Advertisement

ಹೊಸ ತಾಲೂಕು ಕಚೇರಿಗೇ ನೆಲೆಯಿಲ್ಲ

03:45 PM Sep 28, 2019 | Naveen |

„ದತ್ತು ಕಮ್ಮಾರ
ಕೊಪ್ಪಳ: ಈ ಹಿಂದಿನ ಬಿಜೆಪಿ ಹಾಗೂ ಕಾಂಗ್ರೆಸ್‌ ಸರ್ಕಾರಗಳು ಜಿಲ್ಲೆಯಲ್ಲಿ ಮೂರು ಹೊಸ ತಾಲೂಕುಗಳನ್ನು ಘೋಷಣೆ ಮಾಡಿವೆ. ಆದರೆ ಅಭಿವೃದ್ಧಿ ಮಾತ್ರ ಮರಿಚಿಕೆಯಾದೆ. ವರ್ಷ ಕಳೆದರೂ ಹೊಸ ತಾಲೂಕು ಕಚೇರಿಗಳಿಗೆ ಸ್ವಂತ ನೆಲೆಗಾಗಿ ಭೂಮಿ ಹುಡುಕಾಟದಲ್ಲಿಯೇ ಕಾಲಹರಣ ಮಾಡಲಾಗುತ್ತಿದೆ. ಇನ್ನೂ ವಿವಿಧ ಇಲಾಖೆಗಳು ಅತಂತ್ರವಾಗಿ ಸುತ್ತಾಡುತ್ತಿವೆ. ಮೂರು ತಾಲೂಕಿಗೆ ಒಬ್ಬೊಬ್ಬ ತಹಶೀಲ್ದಾರ್‌ರನ್ನ ನೇಮಕ ಮಾಡಿದ್ದು, ಬಿಟ್ಟರೆ ಉಳಿದೆಲ್ಲ ಹುದ್ದೆ ಖಾಲಿಯಾಗಿವೆ.

Advertisement

ಅನುದಾನವಂತೂ ಕನಸಿನ ಮಾತಾಗಿದೆ. ಹೌದು. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಿಎಂ ಜಗದೀಶ ಶೆಟ್ಟರ್‌ ಹಾಗೂ ಕಾಂಗ್ರೆಸ್‌ ಸರ್ಕಾರದಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಹೊಸ ತಾಲೂಕು ಘೋಷಣೆ ಮಾಡಿದರು.

ಅದರಲ್ಲಿ ಕೊಪ್ಪಳ ಜಿಲ್ಲೆಯ ಕಾರಟಗಿ, ಕನಕಗಿರಿ ಹಾಗೂ ಕುಕನೂರು ಹೊಸ ತಾಲೂಕು ಎಂಬ ಹೆಗ್ಗಳಿಕೆ ಪಡೆದಿವೆ. ಆದರೆ ಇವು ಹೆಸರಿಗೆ ಮಾತ್ರ ತಾಲೂಕುಗಳು ಎಂಬ ಹಣೆಪಟ್ಟಿ ಪಡೆದುಕೊಳ್ಳುತ್ತಿವೆ. ಕಚೇರಿ ನಿರ್ವಹಣೆಗೆ ಬರಿ 5 ಲಕ್ಷ: ಮೊದಲಿದ್ದ ನಾಲ್ಕು ತಾಲೂಕಿನಲ್ಲಿನ ಹೋಬಳಿಗಳನ್ನೇ ವಿಂಗಡಣೆ ಮಾಡಿ ರಾಜಕೀಯ ಲೆಕ್ಕಾಚಾರ ಹಾಗೂ ಭೌಗೋಳಿಕವಾಗಿ ತುಲನೆ ಮಾಡಿ ಕ್ಷೇತ್ರಕ್ಕೆ ಧಕ್ಕೆಯಾಗದಂತೆ ಕನಕಗಿರಿ, ಕಾರಟಗಿ ಹಾಗೂ ಕುಕನೂರು ಹೊಸ ತಾಲೂಕೆಂದು ಹೆಸರು ಪಡೆದಿವೆ. ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಘೋಷಣೆಯಾದ ತಾಲೂಕಿಗೆ ಅನುದಾನ ಕೊಡುವುದನ್ನೇ ಮರೆತಿದ್ದಾರೆ. 2018ರ ನ. 14ರಂದು ಆಗಿನ ಸರ್ಕಾರ ಪ್ರತಿ ತಾಲೂಕುಗಳ ಕಾರ್ಯಾರಂಭಕ್ಕೆ 5 ಲಕ್ಷ ರೂ. ಅನುದಾನ ಕೊಟ್ಟಿದ್ದು ಬಿಟ್ಟರೆ ಈವರೆಗೂ ನಯಾಪೈಸೆ ನೀಡಿಲ್ಲ. ಇಷ್ಟು ಹಣ ಯಾವುದಕ್ಕೂ ಸಾಲದು ಎನ್ನುತ್ತಿದೆ ಅಧಿಕಾರಿ ವರ್ಗ.

