ಕೊಪ್ಪಳ: ಕೊಪ್ಪಳ ನಗರಸಭೆ ಅಧ್ಯಕ್ಷರಾಗಿದ್ದ ಲತಾ ಗವಿಸಿದ್ದಪ್ಪ ಚಿನ್ನೂರು ಅವರು ಧಿಡೀರ್ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.
ಆಂತರಿಕ ಒಪ್ಪಂದದಂತೆ ರಾಜಿನಾಮೆ ನೀಡಿದ್ದಾರೆ ಎನ್ನಲಾಗುತ್ತಿದ್ದು, ರಾಜಿನಾಮೆ ಪತ್ರದಲ್ಲಿ ವಯಕ್ತಿಕ ಕಾರಣ ತೋರಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆಯೇ ನಗರಸಭೆ ಅಧ್ಯಕ್ಷೆ ಸ್ಥಾನಕ್ಕೆ ಲತಾ ಚಿನ್ನೂರು ಅವರು ರಾಜಿನಾಮೆ ನೀಡಲಿದ್ದಾರೆ ಎನ್ನುವ ರಾಜಕೀಯದ ಮಾತುಗಳು ಕೇಳಿ ಬಂದಿದ್ದವು. ಆದರೆ ಅದು ಗಾಳಿಯ ಸುದ್ದಿ ಎಂದೆನ್ನಲಾಗಿತ್ತು. ಹಲವು ರಾಜಕೀಯ ಬೆಳವಣಿಗೆಗಳ ನಡುವೆ ಸೋಮವಾರ ಲತಾ ಚಿನ್ನೂರು ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಈ ಮೊದಲು ನಗರಸಭೆ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಕಾಂಗ್ರೆಸ್ ಪಕ್ಷದಲ್ಲಿಯೇ ಪೈಪೋಟಿ ಜೋರಾಗಿ ನಡೆದಿತ್ತು. ಆದರೆ ಆಂತರಿಕವಾಗಿ 15-15 ತಿಂಗಳು ಅಧ್ಯಕ್ಷಗಿರಿ ಹಂಚಿಕೆಯ ಒಳ ಒಪ್ಪಂದ ನಡೆದಿತ್ತು ಎನ್ನಲಾಗಿದ್ದು, ಅದರಂತೆ 15 ತಿಂಗಳ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿನ್ನೂರು ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ ಎಂದೆನ್ನಲಾಗುತ್ತಿದೆ.
ಈಗ ಸದಸ್ಯೆ ಶಿವಗಂಗಾ ಭೂಮಕ್ಕನವರ್ ಅವರಿಗೆ ಅಧ್ಯಕ್ಷಗಿರಿ ಒಲಿಯಲಿದೆ ಎನ್ನುವ ಮಾತು ಕೇಳಿ ಬರುತ್ತಿವೆಯಾದರೂ ಏನೆಲ್ಲಾ ಬೆಳವಣಿಗೆ ನಡೆದರೂ ಅಚ್ಚರಿ ಪಡಬೇಕಿಲ್ಲ. ವಿಶೇಷವೆಂಬಂತೆ ಉಪಾಧ್ಯಕ್ಷ ಸ್ಥಾನಕ್ಕೆ ಜರೀನಾ ಬೇಗಂ ರಾಜಿನಾಮೆ ನೀಡಿಲ್ಲ. ಇವರ ನಡೆಯೂ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ಜಾಮೀನು ಸಿಕ್ಕಿದರೂ ಇನ್ನೊಂದು ಪ್ರಕರಣದಲ್ಲಿ ಜಿಗ್ನೇಶ್ ಮೇವಾನಿ ಬಂಧನ