ಕೊಪ್ಪಳ: ಕೊಪ್ಪಳ ಜಿಲ್ಲೆ ಮೊದಲೇ ಬರಪೀಡಿತವಾಗುತ್ತಿದೆ. ಗ್ರಾಮೀಣ ಜನರ ನೀರಿನ ಮೂಲವಾದ ಕೆರೆ, ಕಟ್ಟೆ, ಬಾವಿ ಹಾಗೂ ಹಳ್ಳಕೊಳ್ಳಗಳು ಬತ್ತಿ ಹೋಗುತ್ತಿವೆ. ತುಂಗಭದ್ರೆ ಒಡಲಲ್ಲಿ ಹೂಳು ತುಂಬಿದ್ದರೂ ಸರ್ಕಾರ ಗಮನ ನೀಡಿಲ್ಲ. ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ವೆಚ್ಚ ಹೆಚ್ಚಾಗುತ್ತಿದೆ. ಕೃಷಿಕರಿಗೆ ನೀರು ಸಿಗುತ್ತಿಲ್ಲ. ಸರ್ಕಾರ ಇನ್ನಾದರೂ ನೀರಾವರಿ ಯೋಜನೆಗಳನ್ನು ಬರಿ ಘೋಷಣೆ ಮಾಡದೇ ಕಾರ್ಯಗತ ಮಾಡಬೇಕೆಂದು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಈಶ್ವರ ಹತ್ತಿ ಅವರು ಸರ್ಕಾರಕ್ಕೆ ಒತ್ತಾಯ ಮಾಡಿದರು.
ಸಮ್ಮೇಳನದಲ್ಲಿ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಬರದಿಂದಾಗಿ ಕೃಷಿ ಬದುಕಿಗೆ ಸಂಕಷ್ಟ ಎದುರಾಗುತ್ತಿದೆ. ಕೇಂದ್ರ ಸರ್ಕಾರ ಸೆಂಟ್ರಲ್ ಗ್ರೌಂಡ್ ವಾಟರ್ ಬೋರ್ಡ್ ಮೂಲಕ ಸರ್ವೇ ನಡೆಸಿದಾಗ ಗ್ರಾಮೀಣ ಪ್ರದೇಶದ ಜನತೆಗೆ ಕುಡಿಯಲು ಶೇ. 8ರಷ್ಟು ನೀರು ಅಂತರ್ಜಲದಿಂದ ದೊರೆಯುತ್ತಿದೆ ಎಂಬ ವರದಿ ನೀಡಿದೆ. ಆದರೆ ಇತ್ತೀಚೆಗಿನ ವರ್ಷ ನೀರಿನ ಅಭಾವ ತಲೆದೂರುತ್ತಿದೆ ಎಂದರು.
ಇನ್ನೂ ಜಿಲ್ಲೆಯಲ್ಲಿ 1953ರಲ್ಲಿ ತುಂಗಭದ್ರೆ ಡ್ಯಾಂ ಕಟ್ಟಲಾಗಿದ್ದರೂ ಜನತೆಗೆ ನೀರು ಸಿಗುತ್ತಿಲ್ಲ. ಡ್ಯಾಂ ಒಡಲಲ್ಲಿ ಕಾರ್ಖಾನೆಯ ತ್ಯಾಜ್ಯ ತುಂಬಿಕೊಂಡಿದೆ. 2009ರಲ್ಲಿ ನೀರಾವರಿ ಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಇಟಾಲಿಯನ್ ಮೇಡ್ ಮಷಿನ್ ಮೂಲಕ ಹೂಳೆತ್ತುವ ಪ್ರಸ್ತಾವನೆ ಮಾಡಿದ್ದರೂ ಅದು ಕಾರ್ಯಗತಗೊಳ್ಳಲಿಲ್ಲ. ದೇಶದಲ್ಲಿ ಪುಣೆಯ ಖಡಕ್ ವೀಸಾಲ್ ಅಣೆಕಟ್ಟಿನಲ್ಲಿ ಖಾಸಗಿ ಸಂಸ್ಥೆ ಮೂಲಕ 60 ಸಾವಿರ ಟ್ರಕ್‌ನಷ್ಟು ಹೂಳು