Advertisement

ಸರ್ಕಾರ ನೀರಾವರಿ ಯೋಜನೆಗೆ ಒತ್ತು ನೀಡಿದೆ: ರಾಯರಡ್ಡಿ

11:11 AM Feb 13, 2019 | Team Udayavani |

ಯಲಬುರ್ಗಾ: ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಗಳಿಗೆ 210 ಕೋಟಿ ರೂ. ನೀಡಿದ್ದು ಶೀಘ್ರ ನೀರಾವರಿ ಯೋಜನೆ ಕಾಲುವೆ ನಿರ್ಮಾಣ ಕಾಮಗಾರಿ ಆರಂಭವಾಗಲಿವೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

Advertisement

ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಹಿಂದಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿಯೂ ಕೊಪ್ಪಳ ಏತ ನೀರಾವರಿಗೆ ಯೋಜನೆಗೆ ಹೆಚ್ಚು ಒತ್ತು ನೀಡಲಾಗಿತ್ತು. ನಾನು ಶಾಸಕನಿದ್ದ ಸಂದರ್ಭದಲ್ಲಿ ತಾಲೂಕಿಗೆ ಕೃಷ್ಣಾ ಭಾಗ್ಯ ನಿಗಮ ಕಚೇರಿ ಪ್ರಾರಂಭಿಸಿ ಯೋಜನೆ ಸರ್ವೇ ಮಾಡಿಸಿದ್ದೇನೆ. ಕಾಲುವೆ ನಿರ್ಮಾಣಕ್ಕೆ ಒಳಪಡುವ ಜಮೀನುಗಳನ್ನು ಸಹ ಗುರುತಿಸಲಾಗಿದೆ. ಒಟ್ಟಾರೆಯಾಗಿ ನೀರಾವರಿ ಯೋಜನೆಗೆ ಹಿಂದಿನ ಸರ್ಕಾರ ಹಾಗೂ ಇಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಚ್ಚಿನ ಒತ್ತು ನೀಡಿದ್ದಾರೆ ಎಂದರು.

ಬಿಜೆಪಿ ವಿರುದ್ಧ ಕಿಡಿ: ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ 1 ಲಕ್ಷ ರೂ. ವರೆಗಿನ ಸಾಲಮನ್ನಾ ಮಾಡಿದ್ದಾರೆ. ರೈತಪರ ಯೋಜನೆ ಜಾರಿಗೊಳಿಸಿದ್ದಾರೆ. ಸುಮ್ಮನೆ ಬಿಜೆಪಿ ನಾಯಕರು ರೈತರ ರಾಷ್ಟ್ರೀಕೃತ ಬ್ಯಾಂಕ್‌ ಸಾಲಮನ್ನಾ ಮಾಡುವಂತೆ ಒತ್ತಾಯ ಮಾಡುವ ಬದಲು ಕೇಂದ್ರದ ಮೇಲೆ ಒತ್ತಡ ಹಾಕಿ ಸಾಲಮನ್ನಾಕ್ಕೆ ಮುಂದಾಗಲಿ ಎಂದು ಹರಿಹಾಯ್ದ ಅವರು, ಸಮ್ಮಿಶ್ರ ಸರ್ಕಾರ ಈ ವರ್ಷದ ಬಜೆಟ್‌ನಲ್ಲಿ ಸಾಲಮನ್ನಾಕ್ಕೆ 12,750 ಕೋಟಿ ಹಣ ತೆಗಿದಿರಿಸಿದೆ ಎಂದು ತಿಳಿಸಿದರು.

ಬಿಜೆಪಿ ವಿರುದ್ಧ ತನಿಖೆ ನಡೆಸಲಿ: ಬಿಜೆಪಿ ಅಧಿಕಾರದಾಸೆಗೆ ಅಡ್ಡದಾರಿ ಹಿಡಿದಿದ್ದು, ಸಮ್ಮಿಶ್ರ ಸರ್ಕಾರ ಕೆಡವಲು ಆಪರೇಷನ್‌ ಕಮಲಕ್ಕೆ ಕೈ ಹಾಕಿದೆ. ಕೋಟ್ಯಂತರ ಹಣದ ಆಮಿಷ ಒಡ್ಡುತ್ತಿರುವ ಬಿಜೆಪಿ ವಿರುದ್ಧ ಐಟಿ ಮತ್ತು ಇಡಿ ಸಂಸ್ಥೆಗಳು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

ಕೆರೆ ತುಂಬಿಸುವ ಯೋಜನೆ ಕುರಿತು ಜನಜಾಗೃತಿ ವಿಚಾರ ಸಂಕೀರ್ಣ ಕಾರ್ಯಕ್ರಮ ಶೀಘ್ರ ಯಲಬುರ್ಗಾ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಜಿಪಂ ಸದಸ್ಯ ಹನುಮಂತಗೌಡ ಚೆಂಡೂರು, ಯಂಕಣ್ಣ ಯರಾಶಿ, ಬಿ.ಎಂ. ಶಿರೂರು, ರಾಘವೇಂದ್ರಚಾರ್ಯ ಜೋಶಿ, ಸತ್ಯನಾರಾಯಣಪ್ಪ ಹರಪ್ಪನಳ್ಳಿ, ಮಹೇಶ ಹಳ್ಳಿ, ಶ್ರೀಪಾದಪ್ಪ ಅಧಿಕಾರಿ, ಕಳಕಪ್ಪ ಕಂಬಳಿ, ರೇವಣೆಪ್ಪ ಸಂಗಟಿ, ಅಶೋಕ ತೋಟದ ಇದ್ದರು.

ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಾನಲ್ಲ, ನಮ್ಮ ಪಕ್ಷದಲ್ಲಿಯೇ ರಾಜಶೇಖರ ಹಿಟ್ನಾಳ, ಅಮರೇಗೌಡ ಬಯ್ನಾಪುರ ಸೇರಿದಂತೆ ಇತರರು ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ. ಪಕ್ಷ ಬಯಸಿದರೆ ಸ್ಪರ್ಧೆ ಮಾಡುವೆ. ಕೆಪಿಸಿಸಿ ಅಧ್ಯಕ್ಷ ದಿನೇಶ ಗೂಂಡೂರಾವ್‌ ನನ್ನನ್ನು ವಿಶೇಷವಾಗಿ ಚರ್ಚೆ ನಡೆಸಲು ಕರೆದಿದ್ದಾರೆ. ಪಕ್ಷದ ನಿರ್ಣಯಕ್ಕೆ ಬದ್ಧನಾಗಿದ್ದು, ಪಕ್ಷ ಸೂಚಿಸಿದವರಿಗೆ ದುಡಿಯುತ್ತೇನೆ. ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧೆ ಖಚಿತ.
ಬಸವರಾಜ ರಾಯರಡ್ಡಿ,ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next