ಕೊಪ್ಪಳ: ನಗರದ ಸಜ್ಜಿ ಹೊಲದಲ್ಲಿ ಹಲವು ವರ್ಷಗಳಿಂದ ವಾಸ ಮಾಡುತ್ತಿರುವ 25 ಹಕ್ಕಿಪಿಕ್ಕಿ ಕುಟುಂಬಕ್ಕೆ ಜಿಲ್ಲಾಡಳಿತ, ಸರ್ಕಾರ ಶಾಶ್ವತ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಎಂದು ಜಿಲ್ಲಾ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ನಗರಾಭಿವೃದ್ಧಿ ಕೋಶದ ಅಧಿಕಾರಿಗೆ ಮನವಿ ಸಲ್ಲಿಸಿದೆ.
ಸಜ್ಜಿ ಹೊಲದಲ್ಲಿನ ಸ್ಥಳಕ್ಕೆ ಜಿಲ್ಲಾ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಭೇಟಿ ನೀಡಿ ಅಲ್ಲಿನ ಜನರ ಬದಲಾವಣೆಗೆ, ಜಾಗೃತಿಗೆ ಸಮೀಕ್ಷೆ ಕೈಗೊಂಡಿದ್ದು, ಸರಕಾರ ಮಟ್ಟದಲ್ಲಿ ಕೆಲಸ ಮಾಡಲು ನಿರ್ಧರಿಸಿದೆ.
ನಗರದ 12ನೇ ವಾರ್ಡ್‌ನಲ್ಲಿ ಹಕ್ಕಿಪಿಕ್ಕಿ ಸಮುದಾಯವು ಯಾವುದೋ ಒಂದು ಕಾಡಿನಲ್ಲಿ ಬದುಕು ಸಾಗಿಸುವ ರೀತಿಯಲ್ಲಿ ಜೀವನ ನಡೆಸುತ್ತಿದೆ. ಇಲ್ಲಿನ ಜನಾಂಗದ ಬದುಕು ಹಸನ ಮಾಡಲು ತುರ್ತಾಗಿ ಈ ಕೆಲಸಗಳು ಆಗಬೇಕಿದ್ದರೆ ಈ ಎಲ್ಲ ಕುಟುಂಬಗಳಿಗೆ ಅವರು ವಾಸಿಸುತ್ತಿರುವ ಸ್ಥಳದಲ್ಲಿಯೇ ಅವರಿಗೆ ಪಕ್ಕಾ ಮನೆ ನಿರ್ಮಾಣ ಮಾಡಿಕೊಡಬೇಕು. ಸ್ವಚ್ಛ ಭಾರತ್ ಮಿಷನ್ ಅಥವಾ ಇತರೆ ಯೋಜನೆಯಲ್ಲಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಮಾಡಿಕೊಡಬೇಕು. ಇಲ್ಲಿನ 23 ಮಕ್ಕಳು ಕೊಟಗಾರಗೇರಾ ಸ.ಹಿ.ಪ್ರಾ. ಶಾಲೆಯಲ್ಲಿ ಓದುತ್ತಿದ್ದು, ಕೆಲವರನ್ನು ಹೊರತುಪಡಿಸಿ ಉಳಿದ ಮಕ್ಕಳು ನಿರಂತರ ಶಾಲೆಗೆ ಗೈರು ಹಾಜರಾಗಿದ್ದಾರೆ. ಅವರ ಶಿಕ್ಷಣ ತುಂಬಾ ಕೆಳಹಂತದಲ್ಲಿದೆ. ಅವರಿಗೆ ಅವಶ್ಯವಿದ್ದಲ್ಲಿ, ಹಾಸ್ಟೆಲ್ ಅನುಕೂಲ ಮಾಡಿಕೊಡಬೇಕು. ಉಚಿತ ವಿದ್ಯುತ್ ಸಂಪರ್ಕ, ಉಜ್ವಲ್ ಸೌಲಭ್ಯ, ಈ ಸ್ಥಳಕ್ಕೆ ಸಂಪರ್ಕ ರಸ್ತೆ ಮತ್ತು ಅಲ್ಲಿ ಕಾಂಕ್ರೀಟ್ ಚರಂಡಿ ಮತ್ತು ರಸ್ತೆ ನಿರ್ಮಾಣ ಮಾಡಿಕೊಡಬೇಕು. ಇಲ್ಲಿನ ಸಮುದಾಯಕ್ಕೆ ಉತ್ತಮ ತರಬೇತಿ ಕೊಡಿಸಿ, ಉದ್ಯೋಗ ನೀಡಲು ಸಾಲ ಸೌಲಭ್ಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ನಗರಾಭಿವೃದ್ಧಿ ಕೋಶದ ಕೃಷ್ಣಪ್ಪ ಅವರಿಗೆ ಮನವಿಯಲ್ಲಿ ಸಲ್ಲಿಸಲಾಯಿತು.ಈ ವೇಳೆ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಮುಖ್ಯಸ್ಥೆ ಜ್ಯೋತಿ ಮಂಜುನಾಥ ಗೊಂಡಬಾಳ, ಸರೋಜಾ ಬಾಕಳೆ, ವಿಜಯಲಕ್ಷ್ಮೀ ಗುಳೇದ್, ಅಜುಮುನ್ನಿಸಾ ಬೇಗಂ, ಶಿವಲೀಲಾ ಹಿರೇಮಠ, ಸಲೀಮಾ ಜಾನ್, ಮಲ್ಲಪ್ಪ ಹಡಪದ, ಬಸವರಾಜ ದೇಸಾಯಿ, ಲತಾ ಕಲ್ಲೇಶ್ ಇತರರಿದ್ದರು.
ಸಜ್ಜಿ ಹೊಲಕ್ಕೆ ಅಧಿಕಾರಿಗಳು ಭೇಟಿ
ಹಕ್ಕಿಪಿಕ್ಕಿ ಸಮುದಾಯವು ತೀರಾ ಕೆಳ ಹಂತದ ಜೀವನ ಸಾಗಿಸುತ್ತಿರುವ ಹಿನ್ನೆಲೆಯಲ್ಲಿ ಮೌಡ್ಯ ಆಚರಣೆ ಈ ಸಮುದಾಯದಲ್ಲಿ ಇನ್ನೂ ಜೀವಂತವಿರುವ ಕುರಿತು ಮಾಧ್ಯಮದಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ. ಕಲ್ಲೇಶ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ, ಹಲವು ಕುಟುಂಬಕ್ಕೆ ಸರ್ಕಾರದ ಸೌಲಭ್ಯ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಮಕ್ಕಳನ್ನು ಶಾಲೆಗೆ ದಾಖಲಿಸಿ ಶಿಕ್ಷಣ ಕೊಡಿಸಬೇಕೆಂದು ಸೂಚನೆ ನೀಡಿದರು. ಅಲ್ಲದೇ, ಹಕ್ಕಿಪಿಕ್ಕಿ ಸಮುದಾಯ ಸೌಲಭ್ಯ ಪಡೆಯಬೇಕೆಂದು ಸೂಚನೆ ನೀಡಿದರು. ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಅಮರೇಶ ಕಡಗದ, ಸುಬಾನ್ ಸೈಯದ್, ಶಿವಕುಮಾರ ಇದ್ದರು.