ತೆಗೆದಿದ್ದು ಬಿಟ್ಟರೆ ಮತ್ತೆ ಯಾವುದೇ ಡ್ಯಾಂ ಹೂಳು ತೆಗೆದಿಲ್ಲ. ಆದರೆ ಜಿಲ್ಲೆಯಲ್ಲಿ ರೈತರೇ ಜೊತೆಗೂಡಿ ಡ್ಯಾಂ ಹೂಳು ತೆಗೆಯುವ ಕಾರ್ಯ ಆರಂಭಿಸಿದ್ದಾರೆ. ಸರ್ಕಾರಕ್ಕೆ ನಾವೆಲ್ಲರೂ ಒತ್ತಾಯ ಮಾಡಿ ಹೂಳು ತೆಗೆಸುವ ಕೆಲಸ ಮಾಡಬೇಕು. ಇಲ್ಲದೇ ಹೋದರೆ ಮುಂದಿನ ದಿನದಲ್ಲಿ ಅಣೆಕಟ್ಟು ಕೇವಲ ಪ್ರವಾಸಿ ತಾಣವಾಗುವುದಲ್ಲಿ ಅಚ್ಚರಿ ಪಡಬೇಕಿಲ್ಲ ಎಂದರು.
ಇನ್ನೂ ಸಿಂಗಟಾಲೂರು ಏತ ನೀರಾವರಿ ಯೋಜನೆ ಪ್ರತಿ ವರ್ಷ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡುತ್ತಿದೆ. 2015ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು, 5768 ಕೋಟಿ ರೂ. ಕೊಟ್ಟು 2.65 ಲಕ್ಷ ಎಕರೆ ಭೂಮಿಗೆ ನೀರಾವರಿ ಮಾಡಿದ್ದಾರೆ. ಈ ಯೋಜನೆ ಪೂರ್ಣಗೊಂಡರೆ ಮಾತ್ರ ಕೊಪ್ಪಳದ 15,520 ಸೂಕ್ಷ್ಮ ನೀರಾವರಿ ಪ್ರದೇಶ ಸೇರಿದಂತೆ ಒಟ್ಟು 55706 ಎಕರೆ ಭೂಮಿ ನೀರಾವರಿ ಕಾಣಲಿದೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಅವಶ್ಯ ಎಂದರು.
ಜಲ ಜಾಗೃತಿ ಕಹಳೆ: ಜಿಲ್ಲೆಯಲ್ಲಿನ ಬರದ ಪರಿಸ್ಥಿತಿ, ನೀರಾವರಿ ಸಮಸ್ಯೆ ಅರಿತು ಹಲವೆಡೆ ಜಲಜಾಗೃತಿ ಕಹಳೆ ಮೊಳಗಿವೆ. ಕೊಪ್ಪಳ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು 28 ಕಿಮೀ ಹಿರೇಹಳ್ಳವನ್ನು ಸ್ವಚ್ಛ ಮಾಡುವ ಮೂಲಕ ಜಲ ಜಾಗೃತಿಗೆ ಮುಂದಾಗಿದ್ದಾರೆ, ಇನ್ನೂ ಕುಷ್ಟಗಿಯಲ್ಲಿ ದೇವೇಂದ್ರಪ್ಪ ಬಳೂಟಗಿ ನೇತೃತ್ವದಲ್ಲಿ ನಿಡಶೇಷಿ ಕೆರೆ ಹೂಳೆತ್ತುವ ಕಾರ್ಯ ನಡೆಸಿ ಜಲ ಸಂರಕ್ಷಣೆಯ ಕಾಯಕ ಆರಂಭಿಸಿದ್ದಾರೆ. ಯಲಬುರ್ಗಾದಲ್ಲಿ ಕಲ್ಲಬಾವಿ ಕೆರೆಯ ಕಾಯಕ ನಡೆಇದೆ. ನಿಜಕ್ಕೂ ಇಂತಹ ಮಹಾನ್ ಕಾರ್ಯಗಳು ಇಂದಿನ ದಿನದಲ್ಲಿ ಅವಶ್ಯವಾಗಿವೆ ಎಂದರು.
