Advertisement

ಕೊಪ್ಪಳ:ಕೆರೆ ತುಂಬಿಸುವರೇ ಅನುಭವಿ ರಾಯರಡ್ಡಿ- 60 ಕೆರೆಗಳಿಗೆ ನೀರು ತುಂಬಿಸುವ ವಾಗ್ಧಾನ

06:18 PM May 19, 2023 | Team Udayavani |

ಕೊಪ್ಪಳ: ಯರೆ ಭಾಗದ ಕ್ಷೇತ್ರವಾಗಿರುವ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 60 ಕೆರೆಗಳಿಗೆ ನೀರು ತುಂಬಿಸುವೆ ಎಂದು ಜನರ ಮುಂದೆ ವಾಗ್ಧಾನ ಮಾಡಿ 6ನೇ ಬಾರಿ ಗೆಲುವು ಕಂಡ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಕೆರೆಗಳನ್ನು ತುಂಬಿಸುವುದು, ಕೃಷ್ಣೆಯ ವ್ಯಾಜ್ಯ ಇತ್ಯರ್ಥಪಡಿಸಿ ನೀರಾವರಿ ಮಾಡುವುದು ದೊಡ್ಡ ಸವಾಲ್‌ ಆಗಿದೆ.

Advertisement

ಹೌದು.. ಯಲಬುರ್ಗಾ ಕ್ಷೇತ್ರವಂತೂ ನೀರಾವರಿಯಿಂದ ವಂಚಿತವಾಗಿದೆ. ಕೃಷ್ಣೆಯ ನೀರು ಬರುತ್ತದೆ ಎಂದು ದಶಕಗಳಿಂದಲೂ ಜಾತಕ ಪಕ್ಷಿಯಂತೆ ಕಾದು ಕುಳಿತ ಜನತೆ ಇನ್ನೂ ನೀರಾವರಿ ಭಾಗ್ಯವನ್ನೇ ಕಂಡಿಲ್ಲ. ಆ ಎಲ್ಲ ನೀರಾವರಿ ಕನಸುಗಳನ್ನು ರಾಯರಡ್ಡಿ ಅವರು ಸಕಾರಗೊಳಿಸಬೇಕಿದೆ.

ರೈತರ ಕನಸು ನನಸಾಗಬೇಕಾಗಿದೆ: ಕೃಷ್ಣಾ ಕೊಳ್ಳದ ಯೋಜನೆಗಳಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಯೂ ಒಂದಾಗಿದ್ದು, ಇದೇನೀರಾವರಿ ಪ್ರಸ್ತಾಪಿಸಿಯೇ ಈ ಕ್ಷೇತ್ರದ ರಾಜಕೀಯ ನಾಯಕರು ಅಧಿ ಕಾರದ ಗದ್ದುಗೆ ಹಿಡಿದಿದ್ದಾರೆ.

ಎಲ್ಲರೂ ತಕ್ಕ ಮಟ್ಟಿಗೆ ಯೋಜನೆಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆಯೇ ವಿನಃ ಪೂರ್ಣವಾಗಿ ರೈತರ ಜಮೀನಿಗೆ ನೀರು ಹರಿಸುವ ಕೆಲಸವನ್ನು ಯಾರೂ ಮಾಡಿಲ್ಲ. ಇದರಿಂದ ಜನರ ಕಸನು ಇನ್ನೂ ನನಸಾಗುವ ಹಂತವೂ ತಲುಪಿಲ್ಲ.

