ಕೊಪ್ಪಳ: ಜಿಲ್ಲೆಯಲ್ಲಿ ಸಾರಿಗೆ ನೌಕರರ ಮುಷ್ಕರವು 3ನೇ ದಿನಕ್ಕೆ ಕಾಲಿಸಿದೆ. ಕೇವಲ ಮೂರೇ ದಿನದಲ್ಲಿ ಬರೊಬ್ಬರಿ 1.20 ಕೋಟಿ ರೂ.ನಷ್ಟು ಅಂದಾಜು ಸಾರಿಗೆ ಘಟಕಕ್ಕೆ ಆದಾಯ ಬರುವುದು ನಷ್ಟವಾಗಿದೆ. ಇನ್ನೂ ಕರ್ತವ್ಯಕ್ಕೆ ಹಾಜರಾಗದ ಐವರು ತರಬೇತಿ ನೌಕರರಿಗೆ ವಿಭಾಗೀಯ ನಿಯಂತ್ರಣಾ ಧಿಕಾರಿಗಳು ಶೋಕಾಸ್ ನೋಟಿಸ್ ಜಾರಿಗೊಳಿಸಿ ಕರ್ತವ್ಯಕ್ಕೆ ಹಾಜರಾಗುವಂತೆಯೂ ಸೂಚನೆ ನೀಡಿದ್ದಾರೆ.
ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ಸಡಿಲಗೊಳಿಸುತ್ತಿಲ್ಲ. ಇತ್ತ ಸರ್ಕಾರವೂ ನೌಕರ ಮುಷ್ಕರಕ್ಕೆ ಸೊಪ್ಪು ಹಾಕದೇ ಖಾಸಗಿ ವಾಹನಗಳ ಓಡಾಟಕ್ಕೆ ಒತ್ತು ನೀಡುತ್ತಿದ್ದಾರೆ. ಇಬ್ಬರ ನಡುವೆ ಪ್ರಯಾಣಿಕರು ತೊಂದರೆ ಅನುಭವಿಸುವಂತ ಪರಿಸ್ಥಿತಿ ಎದುರಾಗಿದೆ.
1.20 ಕೋಟಿ ರೂ.ನಷ್ಟು ನಷ್ಟ: ಸಾರ್ವತ್ರಿಕ ದಿನಗಳಲ್ಲಿ ಸಾರಿಗೆ ಘಟಕಕ್ಕೆ ಪ್ರತಿ ದಿನ ಬಸ್‌ಗಳ ಓಡಾಟದ ಆಧಾರದ ಮೇಲೆ 40 ಲಕ್ಷ ರೂ. ಆದಾಯ ಬರುತ್ತಿತ್ತು. ಆದರೆ ಕಳೆದ ಮೂರು ದಿನಗಳಿಂದ ಮುಷ್ಕರ ಮುಂದುವರೆದ ಹಿನ್ನೆಲೆಯಲ್ಲಿ ಘಟಕಕ್ಕೆ 1.20 ಕೋಟಿ ರೂ.ನಷ್ಟು ಆದಾಯ ಬರುವುದು ನಷ್ಟವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಾರಿಗೆಯ ನೌಕರರಿಗೆ ವೇತನ ಮಾಡುವುದು ತುಂಬ ಸಂಕಷ್ಟ ಎದುರಿಸುವಂತ ಪರಿಸ್ಥಿತಿಯೂ ಎದುರಾಗಲಿದೆ.
17 ಸಾರಿಗೆ ಬಸ್‌ಗಳ ಓಡಾಟ: ಮುಷ್ಕರ ಆರಂಭದ ದಿನದಂದು ಯಾವ ಸರ್ಕಾರಿ ಬಸ್‌ಗಳು ಓಡಾಟ ನಡೆಸಲಿಲ್ಲ. ಆದರೆ ಅ ಧಿಕಾರಿಗಳ ಒತ್ತಡದ ತಂತ್ರಕ್ಕೆ ಕೆಲವು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕ್ರಮೇಣ ಒಬ್ಬೊಬ್ಬರೆ ಕೆಲಸಕ್ಕೆ ಹಾಜರಾಗಿ ಬಸ್ ಗಳನ್ನು ಓಡಿಸುತ್ತಿದ್ದಾರೆ. ಶುಕ್ರವಾರದಂದು ಜಿಲ್ಲೆಯಾದ್ಯಂತ 17 ಬಸ್‌ಗಳು ಓಡಾಟ ನಡೆಸಿವೆ. ಈ ಪೈಕಿ ಕೊಪ್ಪಳ ತಾಲೂಕಿನಲ್ಲಿ 7 ಬಸ್‌ಗಳು ಓಡಾಟ ನಡೆಸಿದರೆ, ಗಂಗಾವತಿ ತಾಲೂಕಿನಲ್ಲಿ 6 ಬಸ್‌ಗಳು, ಕುಷ್ಟಗಿ ತಾಲೂಕಿನಲ್ಲಿ 3 ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಕೇವಲ 01 ಬಸ್ ಮಾತ್ರ ಸಂಚಾರ ಮಾಡಿದೆ.
5 ತರಬೇತಿ ನೌಕರರಿಗೆ ನೋಟಿಸ್: ಅಧಿಕಾರಿಗಳು ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಹೇಳುತ್ತಿದ್ದರೂ ಯಾರೂ ಬರುತ್ತಿಲ್ಲ. ಹೀಗಾಗಿ ಕೊಪ್ಪಳ ವಿಭಾಗೀಯ ನಿಯಂತ್ರಣಾ ಧಿಕಾರಿಗಳು ತರಬೇತಿ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು. ಐವರು ಸಾರಿಗೆ ನೌಕರರ ಮುಷ್ಕರದಲ್ಲಿ ತೊಡಗಿದ್ದು, ನಿಗಮದ ಸಮ್ಮತಿ ಇಲ್ಲದೇ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದ್ದೀರಾ. ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ನೋಟಿಸ್ ಜಾರಿಗೊಳಿಸಿದ್ದಾರೆ. ನೋಟಿಸ್ ತಲುಪಿದ ತಕ್ಷಣವೇ ಕರ್ತವ್ಯಕ್ಕೆ ಬಾರದಿದ್ದರೆ ನಿಮ್ಮನ್ನು ಯಾವುದೇ ಮುನ್ಸೂಚನೆ ಇಲ್ಲದೇ ಕೆಲಸದಿಂದ ತೆಗೆದು ಹಾಕಲಾಗುವುದು ಎಂದು ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.