ ಬಿಜೆಪಿ ಸರ್ಕಾರ ಆಡಳಿತದಲ್ಲಿ ಸಿಎಂ ಆಗಿದ್ದ ಜಗದೀಶ ಶೆಟ್ಟರ್ ಅವರಿಗೆ ಮನವಿ ಮಾಡಿ ಸಮಸ್ಯೆ ಪ್ರಸ್ತಾಪಿಸಿದ್ದರು. ನಾನಾ ರಾಜಕೀಯದಾಟದ ಮಧ್ಯೆ ಕುಷ್ಟಗಿ ತಾಲೂಕಿನ ಕಲಾಲಬಂಡಿಯಲ್ಲಿ ಬಿ ಸ್ಕಿಂ ಯೋಜನೆಗೆ ಶೆಟ್ಟರ್ ಅವರು ಚಾಲನೆ ಅಡಿಗಲ್ಲು ಸಮಾರಂಭ ನೆರವೇರಿಸಿದ್ದರು. ಬಳಿಕ ಕಾಮಗಾರಿಗೆ ವೇಗ ಪಡೆಯದೇ ನನೆಗುದಿಗೆ ಬಿದ್ದಿತು.
ಕಾಂಗ್ರೆಸ್ ನಡೆ ಕೃಷ್ಣೇಯ ಕಡೆ ಎಂದ್ರು: 2013ರ ಚುನಾವಣಾ ಸಂದರ್ಭದಲ್ಲಿ ಕೃಷ್ಣಾ ಯೋಜನೆಗಳ ಬಗ್ಗೆ ಚಿತ್ತ ಹರಿಸಿದ್ದ ಕಾಂಗ್ರೆಸ್ ಪಕ್ಷ ಬೆಂಗಳೂರಿನಿಂದ ಕಾಂಗ್ರೆಸ್ ನಡೆ-ಕೃಷ್ಣೆಯ ಕಡೆ ಎಂದು ಪಾದಯಾತ್ರೆ ಮಾಡಿದರು. ಕೊಪ್ಪಳ ಸೇರಿ ಇತರೆ ಭಾಗದಲ್ಲಿ ಕೃಷ್ಣಾ ಕೊಳ್ಳದ ಯೋಜನೆಗಳಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ. ಅನುದಾನ ಕೊಡುವ ನೀಡುವ ಭರವಸೆ ನೀಡಿದ್ದರು. ತಮ್ಮ ಅಧಿಕಾರವಧಿಯಲ್ಲಿ ಕೃಷ್ಣಾ ಯೋಜನೆ ಎಲ್ಲ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಆದರೆ ಐದು ವರ್ಷ ಅಧಿಕಾರ ಪೂರ್ಣಗೊಳಿಸಿದರೂ ಯೋಜನೆಗಳು ಪೂರ್ಣಗೊಂಡಿಲ್ಲ. ಈ ಯೋಜನೆಗೆ ಸರ್ಕಾರ 7769 ಕೋಟಿ ರೂ. ಅಂದಾಜು ಮಾಡಲಾಗಿದ್ದು, ಇಲ್ಲಿವರೆಗೂ ಹಂತ ಹಂತವಾಗಿ ಕೇವಲ 1302.58 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ.
ನಾರಾಯಣಪುರ ಜಲಾಶಯದ ಹಿನ್ನೀರು ಭಾಗದಿಂದ ನೀರನ್ನು ತಂದು ಈ ಭಾಗದ 2.82 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬೇಕಿದೆ. ಇದು ಕಾಲುವೆ ಮೂಲಕ ನೀರು ಹರಿಸುವ ಯೋಜನೆಯಲ್ಲ. ಹನಿ ನೀರಾವರಿ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿದೆ. ಆದರೆ ಕುಷ್ಟಗಿ ತಾಲೂಕಿನ ಕಲಾಲಬಂಡಿ ವರೆಗೂ ಕಾಲುವೆ ಕಾಮಗಾರಿ ನಡೆದಿದೆ. ಮುಂದೆ ಹಣದ ಅಭಾವ ಎದುರಾಗಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಯಲಬುರ್ಗಾ ತಾಲೂಕಿನಲ್ಲಿಯೇ ಅತಿ ಹೆಚ್ಚು ನೀರಾವರಿ ಸೌಲಭ್ಯ ಪಡೆಯಲಿದ್ದರೆ, ಕುಷ್ಟಗಿ ಬಳಿಕ ಕನಕಗಿರಿ ಹಾಗೂ ಕೊಪ್ಪಳ ತಾಲೂಕು ಸ್ವಲ್ಪ ನೀರಾವರಿಗೆ ಒಳಪಡಲಿವೆ.
