Advertisement

ಅಕ್ರಮ ಮರಳು ದಂಧೆಗೆ ಕಡಿವಾಣ ಎಂದು?

01:18 PM Jun 05, 2019 | Naveen |

ಕೊಪ್ಪಳ: ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮರಳು ಮಾಫಿಯಾಗೆ ಕಡಿವಾಣ ಇಲ್ಲವೆಂಬಂತಾಗಿದೆ. ಹಗಲಲ್ಲೇ ನಿರ್ಭಯವಾಗಿಯೇ ಮರಳು ಎತ್ತಿ ಸಾಗಿಸುತ್ತಿದ್ದರೂ ಪೊಲೀಸ್‌ ಇಲಾಖೆ ಮೌನವಾಗಿದೆ.

Advertisement

ತಾಲೂಕಿನ ಗೊಂಡಬಾಳ ಸೀಮಾದ ಬೂದಿಹಾಳ ಸೇತುವೆ ಬಳಿ ಅಕ್ರಮ ಮರಳು ದಂಧೆ ಜೋರಾಗಿ ನಡೆದಿದ್ದು, ಸೇತುವೆ ಪಕ್ಕದಲ್ಲೇ ಕಂದಕದ ರೀತಿಯಲ್ಲಿ ಬೃಹದಾಕಾರದ ತಗ್ಗು ತೆಗೆದು ಮರಳನ್ನು ಎತ್ತುವಳಿ ಮಾಡಲಾಗುತ್ತಿದೆ. ಹಳ್ಳದ ಎಡ, ಬಲ ಭಾಗದಲ್ಲಿ ಇಂದಿಗೂ ಅಲ್ಲಲ್ಲಿ ಸರ್ಕಾರಿ ಜಮೀನಿನಲ್ಲಿ ಮರಳು ದಂಧೆ ನಡೆಯುತ್ತಿದ್ದರೂ ಯಾವುದೇ ಕ್ರಮವಾಗುತ್ತಿಲ್ಲ. ಸರ್ಕಾರದ ಬೊಕ್ಕಸಕ್ಕೆ ಬರಬೇಕಾದ ಕೋಟಿಗಟ್ಟಲೆ ಹಣ ದಂಧೆಕೋರರ ಪಾಲಾಗುತ್ತಿದೆ.

ಜನಜೀವನ ಅಸ್ತವ್ಯಸ್ತ: ಮಿತಿ ಮೀರಿದ ಮರಳು ದಂಧೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮೊದಲೇ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬರದ ಛಾಯೆ ಹೆಚ್ಚಾಗುತ್ತಿದ್ದು, ಕೃಷಿ ಬದುಕು ದುಸ್ತರವಾಗುತ್ತಿದೆ. ಇದರ ಅರಿವಿದ್ದರೂ ಮರಳು ದಂಧೆಕೋರರು ಇದ್ಯಾವುದನ್ನು ಲೆಕ್ಕಿಸದೇ ತಮ್ಮ ಲಾಭಕ್ಕಾಗಿ ಸರ್ಕಾರಿ ಜಮೀನಿನಲ್ಲೇ ಹಗಲು-ರಾತ್ರಿ ಎನ್ನದೇ ಮರಳು ತುಂಬಿ ಮಾರಾಟ ಮಾಡುತ್ತಿದ್ದಾರೆ.

ಮಿತಿ ಮೀರಿದ ದಂಧೆಗೆ ಹಳ್ಳದ ನೀರನ್ನೇ ನೆಚ್ಚಿ ಕೃಷಿ ಮಾಡುತ್ತಿದ್ದ ಜನರ ಜೀವನಕ್ಕೆ ದಂಧೆಕೋರರು ಕೊಳ್ಳಿ ಇಡುತ್ತಿದ್ದಾರೆ. ಹಳ್ಳದ ನೀರು ಬತ್ತಿ ಹೋಗಿ ಬೆಳೆ ಒಣಗುತ್ತಿವೆ. ಹಳ್ಳದ ದಂಡೆಗಳಲ್ಲಿ ಕುಡಿಯಲು ನೀರೂ ಲಭಿಸುತ್ತಿಲ್ಲ. ಬೋರವೆಲ್ ವಿಫಲವಾಗುತ್ತಿವೆ.