ಮೂರು ತಾಲೂಕು ಕಚೇರಿ ಆರಂಭ: ಜಿಲ್ಲೆಯಲ್ಲಿನ ಮೂರು ಹೊಸ ತಾಲೂಕುಗಳ ಅನುಷ್ಠಾನ ಮಾಡಿದೆ. ಕುಕನೂರು ತಾಲೂಕು ಕಚೇರಿ ಸಮುದಾಯ ಭವನದಲ್ಲಿ ನಡೆಯುತ್ತಿದ್ದರೆ, ಕಾರಟಗಿ ಎಂಪಿಎಂಸಿ ಕಟ್ಟಡದಲ್ಲಿ ತನ್ನ ಕಾರ್ಯ ಆರಂಭಿಸಿದೆ. ಇನ್ನೂ ಕನಕಗಿರಿ ತಾಲೂಕು ಕಚೇರಿ ಕನಕಾಚಲಪತಿ ದೇವಸ್ಥಾನದಲ್ಲಿನ ಪ್ರವಾಸಿ ಮಂದಿರದಲ್ಲಿ ಆರಂಭಿಸಲಾಗಿದೆ. ಇಲ್ಲಿ ಪ್ರಮುಖ ದಾಖಲೆಗಳೇ ಇಲ್ಲ.

ಕೃಷಿ, ಕಂದಾಯ ಬೇರ್ಪಟ್ಟಿಲ್ಲ: ಕೃಷಿ, ಕಂದಾಯ, ಬಿಇಒ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳು ಇನ್ನೂ ಬೇರ್ಪಟ್ಟಿಲ್ಲ. ಹಳೆ ತಾಲೂಕಿನಲ್ಲಿಯೇ ಇವೆ. ಆ ಇಲಾಖೆಗಳಿಗೆ ಬೇರೆ ಕಟ್ಟಡಗಳೂ ಇಲ್ಲದಂತಾಗಿವೆ. ಅಲ್ಲೊಂದು ಇಲ್ಲೊಂದು ಬಾಡಿಗೆ ಕಟ್ಟಡದಲ್ಲಿ ಕಾರ್ಯಭಾರ ನಡೆಸುತ್ತಿವೆ. ಹೊಸ ತಾಲೂಕಿನ ಜನತೆಗೆ ಏನೇ ದಾಖಲೆ ಬೇಕಿದ್ದರೂ ಮೊದಲಿದ್ದ ತಾಲೂಕು ಕೇಂದ್ರಕ್ಕೆ ತೆರಳಬೇಕು. ಕಾರಟಗಿ, ಕನಕಗಿರಿ ಜನತೆ ಗಂಗಾವತಿ ತಾಲೂಕಿಗೆ ಬರಬೇಕು. ಕುಕನೂರು ವ್ಯಾಪ್ತಿಯ ಜನ ಯಲಬುರ್ಗಾ ಕೇಂದ್ರಕ್ಕೆ ತೆರಳಿ ದಾಖಲೆ ಪಡೆಯುವಂತ ಸ್ಥಿತಿ ಎದುರಾಗಿದೆ.

