Advertisement

ಡಿಎಚ್‌ಒ ಸಹಿ ನಕಲು ಮಾಡಿದ ಗುತ್ತಿಗೆ ಸಿಬ್ಬಂದಿ!

04:01 PM Apr 03, 2019 | |

ಕೊಪ್ಪಳ: ಜಿಲ್ಲಾ ಸರ್ವೇಕ್ಷಣಾ ಕಚೇರಿಯಲ್ಲಿ ಅರೆಕಾಲಿಕ ಗುತ್ತಿಗೆ ಮಹಿಳೆಯು ಡಿಎಚ್‌ಒ ಅವರ ಸಹಿಯನ್ನೇ ನಕಲು ಮಾಡಿ ಡಿಎಚ್‌ಒ ಅವರಿಗೆ ರವಾನೆ ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಆ ಮಹಿಳೆಯ ವಿರುದ್ಧ ಕೊಪ್ಪಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ, ಡಿಎಚ್‌ಒ ಅವರು ಈ ಪ್ರಕರಣದ ಸಂಪೂರ್ಣ ತನಿಖೆಗೆ ಶಿಫಾರಸು ಮಾಡಿದ್ದಾರೆ.

Advertisement

ಹೌದು.. ಜಿಲ್ಲಾ ಸರ್ವೇಕ್ಷಣಾ ಕಚೇರಿಯಲ್ಲಿ ಕಳೆದ ಹಲವು ವರ್ಷಗಳಿಂದ ಅರೆಕಾಲಿಕ ಗುತ್ತಿಗೆ ಆಧಾರದಡಿ ಡಿಎಫ್‌ಎಲ್‌ಸಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ತನುಜಾ ಕಬಾಡೆ ಎನ್ನುವ ಮಹಿಳೆ ಮೇಲೆಯೇ ನಕಲು ಸಹಿ ಮಾಡಿದ ಆರೋಪದಡಿ ಡಿಎಚ್‌ಒ ಡಾ.ರಾಜಕುಮಾರ ಅವರು ಪ್ರಕರಣ ದಾಖಲಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಗೆ ಪ್ರತಿ ವರ್ಷ ಹಲವು ಯೋಜನೆಗಳನ್ನು ಜಾರಿ ಮಾಡಿ ಕಾರ್ಯಕ್ರಮ ಸೇರಿದಂತೆ ತರಬೇತಿ ಹಮ್ಮಿಕೊಳ್ಳಲು ಅನುದಾನ ಬಿಡುಗಡೆ ಮಾಡುತ್ತದೆ. ಜಿಲ್ಲಾ ಆರೋಗ್ಯ ಇಲಾಖೆಯಡಿ ನಡೆಯುವ ಜಿಲ್ಲಾ ಸರ್ವೇಕ್ಷಣಾ ಕಚೇರಿಯಲ್ಲಿ 2018-19ನೇ ಸಾಲಿನಲ್ಲಿ ಐಡಿಎಸ್‌ಪಿ ಹಾಗೂ ಡಿಪಿಎಚ್‌ಎಲ್‌ ಕಾರ್ಯಕ್ರಮದಡಿ ಸಾಮಗ್ರಿ ಖರೀದಿಗೆ ಸಂಬಂ ಧಿಸಿದಂತೆ 31-11-2018ರಂದು ಡಿಎಚ್‌ಒ ಸಹಿತ ಆಧಾರಿತ ಆದೇಶ ಮಾಡಲಾಗಿದೆ. ಆದರೆ ಇದೊಂದು ನಕಲು ಸಹಿ ಎಂಬುದು ಬೆಳಕಿಗೆ ಬಂದಿದೆ.