ಹಿಂದೆಲ್ಲ ಕ್ಷೇತ್ರಕ್ಕೆ ನೀರಾವರಿ ಮಾಡುವುದು ಕಷ್ಟಸಾಧ್ಯ ಎಂದೆನ್ನುತ್ತಿದ್ದ ರಾಯರಡ್ಡಿ ಅವರು ಪ್ರಯತ್ನ ನಡೆದಿದೆ ಎನ್ನುತ್ತಿದ್ದರು. ಕೆಲ ಸಂದರ್ಭಗಳಲ್ಲಿ ಬ್ಯಾನರ್‌ನಲ್ಲಿಯೇ ನೀರಾವರಿ ಮಾಡಿದ್ದೂ ಇಲ್ಲಿ ಅಲ್ಲಗಳೆಯುಂತಿಲ್ಲ. 2018ರಲ್ಲಿ ಶಾಸಕರಾಗಿದ್ದ ಹಾಲಪ್ಪ ಆಚಾರ್‌ ಅವರು ಇತ್ತೀಚೆಗೆ ಕೃಷ್ಣಾ ನದಿಯ ನೀರು ಪಂಪ್‌ಹೌಸ್‌ಗೆ ತರುವ ಪ್ರಯತ್ನ ಮಾಡಿ ಜನರ ಗಮನ ಸೆಳೆದಿದ್ದರು. ಈಗ ಮುಂದುವರಿದ ಭಾಗವನ್ನು ಹಾಲಿ ಶಾಸಕ ಬಸವರಾಜ ರಾಯರಡ್ಡಿ ಅವರು ಮಾಡಬೇಕಿದೆ.

Advertisement

ಕೃಷ್ಣಾ ವ್ಯಾಜ್ಯ ಇತ್ಯರ್ಥವಾಗಲಿ: ಕೃಷ್ಣಾ ನ್ಯಾಯಾಧೀಕರಣದಡಿ ಕೇಂದ್ರ ಸರ್ಕಾರ ಇನ್ನೂ ಅಂತಿಮ ಅ ಧಿಸೂಚನೆ ಹೊರಡಿಸಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಈ ಜಲವಾಜ್ಯಕ್ಕೆ ತಡೆಯಾಜ್ಞೆಯಿದ್ದು, ಇದನ್ನು ಕೇಂದ್ರ ಸರ್ಕಾರವು ತೆರವುಗೊಳಿಸುವ ಯತ್ನ ಮಾಡಿ ಅಂತಿಮ ಅಧಿಸೂಚನೆ ಹೊರಡಿಸಬೇಕಿದೆ.

ಅಂದರೆ ಮಾತ್ರ ಆಲಮಟ್ಟಿ ಡ್ಯಾಂನ ಮಟ್ಟ 519 ಮೀ. ನಿಂದ 524 ಮೀ. ವರೆಗೂ ಎತ್ತರವಾಗಿ ಆಗ 3ನೇ ಹಂತದ ಎಲ್ಲ ಯೋಜನೆಗಳಿಗೆ ಶಕ್ತಿ ಬರಲಿದೆ. ಕೇಂದ್ರ ಮಟ್ಟದಲ್ಲಿ ಈ ಪ್ರಕ್ರಿಯೆ ನಡೆಯಬೇಕಿದೆ. ಹಿಂದೆ ಕೃಷ್ಣಾ ನೀರಾವರಿ ಜಪ ಮಾಡಿ ಅಧಿಕಾರ ಹಿಡಿದಿದ್ದ ಕಾಂಗ್ರೆಸ್‌, ಈಗ ಮತ್ತೆ ಅಧಿಕಾರದ ಗದ್ದುಗೆ ಏರಿದೆ. ಕೃಷ್ಣಾ ನ್ಯಾಯಾಧೀಕರಣ ವ್ಯಾಜ್ಯಕ್ಕೆ ಇತೀಶ್ರೀ ಹಾಡುವ ಪ್ರಯತ್ನ ಮಾಡಿದಾಗ ಈ ಭಾಗ ನೀರಾವರಿ ಕಾಣಲಿದೆ. ಇದು ಅಷ್ಟು ಸುಲಭದ ಮಾತಲ್ಲ. ರಾಯರಡ್ಡಿ ಅವರಿಗೆ ಇದು ಸವಾಲಿನ
ವಿಷಯವಾಗಿದ್ದು, ರಾಜ್ಯ ಸರ್ಕಾರದ ಮಟ್ಟದಲ್ಲಿ ಇದಕ್ಕೆ ಒತ್ತಡ ತರುವ ಪ್ರಯತ್ನಕ್ಕೆ ಕೈ ಹಾಕಿದಾಗ ರೈತರ ಜಮೀನಿಗೆ ನೀರು ಹರಿಯಲು ಸಾಧ್ಯವಿದೆ.

