ಕುಷ್ಟಗಿ: ಸಿಎಂ ಯಡಿಯೂರಪ್ಪ ಅವರು, ಗೊಲ್ಲ ಸಮುದಾಯದ ಕುಲಶಾಸ್ತ್ರ ಅಧ್ಯಯನದ ಬಗ್ಗೆ ಪ್ರಸ್ತಾಪಿಸಿರುವುದು ಗೊಲ್ಲ ಸಮಾಜವನ್ನು ಎಸ್ಟಿ ಮೀಸಲಾತಿಗೆ ಸೇರಿಸಬಾರದು ಎನ್ನುವ ದುರುದ್ದೇಶದ ಹಿನ್ನೆಲೆ ಇದೆ ಎಂದು ಚಿತ್ರದುರ್ಗ ಜಿಲ್ಲೆ ಹೊಳೆಲ್ಕೆರೆ ಮಾಜಿ ಶಾಸಕ ಉಮಾಪತಿ ಆರೋಪಿಸಿದರು.
ಮಸ್ಕಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೈಸೂರು ವಿಶ್ವ ವಿದ್ಯಾಲಯದ ಪ್ರೊ| ಅನಪೂರ್ಣಮ್ಮ ಅವರು, ಗೊಲ್ಲ ಸಮುದಾಯ ಬುಡಕಟ್ಟು ಸಂಸ್ಕೃತಿ, ಗೊಲ್ಲರ ವಾಸ್ತವ ಸ್ಥಿತಿ ಹಿನ್ನೆಲೆಯಲ್ಲಿ ಕುಲಶಾಸ್ತ್ರದ ಅಧ್ಯಯನದ ವರದಿ ಹಿಂದಿನ ಸಿಎಂ ಸಿದ್ದರಾಮಯ್ಯ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಹೀಗಿರುವಾಗ ಸಿಎಂ ಯಡಿಯೂರಪ್ಪ ಅವರು, ಮತ್ತೆ ಕುಲಶಾಸ್ತ್ರ ಅಧ್ಯಯನದ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಆ ರೀತಿಯಾದರೆ ಮತ್ತೆ ಹತ್ತಾರು ವರ್ಷ ಹಿನ್ನಡೆಯಾಗಿ, ಈ ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಸೇರಿಸದೇ ಈ ಸಮಾಜವನ್ನು ಒಡೆದು ಆಳುವ ನೀತಿಯ ಕಳವಳ ವ್ಯಕ್ತಪಡಿಸಿದರು.
ಬಿಜೆಪಿ ಸ್ವಾರ್ಥ ರಾಜಕಾರಣಕ್ಕೆ ಗೊಲ್ಲ ಸಮುದಾಯವನ್ನು ವಿಭಜಿಸಲು ಯತ್ನಿಸಿರುವುದು ಗೊಲ್ಲ ಸಮಾಜಕ್ಕೆ ನೋವಿದೆ. ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ 15ರಿಂದ 20 ಸಾವಿರ ಗೊಲ್ಲ ಸಮುದಾಯದ ಮತದಾರರಿದ್ದಾರೆ. ಕುರಿ, ದನ ಕಾಯುವ ಜೀವನೋಪಾಯಕ್ಕೆ ಈ ಗೊಲ್ಲರನ್ನು ಕುರಬರು ಎಂದೇ ಗುರುತಿಸಿಕೊಂಡಿದ್ದಾರೆ.
ಗೊಲ್ಲರನ್ನು ಕುರುಬರು, ಕುರಬರನ್ನು ಗೊಲ್ಲರು ಎನ್ನಲಾಗುತ್ತಿದೆ. ಮಸ್ಕಿ ಕ್ಷೇತ್ರದಲ್ಲಿ ಮಲ್ಲಾಪುರ ಬೆಟ್ಟದ ತಪ್ಪಲಿನಲ್ಲಿ 20ರಿಂದ 30 ಮನೆಗಳಿದ್ದು, ಈ ಜನ ವಸತಿ ದಾರಿಯೇ ಇಲ್ಲ. ಅಂತಹ ಕನಿಷ್ಠ ಪರಿಸ್ಥಿತಿಯಲ್ಲಿರುವುದು ಕಂಡು ಬರುತ್ತದೆ. ಅಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗೊಲ್ಲ ಸಮುದಾಯದ ಮನೋಭಾವ ಪ್ರಕಾರ ಕಾಂಗ್ರೆಸ್ ಪಕ್ಷದಲ್ಲಿ ಒಂದಿಷ್ಟು ಸೌವಲತ್ತು ಬಿಟ್ಟರೆ ಬಿಜೆಪಿಯಲ್ಲಿ ಏನೂ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದಾರೆ.
ಈ ಮಸ್ಕಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿ ಕಾರಕ್ಕೆ ಬರುವುದು ಖಚಿತ. ಗೊಲ್ಲ ಸಮುದಾಯದ ಬೇಡಿಕೆಗಳನ್ನು ಈಡೇರಲಿವೆ ಎಂದರು.