ಪೊಲೀಸರ-ಅಧಿಕಾರಿಗಳ ಭಯವಿಲ್ಲ: ಈ ಹಿಂದೆ ಬೂದಿಹಾಳ ಸೇತುವೆ ಬಳಿ ತಹಶೀಲ್ದಾರ್‌ ನೇತೃತ್ವದಲ್ಲಿ ದಾಳಿ ನಡೆಸಿ 10ಲಕ್ಷ ರೂ. ನಷ್ಟು ಅಕ್ರಮ ಮರಳು ಸೀಜ್‌ ಮಾಡಲಾಗಿತ್ತು. ಆದರೆ, ಆ ಸ್ಥಳದಲ್ಲಿ ಸೀಜ್‌ ಮಾಡಿದ ಮರಳು ಇಲ್ಲವೇ ಇಲ್ಲ. ಮತ್ತೆ ಅದೇ ಸ್ಥಳದಲ್ಲೇ ಇನ್ನಷ್ಟು ಕಂದಕದಂತೆ ದಂಧೆಕೋರರು ಮರಳು ಎತ್ತಿ ಸಾಗಿಸುತ್ತಿದ್ದಾರೆ. ದಂಧೆಕೋರರಿಗೆ ಅಧಿಕಾರಿಗಳ, ಪೊಲೀಸರ ಭಯವೇ ಇಲ್ಲವಾಗಿದೆ.

Advertisement

ಮರಳು ಲಾರಿ ಸಿಕ್ಕಾಗ ಕೇಸ್‌ ಮಾಡ್ತಾರೆ. ದಂಡ ಹಾಕ್ತಾರೆ. ಮತ್ತೆ ವಾಹನ ಬಿಟ್ಟು ಬಿಡ್ತಾರೆ ಎನ್ನುವ ಉತ್ತರಗಳು ಸಾಮಾನ್ಯವಾಗುತ್ತಿವೆ. ಹೀಗಾಗಿ ಕುಳಗಳಿಗೆ ಯಾರ ಭಯವೂ ಇಲ್ಲವೆನೋ ಎನ್ನುವ ಪ್ರಶ್ನೆ ಕಾಡುತ್ತಿದೆ.

ಇದು ಕೇವಲ ಬೂದಿಹಾಳ ಸೇತುವೆ ಬಳಿ ಅಷ್ಟೇ ಅಲ್ಲ ಜಿಲ್ಲೆಯಾದ್ಯಂತ ಹಳ್ಳದ ತಾಣದಲ್ಲಿ ಯತೇಚ್ಛವಾಗಿ ಈ ದಂಧೆ ನಡೆಯುತ್ತದೆ. ಜಿಲ್ಲೆಯಲ್ಲಿ ಸರ್ಕಾರಿ ಮರಳು ಸಂಗ್ರಹಣಾ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದಾಗಿ ಉದ್ದೇಶಪೂರ್ವಕವೇ ಮರಳು ಅಭಾವ ಸೃಷ್ಟಿ ಮಾಡಿ ದಂಧೆಕೋರರು ಮಾಫಿಯಾದಲ್ಲಿ ಮುಳುಗಿದ್ದಾರೆ.

ಒಟ್ಟಿನಲ್ಲಿ ಅಕ್ರಮ ಮರಳು ದಂಧೆಯಿಂದ ಜಿಲ್ಲೆಯ ಜನಜೀವನ ತಲ್ಲಣಗೊಂಡಿದೆ. ಕೃಷಿ ಬದುಕು ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ನೋಡಿಯೂ ನೋಡದಂತಿದ್ದರೆ ಇಂತಹ ದಂಧೆಗೆ ಕಡಿವಾಣ ಇಲ್ಲದಂತಾಗುತ್ತದೆ.

ಜಿಲ್ಲೆಯ ವಿವಿಧೆಡೆ ಮರಳು ಅಕ್ರಮದ ಕುರಿತು ದೂರುಗಳು ಕೇಳಿ ಬರುತ್ತಿವೆ. ನಾವೂ ಸಹಿತ ಹಲವೆಡೆ ದಾಳಿ ನಡೆಸಿ ದಂಡ ವಿಧಿಸಿ ಪ್ರಕರಣ ದಾಖಲಿಸುತ್ತಿದ್ದೇವೆ. ಬೂದಿಹಾಳ ಬಳಿ ಮರಳು ದಂಧೆ ಈ ಹಿಂದೆ ನಡೆದಿದ್ದು, ಅಲ್ಲಿನ ಮರಳು ಸೀಜ್‌ ಮಾಡಿ ನಿರ್ಮಿತಿ ಕೇಂದ್ರಕ್ಕೆ ಹಂಚಿಕೆ ಮಾಡಿದೆ. ಮತ್ತೆ ಮರಳು ದಂಧೆ ನಡೆದ ಬಗ್ಗೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ಮುಂದೆ ಮರಳು ದಂಧೆಯಲ್ಲಿ ತೊಡಗಿದ ವಾಹನಗಳು ಪತ್ತೆಯಾದಲ್ಲಿ ಸೀಜ್‌ ಮಾಡುವ ಯೋಚನೆ ಮಾಡುತ್ತಿದ್ದೇವೆ.
ಪಿ.ಸುನೀಲ್ ಕುಮಾರ,
ಜಿಲ್ಲಾಧಿಕಾರಿ, ಕೊಪ್ಪಳ

Advertisement

Udayavani is now on Telegram. Click here to join our channel and stay updated with the latest news.

Next