60 ಕೆರೆ ತುಂಬಿಸೋದು ಸವಾಲು: ರಾಜ್ಯ ಸರ್ಕಾರವು ಕೃಷ್ಣಾ ನದಿಯ ನೀರಿನ ಹಂಚಿಕೆಯಲ್ಲಿ ರಾಜ್ಯದ ಪಾಲಿನ ನೀರನ್ನು ವ್ಯರ್ಥವಾಗಿ ನದಿಗೆ ಹರಿಯುವುದನ್ನು ತಡೆದು ಕೆರೆ ತುಂಬಿಸುವ ಯೋಜನೆ ಆರಂಭಿಸಿದೆ. ಯಲಬುರ್ಗಾ ಕ್ಷೇತ್ರದಲ್ಲಿ 35ಕ್ಕೂ ಹೆಚ್ಚು ಕೆರೆಗಳಿವೆ. ಇವುಗಳಿಗೆ ಮೊದಲ ಆದ್ಯತೆಯಾಗಿ ನೀರು ತುಂಬಿಸುವ ಅಗತ್ಯವಿದೆ. ಆದರೆ ರಾಯರಡ್ಡಿ ಅವರು ನಾನು ಅಧಿಕಾರಕ್ಕೆ ಬಂದರೆ ಕ್ಷೇತ್ರದಲ್ಲಿ 60 ಕೆರೆಗಳ ನಿರ್ಮಿಸಿ ನೀರು ತುಂಬಿಸುವೆ ಎಂದಿದ್ದಾರೆ.

ಪ್ರಸ್ತುತ 35 ಕೆರೆಗಳಿವೆ. ಉಳಿದ ಕೆರೆಗಳನ್ನು ಹೊಸದಾಗಿ ನಿರ್ಮಿಸುವುದಾಗಿ ವಾಗ್ಧಾನ ಮಾಡಿದ್ದಾರೆ. ಹೇಗೆ ಯೋಜನೆ ರೂಪಿಸಲಿದ್ದಾರೆ? ಹೇಗೆ ಕೆರೆ ನೀರು ತುಂಬಿಸುವರು? ಎನ್ನುವ ರೂಪುರೇಷೆ ಕಾದು ನೋಡಬೇಕಿದೆ. ಕಳೆದ ಬಾರಿಯೂ 290 ಕೋಟಿ ರೂ. ತುಂಗಭದ್ರಾ ಒಡಲಿನಿಂದ 13 ಕೆರೆ ತುಂಬಿಸುವ ಯೋಜನೆ ರೂಪಿಸಿದ್ದರು. ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಇದಲ್ಲದೇ ಕ್ಷೇತ್ರದಲ್ಲಿ ಟಾಯ್ಸ ಕ್ಲಸ್ಟರ್‌ ಆರಂಭವಾಗಿದ್ದು ಸ್ಥಳೀಯರಿಗೆ ಉದ್ಯೋಗ ಕೊಡಿಸುವ ಕೆಲಸಕ್ಕೆ ಮುಂದಾಗಬೇಕಿದೆ. ಇಲ್ಲಿನ ಜನರು ದುಡಿಮೆ ಇಲ್ಲದೇ ಗುಳೆ ಹೋಗುತ್ತಿದ್ದು, ಅದನ್ನು ತಪ್ಪಿಸಿ ಜನರಿಗೆ ನೆರವಾಗುವ ಕೆಲಸವನ್ನು ರಾಯರಡ್ಡಿ ಅವರು ಮಾಡಬೇಕಿದೆ. ಇದರ ಜೊತೆಗೆ ಆಸ್ಪತ್ರೆ ಉನ್ನತೀಕರಣ ಸೇರಿ ಕೆಲವೊಂದು ಮೊದಲಾದ್ಯತೆಯ ಕಾರ್ಯಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ. ರಾಜ್ಯದಲ್ಲೂ ಕಾಂಗ್ರೆಸ್‌ ಸರ್ಕಾರವೇ ಅಧಿಕಾರಕ್ಕೆ ಬಂದಿದ್ದು, ರಾಯರಡ್ಡಿ ಅವರು ಈ ಸವಾಲು ಎದುರಿಸಬೇಕಿದೆ.

*ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next