2265 ಕೋಟಿ ಘೋಷಣೆಯಾದ್ರೂ ಇಲ್ಲ: ಕಳೆದ ಕಾಂಗ್ರೆಸ್ ಸರ್ಕಾರದ ಕೊನೆ ಗಳಿಗೆಯಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಗೆ 10 ಸಾವಿರ ಕೋಟಿ ರೂ. ಯೋಜನೆಯ ವಿಸ್ತೃತ ವರದಿ ಸಿದ್ಧಪಡಿಸಲಾಗಿತ್ತು. ಉಪ ಸಮಿತಿಯೂ ಈ ಭಾಗದಲ್ಲಿ ರೈತರ ಸಭೆ ನಡೆಸಿತ್ತು. ಅದಾದ ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯ ಅವರು ಕೊಪ್ಪಳದಲ್ಲಿಯೇ ಕೃಷ್ಣಾ ಬಿ ಸ್ಕಿಂನ ಯೋಜನೆಗಳಿಗೆ 2265 ಕೋಟಿ ರೂ. ಅನುದಾನ ಕೊಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಅವರ ಸರ್ಕಾರದ ಅವಧಿ ಪೂರ್ಣಗೊಂಡ ಬಳಿಕ ಆ ಅನುದಾನವೇ ಇಲ್ಲದಂತಾಗಿದೆ. ಘೋಷಣೆ ಬರಿ ಘೋಷಣೆಯಾಗಿಯೇ ಉಳಿದಿದೆ. ಕೊಪ್ಪಳ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಪ್ರತ್ಯೇಕ 10-20 ಸಾವಿರ ಕೋಟಿ ಅನುದಾನ ಅವಶ್ಯಕತೆಯಿದೆ ಎಂದು ನೀರಾವರಿ ತಜ್ಞರೇ ಹೇಳುತ್ತಿದ್ದಾರೆ. ಆದರೆ ಈಗಿನ ಮೈತ್ರಿ ಸರ್ಕಾರ ಈ ಯೋಜನೆಗೆ 210 ಕೋಟಿ ರೂ. ಪುಡಿಗಾಸಿನ ಅನುದಾನ ಘೋಷಣೆ ಮಾಡಿ ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತೆ ಮಾಡಿದೆ.
ಆಳ್ವಿಕೆ ನಡೆಸುವ ಸರ್ಕಾರಗಳು ಇನ್ನಾದರೂ ರೈತರ ವೇದನೆ ಅರಿತು ನೀರಾವರಿ ಯೋಜನೆಗೆ ಮಹತ್ವ ನೀಡಿ ರೈತರ ಕೃಷಿ ಭೂಮಿಗೆ ನೀರು ಹರಿಸುವ ಕಾಯಕಕ್ಕೆ ಮುಂದಾಗಬೇಕಿದೆ.
ನೀರಾವರಿಯಲ್ಲೂ ರಾಜಕೀಯ
ನೀರಾವರಿ ವಿಷಯದಲ್ಲೂ ರಾಜಕೀಯದ ಆಟ ಜೋರಾಗಿದೆ. ಬಿ ಸ್ಕಿಂ ಕನಸಿನ ಮಾತು ಎಂದು ಕೆಲವರು ಹೇಳುತ್ತಿದ್ದರೆ, ನಾವು ಜಾರಿ ಮಾಡಿಯೇ ಸಿದ್ದ ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ. ಬಿಜೆಪಿ ನಾಯಕರು ಬಿ ಸ್ಕಿಂ ಜಾರಿಗಾಗಿ ಕುಷ್ಟಗಿ-ಕೊಪ್ಪಳದವರೆಗೂ ಪಾದಯಾತ್ರೆ ನಡೆಸಿದ್ದಲ್ಲದೆ ಸರ್ಕಾರದ ಗಮನ ಸೆಳೆದಿವೆ. ಕಾಂಗ್ರೆಸ್ ಸಹಿತ ಕೊಪ್ಪಳ ಏತ ನೀರಾವರಿ ಯೋಜನೆಗೆ ಕವಡೆ ಕಾಸಿನಿ ಕಿಮ್ಮತ್ತು ನೀಡಲಿಲ್ಲ. ರಾಜಕೀಯದಾಟದಿಂದ ರೈತರ ಬದುಕು ದುಸ್ಥರವಾಗಿ ದುಡಿಮೆ ಅರಸಿ ಗುಳೆ ಹೋಗುವಂತ ಸ್ಥಿತಿ ಬಂದಿದೆ. ದೂರದೃಷ್ಟಿ ಇಲ್ಲದೇ ಯೋಜನೆಗಳನ್ನು ಜೀವಂತವಿಡಲು, ಜನರ ಸಮಾಧಾನಕ್ಕಾಗಿ ಪುಡಿಗಾಸು ಅನುದಾನ ನೀಡಿ ಸೈ ಎನಿಸಿಕೊಳ್ಳುತ್ತಿವೆ.
ದತ್ತು ಕಮ್ಮಾರ