Advertisement

ಕೃಷಿ, ಕಂದಾಯಕ್ಕೆ ಸಂಬಂ ಧಿಸಿದ ದಾಖಲೆಗಳು ವಿಂಗಡಣೆಯಾಗಬೇಕೆನ್ನುವುದು ಈ ಭಾಗದ ಜನತೆ ಒತ್ತಾಯ ಮಾಡುತ್ತಿದ್ದಾರೆ.
ತಹಶೀಲ್ದಾರ್‌ ಬಿಟ್ಟು ಹುದ್ದೆಗಳೆಲ್ಲ ಖಾಲಿ: ಮೂರು ಹೊಸ ತಾಲೂಕಿಗೆ ತಲಾ 17 ಹುದ್ದೆಗಳನ್ನು ಸರ್ಕಾರ ಸೃಜಿಸಿದೆ. ತಹಶೀಲ್ದಾರ್‌ ಬಿಟ್ಟರೆ ಇನ್ನುಳಿದ ಹುದ್ದೆಗಳನ್ನೇ ಭರ್ತಿ ಮಾಡಿಲ್ಲ. ಗ್ರೇಡ್‌-2 ತಹಶೀಲ್ದಾರ್‌, ಎಫ್‌ ಡಿಎ, ಎಸ್‌ಡಿಎ ಹಾಗೂ ಕಂಪ್ಯೂಟರ್‌ ಆಪರೇಟರ್‌, ಡಿ ದರ್ಜೆ ನೌಕರ ಸೇರಿದಂತೆ ವಿವಿಧ ಹುದ್ದೆಗಳು ಖಾಲಿಯಾಗಿವೆ. ಭರ್ತಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿಲ್ಲ. ಕೆಲವೊಂದು ಹುದ್ದೆಗೆ ಹಳೇ ತಾಲೂಕಿನ ಅ ಧಿಕಾರಿಗಳೇ ಪ್ರಭಾರಿಯ ಹೊಣೆ
ನೋಡಿಕೊಳ್ಳುತ್ತಿದ್ದಾರೆ.

ಹೋಬಳಿ ವಿಂಗಡಣೆ ಅನುಕೂಲ: ಸರ್ಕಾರ ಹೊಸ ತಾಲೂಕುಗಳ ರಚನೆ ಮಾಡಿ ಅನುಷ್ಠಾನವನ್ನೂ ಮಾಡಿದೆ. ಇದರಿಂದ ಕೆಲ ಹೋಬಳಿಗಳ ವಿಂಗಡಣೆಯೂ ನಡೆದಿದೆ. ಕನಕಗಿರಿ, ಕಾರಟಗಿ ಜನ ಪ್ರತಿಯೊಂದು ಕೆಲಸಕ್ಕೂ ಗಂಗಾವತಿ ತಾಲೂಕು ಕೇಂದ್ರಕ್ಕೆ ಬರಬೇಕಿತ್ತು. ಆದರೆ ಹೊಸ ತಾಲೂಕಿನ ಬಳಿಕ ಕೆಲವೊಂದು ಸೇವೆ ಹೊಸ ತಾಲೂಕು ಕೇಂದ್ರದಲ್ಲಿ ದೊರೆಯುತ್ತಿವೆ. ಇನ್ನೂ ದೂರ ಸಂಚಾರ ಸ್ವಲ್ಪ ಮಟ್ಟಿಗೆ ತಗ್ಗಿದೆ. ಕೆಲ ಹೋಬಳಿಗಳಲ್ಲಿನ ವಿರೋಧದ ಮಧ್ಯೆಯೂ ಹೊಸ ತಾಲೂಕುಗಳಿಗೆ ಸೇರ್ಪಡೆ ಮಾಡಿದೆ. ಹೀಗಾಗಿ ಜನರಲ್ಲಿ ಸ್ವಲ್ಪ ಮಟ್ಟಿನ ಅಸಮಾಧಾನವೂ ಇದೆ.

ಒಟ್ಟಿನಲ್ಲಿ ಹೊಸ ತಾಲೂಕುಗಳು ಹೆಸರಿಗಷ್ಟೇ ಎನ್ನುವ ಭಾವನೆ ಮೂಡಿದೆ. ತಾತ್ಕಾಲಿಕ ಕಟ್ಟಡ ಒಂದು ಬಿಟ್ಟರೆ ಹೊಸ ಕಚೇರಿಯಲ್ಲಿ ಏನೂ ಇಲ್ಲ ಎನ್ನುತ್ತಿದ್ದಾರೆ ಜನ. ಸರ್ಕಾರ ಹೊಸ ತಾಲೂಕುಗಳಿಗೆ ಭೂಮಿ, ಕಟ್ಟಡದ ಜೊತೆಗೆ ವಿವಿಧ ಇಲಾಖೆಗಳ ಕಚೇರಿ, ಹುದ್ದೆಗಳ ಭರ್ತಿ ಮಾಡುವ ಪ್ರಕ್ರಿಯೆ
ಆರಂಭಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next