Advertisement

ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರ ಬಗ್ಗೆ ನಿಗಾ ಇಡದಿದ್ದಕ್ಕೆ ಸೋಂಕಿತ ಸಾವು

07:49 PM May 04, 2021 | Team Udayavani |
ಕೊಪ್ಪಳ: ಕೊಪ್ಪಳ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಜೊತೆ ಆರೈಕೆಯಲ್ಲಿ ತೊಡಗಿದ್ದ ಸಂಬಂಧಿಗಳನ್ನು ಏಕಾ ಏಕಿ ಆಸ್ಪತ್ರೆಯಿಂದ ಹೊರ ನಡೆಯುವಂತೆ ತಿಳಿಸಿದ ಬೆನ್ನಲ್ಲೇ ಸೋಂಕಿತ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ನಮ್ಮ ಅಣ್ಣನನ್ನ ಆಸ್ಪತ್ರೆಯವರು ಸಾಯಿ ಬಡದ್ ಬಿಟ್ರೋ.. ಯಪ್ಪಾ ಎಂದು ಕಣ್ಣೀರಿಡುತ್ತಲೇ ಆಸ್ಪತ್ರೆಯ ಮುಂದೆ ಬಿದ್ದು ಹೊರಳಾಡಿದ್ದು ನಿಜಕ್ಕೂ ಎಲ್ಲರ ಕರುಳು ಚುರ್ ಎಂದೆನಿಸಿತು. ಮೊದಲೆಲ್ಲಾ ಜಿಲ್ಲಾ ಕೋವಿಡ್ ಆಸ್ಪತ್ರೆಯೊಳಗೆ ಸೋಂಕಿತರ ಆರೈಕೆಗಾಗಿ ಕೆಲವರನ್ನು ಬಿಡಲಾಗುತ್ತಿತ್ತು. ಆದರೆ ಏಕಾ ಏಕಿ ಮೇಲಾಧಿಕಾರಿಗಳ ಸೂಚನೆಯ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ವರ್ಗವು ಸಂಬಂಧಿಗಳೆಲ್ಲರನ್ನೂ ಹೊರ ನಡೆಯುವಂತೆ ತಿಳಿಸಿದರು. ಇದಕ್ಕೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿ, ಕೋವಿಡ್ ಸೊಂಕಿತರ ಮುಂದೆ ಆಸ್ಪತ್ರೆಯ ವೈದ್ಯರು, ನರ್ಸ್ ಸರಿಯಾದ ಸಮಯಕ್ಕೆ ಹಾಜರಿರಲ್ಲ. ಸೋಂಕಿತರಿಗೆ ಆಕ್ಸಿಜನ್ ಖಾಲಿಯಾಗಿದೆ ಎಂದರೂ ನರ್ಸ್ ಸಮಯಕ್ಕೆ ಸರಿಯಾಗಿ ಬಂದು ಚಿಕಿತ್ಸೆ ನೀಡಲ್ಲ. ನಾವೇ ನಾಲ್ಕಾರು ಬಾರಿ ಹೇಳಿದ ಬಳಿಕ ಬರುತ್ತಾರೆ. ನಾವು ಒಬ್ಬರಾದರೂ ಸೋಂಕಿತರ ಪಕ್ಕದಲ್ಲಿಯೇ ಕೆಲವು ಸಮಯ ಇರುತ್ತೇವೆ. ಏಕಾ ಏಕಿ ನೀವು ನಮ್ಮನ್ನು ಹೊರಗೆ ಕಳುಹಿಸಿದರೆ ಅವರು ಆಕ್ಸಿಜನ್ ಪೈಪ್‌ಗಳನ್ನು ಮುಖದಿಂದ ತೆಗೆದು ಹಾಕುತ್ತಾರೆ. ಆಗ ಸಾವು ನೋವು ಹೆಚ್ಚು ಸಂಭವಿಸುತ್ತವೆ ಎಂದು ಹೇಳಿದರೂ ಸಹಿತ ಆಸ್ಪತ್ರೆಯ ಸಿಬ್ಬಂದಿ ಎಲ್ಲರನ್ನೂ ಹೊರಗೆ ಕಳುಹಿಸಿದರು. ಆಸ್ಪತ್ರೆಯಲ್ಲಿ ಗದ್ದಲ ಏರ್ಪಟ್ಟಂತೆ ಪೊಲೀಸರು ಧಾವಿಸಿ ಯಾರನ್ನೂ ಒಳಗೆ ಬಿಡಲಿಲ್ಲ. ಇದರಿಂದ ಆಸ್ಪತ್ರೆಯ ಒಳಗೆ ಓರ್ವ ಸೋಂಕಿತನಿಗೆ ಆಕ್ಸಿಜನ್ ಅಳವಡಿಕೆ ಮಾಡಿದ್ದರೂ ಯಾರೂ ಆರೈಕೆ ಮಾಡದೇ, ನಿಗಾ ಇಡದೇ ಇದ್ದಾಗ ಸಾವನ್ನಪ್ಪಿದನು. ಈ ವಿಷಯ ತಿಳಿಯುತ್ತಿದ್ದಂತೆ ಸೋಂಕಿತನ ಸಹೋದರ ಕೋವಿಡ್ ಆಸ್ಪತ್ರೆಯ ಕೊಠಡಿ ಒಳಗೆ ಪ್ರವೇಶಿಸಿ ನನ್ನ ಅಣ್ಣನನ್ನ ಈ ಆಸ್ಪತ್ರೆಯ ವೈದ್ಯರೇ ಸಾಯ್‌ಬಡಿದರು. ನಮ್ಮ ಅಣ್ಣ ಬದುಕುತ್ತಿದ್ದ. ಇಲ್ಲಿ ಚಿಕಿತ್ಸೆಯನ್ನೂ ಸರಿಯಾಗಿ ಕೊಡಲ್ಲ. ಇರುವವರನ್ನೂ ಆರೈಕೆ ಮಾಡಲ್ಲ. ಇಲ್ಲಿಗೆ ಸೋಂಕಿತರನ್ನ ಕರೆ ತಂದರೆ ಅವರ ಹೆಣ ತೆಗೆದುಕೊಂಡು ಹೋಗಬೇಕು ಎಂದೆಲ್ಲಾ ಕಣ್ಣೀರು ಹಾಕಿ ಆಸ್ಪತ್ರೆಯ ಮುಂಭಾಗದಲ್ಲೇ ಬಿದ್ದು ಹೊರಳಾಡಿ ಕಣ್ಣೀರಿಟ್ಟ ಘಟನೆ ನಿಜಕ್ಕೂ ಎಲ್ಲರ ಕಣ್ಣಾಲೆಗಳನ್ನೂ ನೀರು ತರಿಸುವಂತಿತ್ತು. ಮಾಹಿತಿ ತಿಳಿದ ಡಿಸಿ ವಿಕಾಸ್ ಕಿಶೋರ್ ಅವರು ತಕ್ಷಣ ಆಸ್ಪತ್ರೆಗೆ ಆಗಮಿಸಿ ಅಲ್ಲಿನ ಪರಿಸ್ಥಿತಿ ಪರಿಶೀಲಿಸಿದರು. ಸೋಂಕಿತರ ಸಂಬಂಧಿಕರು ಡಿಸಿ ಅವರನ್ನು ತರಾಟೆ ತೆಗೆದುಕೊಂಡರಲ್ಲದೇ, ತಮ್ಮ ನೋವು ತೋಡಿಕೊಂಡರು. ಈ ಕುರಿತು ಉದಯವಾಣಿ ಜೊತೆ ಡಿಸಿ ವಿಕಾಸ್ ಕಿಶೋರ್ ಮಾತನಾಡಿ, ಆಸ್ಪತ್ರೆಗೆ ನಾನು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಆ ಸೋಂಕಿತರು ಆರೋಗ್ಯದ ಸ್ಥಿತಿಯು ತುಂಬ ಕೊನೆಯ ಹಂತಕ್ಕೆ ತಲುಪಿ ಸಾವನ್ನಪ್ಪಿದ್ದಾನೆ. ಎಲ್ಲರನ್ನೂ ಆಸ್ಪತ್ರೆಯ ಒಳಗೆ ಬಿಡಲು ಆಗುವುದಿಲ್ಲ. ನಾಲ್ಕು ಗಂಟೆಗೂ ಹೆಚ್ಚು ಕಾಲ ಸಂಬಂಧಿಕರು ಸೋಂಕಿತರ ಜೊತೆಯೇ ಇದ್ದರೆ ಅವರಿಗೂ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಿಡಲು ಕಷ್ಟವಾಗುತ್ತದೆ. ಆದರೆ ಆಸ್ಪತ್ರೆಯ ಸಿಬ್ಬಂದಿಗಳ ಜೊತೆಗೆ ದಿನಕ್ಕೆ ಮೂರು ಬಾರಿ ಸಂಬಂಧಿಕರನ್ನು ಒಂದೆರಡು ಗಂಟೆಗಳ ಕಾಲ ಆರೈಕೆಗೆ ಕೋವಿಡ್ ಆಸ್ಪತ್ರೆಯೊಳಗೆ ಬಿಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next