ಇಂಗ್ಲೀಷ್ ಮಾಧ್ಯಮ!: ಇನ್ನೂ ಇತ್ತೀಚೆಗೆ ಶಿಕ್ಷಣದ ಗುಣಮಟ್ಟ ಕುಸಿತ ಕಾಣುತ್ತಿದೆ. ಸರ್ಕಾರವೇ ಮುಂದೆ ನಿಂತು ಕನ್ನಡ ಮಾಧ್ಯಮ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದೆ. ಹೀಗಾದರೆ ಕನ್ನಡದ ಸ್ಥಿತಿ ಎಲ್ಲಿಗೆ ಬಂತು ಎನ್ನುವಂತಾಗಿದೆ. ಇದನ್ನು ಶಿಕ್ಷಣ ತಜ್ಞರು ಚಿಂತನೆ ಮಾಡಬೇಕಿದೆ. ಇನ್ನೂ ವಿಚಿತ್ರವೆಂದರೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಗೆ ಬಿಸಿಯೂಟದ ಹೊಣೆ ನೀಡಿದ್ದು, ಅವರು ಉಪ್ಪು, ಹುಳಿ, ಖಾರ, ಹುಣಸೆ, ಮೆಣಿಸಿನಕಾಯಿಯನ್ನೇ ಹೊಂದಿಸುವುದರಲ್ಲೇ ಶಾಲಾ ಅವಧಿ ಮುಗಿದು ಹೋಗುತ್ತಿದೆ. ಮೊದಲು ಇದಕ್ಕೆ ಶಾಲಾ ಗುಮಾಸ್ತನನ್ನು ನೇಮಕ ಮಾಡಿಕೊಳ್ಳಬೇಕು. ಶಿಕ್ಷಕರಿಂದ ಈ ಹೊರೆ ಇಳಿಸಿ ಅವರಿಗೆ ಬೋಧನೆ ಮಾಡಲು ಅವಕಾಶ ನೀಡುವುದು ಸೇರಿದಂತೆ ಕೈಗಾರಿಕೆಗಳಿಗೆ ಮಿತಿ ನೀಡಿ ಪರಿಸರ ಸಂರಕ್ಷಣೆ ಮಾಡುವುದು, ಸಾಹಿತ್ಯ, ಸಂಸ್ಕೃತಿ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕೆಂದರು.
ಹಲವು ಧೀಮಂತ ನಾಯಕರ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯ ಹೋರಾಟವೇ ರೋಚಕ ಕಥೆಯಾಗಿದೆ. ಸ್ವಾತಂತ್ರ್ಯ ನಂತರ ಡಾ| ಬಿ.ಆರ್. ಅಂಬೇಡ್ಕರ್ ಅವರು 66 ದೇಶಗಳ ಸಂವಿಧಾನ ಅಧ್ಯಯನ ಮಾಡಿ ಭಾರತಕ್ಕೆ ಸಹೋದರತ್ವ, ಸಹಬಾಳ್ವೆ, ಅಭಿವೃದ್ಧಿ, ರಾಷ್ಟ್ರೀಯ ಅಸ್ಮಿತೆಯಡಿ ಸಂವಿಧಾನ ಕೊಟ್ಟಿದ್ದಾರೆ. ನಮ್ಮದು ಜಾತ್ಯತೀತ ದೇಶವೆಂದು ಘೋಷಣೆಯಾಗಿದೆ. ದೇಶದಲ್ಲಿ ವಾಕ್ ಸ್ವಾತಂತ್ರ್ಯಕ್ಕೂ ಅವಕಾಶವಿದೆ. ಆದರೆ ಅಂತಹ ಸಂವಿಧಾನವನ್ನು ತಿದ್ದುತ್ತೇವೆ ಎನ್ನುವವರಿಗೆ ಏನ್ನೆನ್ನಬೇಕು ಎಂದು ಗುಡುಗಿದರು.