ಡಿಎಚ್‌ಒ ಅವರಿಂದಲೇ ಬಯಲು: ಪ್ರಸ್ತುತ ಡಿಎಚ್‌ಒ ಅವರು ಡಾ.ರಾಜಕುಮಾರ ಯರಗಲ್‌ ಅವರು ಕಾರ್ಯ ನಿರ್ವಹಿಸುತ್ತಿದ್ದು, ಅವರು 2018ರ ಡಿಸೆಂಬರ್‌ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾಗಿ ಸೇವೆ ಆರಂಭಿಸಿದ್ದಾರೆ. ಆದರೆ, ಅವರು ಸೇವೆಗೆ ಹಾಜರಾಗುವ ಮುನ್ನವೇ ಅವರ ಹೆಸರಿನಡಿ ಆದೇಶ ಹೊರ ಬಂದಿದೆ. ಮಾರ್ಚ್‌ ಅಂತ್ಯದ ಅವ ಧಿಗಾಗಿ ಲೆಕ್ಕ ಪತ್ರಕ್ಕೆ ಸಂಬಂಧಿಸಿದಂತೆ ಈ ಕಡತ ಡಿಎಚ್‌ಒ ಅವರ ಮುಂದೆ ಪರಿಶೀಲನೆಗೆ ಬಂದಾಗ ಸ್ವತಃ ಡಾ.ರಾಜಕುಮಾರ ಅವರಿಗೆ ಅಚ್ಚರಿಯಾಗಿದೆ. ಸೇವೆಗೆ ಹಾಜರಾಗುವ ಮುನ್ನವೇ ಕಡತದಲ್ಲಿ ತಮ್ಮ ಸಹಿ ಇರುವ ಬಗ್ಗೆ ಅನುಮಾನಗೊಂಡು ವಿಚಾರಣೆ ಆರಂಭಿಸಿದಾಗ ಏನೋ ನಡೆದಿದ್ದು ಪಕ್ಕಾ ಆದ ಬಳಿಕವೇ ಡಿಎಚ್‌ಒ ಅವರು ಗುತ್ತಿಗೆ ನೌಕರ ತನುಜಾ ಕಂಬಾಡೆ ಅವರ ಮೇಲೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಡಾ.ಎಂ.ಎಂ.ಕಟ್ಟಿಮನಿ ಸುತ್ತ ಅನುಮಾನ?: ಹಲವು ವರ್ಷಗಳಿಂದ ಜಿಲ್ಲಾ ಸರ್ವೇಕ್ಷಣಾಧಿಕಾರಿಯಾಗಿ ಡಾ.ಎಂ.ಎಂ. ಕಟ್ಟಮನಿ ಅವರು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಯಾವುದೇ ಕಡತಗಳು ಡಿಎಚ್‌ಒ ಅವರ ಟೇಬಲ್‌ಗೆ ರವಾನೆಯಾಗುವ ಮೊದಲು ಸರ್ವೇಕ್ಷಣಾಧಿ ಕಾರಿಯ ಗಮನಕ್ಕೆ ತಂದು ಅವರ ಸಹಿ ಪಡೆದ ಬಳಿಕವೇ ಪಾಸ್‌ ಆಗಬೇಕಿದೆ. ಆದರೆ ಅವರೂ ಸಹಿತ ಈ ಬಗ್ಗೆ ಯಾವುದೇ ಕಾಳಜಿ ಕೊಟ್ಟಂತೆ ಕಾಣುತ್ತಿಲ್ಲ. ಕಟ್ಟಮನಿ ಅವರ ಗಮನಕ್ಕೆ ಬಾರದೇ ಇದೆಲ್ಲವೂ ನಡೆಯಲು ಸಾಧ್ಯವಿಲ್ಲ ಎನ್ನುವ ಮಾತು ಕೇಳಿ ಬಂದಿವೆ. ಹಾಗಾಗಿ ಅವರ ಸುತ್ತಲೂ ಅನುಮಾನದ ಹುತ್ತ ಬೆಳೆದಿದೆ.

Advertisement

ಪ್ರಕರಣದ ಪೂರ್ಣ ತನಿಖೆಗೆ ಶಿಫಾರಸು: ಡಿಎಚ್‌ಒ ಡಾ.ರಾಜಕುಮಾರ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ಹಂತದಲ್ಲಿ ಸಂಪೂರ್ಣ ತನಿಖೆ ನಡೆಸಲು ಸಮಿತಿ ರಚಿಸಿ ಶಿಫಾರಸು ಮಾಡಿದ್ದಾರೆ. ಅಲ್ಲದೇ, ಈ ಕಾರ್ಯಕ್ರಮ ಆರಂಭವಾದಾಗಿನಿಂದ ಈವರೆಗೂ ನಡೆದ ಕಡತಗಳ ವಹಿವಾಟಿನ ಬಗ್ಗೆ ಪರಿಶೀಲನೆ ನಡೆಸಲೂ ಸೂಚನೆ ನೀಡಿದ್ದಾರೆ. ಹೀಗಾಗಿ ಇಲಾಖೆ ಹಂತದಲ್ಲಿ ಭಾರೀ ನಡುಕ ಶುರುವಾಗಿದ್ದು, ಪ್ರಕರಣ ಯಾವ ಹಂತಕ್ಕೆ ತಿರುಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಜಿಲ್ಲಾ ಸರ್ವೇಕ್ಷಣಾ ಕಚೇರಿಯಲ್ಲಿ ನನ್ನ ಸಹಿ ನಕಲು ಆಗಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಅರೆಕಾಲಿಕ ಗುತ್ತಿಗೆ ನೌಕರಳ ಮೇಲೆ ಪ್ರಕರಣ ದಾಖಲಿಸಿದ್ದೇನೆ. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ನಡೆಸಲು ಸಮಿತಿ ರಚಿಸಿ ಶಿಫಾರಸು ಮಾಡಿದ್ದು, ಡಿಸಿ ಸೇರಿದಂತೆ ಸರ್ಕಾರಕ್ಕೆ ಮಾಹಿತಿ ನೀಡಿದ್ದೇನೆ. ತನಿಖೆಯ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.
.ಡಾ.ರಾಜಕುಮಾರ ಯರಗಲ್‌,
ಡಿಎಚ್‌ಒ, ಕೊಪ್ಪಳ

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next