Advertisement

ಹೋರಾಟದಿಂದ ಸೌಲಭ್ಯ ಪಡೆಯಲು ಸಾಧ್ಯ

04:47 PM May 04, 2019 | Team Udayavani |

ಕೊಪ್ಪ: ದುಡಿಯುವ ವರ್ಗ ಹೋರಾಟದ ಮೂಲಕವೇ ತಮ್ಮ ಹಕ್ಕು ಪಡೆದುಕೊಂಡಿದ್ದಾರೆ. ಆದರೆ ಇಂದಿನ ದಿನಗಳಲ್ಲಿ ಕಾರ್ಮಿಕ ಸಂಘಟನೆಗಳು ಹೋರಾಟ ಬಿಟ್ಟು ಸಂಧಾನದತ್ತ ಮುಖ ಮಾಡಿದ್ದರಿಂದ ಶ್ರಮಿಕ ವರ್ಗ ಸಂಕಷ್ಟದಲ್ಲಿದೆ ಎಂದು ಸಿಪಿಐ(ಎಂಎಲ್) ರೆಡ್‌ಸ್ಟಾರ್‌ ಸಂಘಟನೆಯ ರಾಜ್ಯಾಧ್ಯಕ್ಷ ಪಿ.ರುದ್ರಯ್ಯ ತಿಳಿಸಿದರು.

Advertisement

ಪಟ್ಟಣದ ಪುರಭವನದಲ್ಲಿ ಟ್ರೇಡ್‌ ಯೂನಿಯನ್‌ ಸೆಂಟರ್‌ ಆಫ್‌ ಇಂಡಿಯಾ(ಟಿಯುಸಿಐ) ಸಂಘಟನೆ ವತಿಯಿಂದ ಆಯೋಜಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಮಿಕರನ್ನು ಪ್ರಾಣಿಗಳಂತೆ ಹೀನಾಯವಾಗಿ ದುಡಿಸಿಕೊಳ್ಳುತ್ತಾ, ವಿಶ್ರಾಂತಿ ನೀಡದೆ 14ರಿಂದ 16 ಗಂಟೆಗಳಿಗೂ ಅಧಿಕ ಕಾಲ ದುಡಿಸಿಕೊಳ್ಳಲಾಗುತ್ತಿತ್ತು. ಇದರ ವಿರುದ್ಧ 1886ರ ಮೇ.1ರಂದು ಅಮೆರಿಕಾದ ಚಿಕಾಗೋ ನಗರದಲ್ಲಿ ಕಾರ್ಮಿಕರು ದಂಗೆ ಎದ್ದು, ಆಳುವ ವರ್ಗದ ಗುಂಡಿಗೆ ಎದೆಯೊಡ್ಡಿ ವಿಜಯ ಸಾಧಿಸಿದ ದಿನವನ್ನು ವಿಶ್ವ ಕಾರ್ಮಿಕ ದಿನವನ್ನಾಗಿ ಪ್ರತಿವರ್ಷ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಜಗತ್ತಿನ ಉತ್ಪಾದಕ ಶಕ್ತಿಗಳಿಗೆ ದಾರಿ ತೋರಿ ಅನ್ಯಾಯ, ಅಕ್ರಮ, ದಮನ, ದಬ್ಟಾಳಿಕೆಗೆ ತಡೆ ಹಾಕಿ ಶೋಷಣೆಯ ವಿರುದ್ಧ ದಾರಿ ತೋರಿದ ಆ ರಕ್ತಸಿಕ್ತ ಚರಿತ್ರೆಯ ಭಾಗವಾಗಿಯೇ 1946ರ ಕೈಗಾರಿಕಾ ಕಾರ್ಮಿಕ ಕಾಯ್ದೆ, 1947ರ ಕೈಗಾರಿಕಾ ವಿವಾದ ಕಾಯ್ದೆ, 1948ರ ಕನಿಷ್ಠ ವೇತನ ಕಾಯ್ದೆ, ಇಎಸ್‌ಐ ಕಾಯ್ದೆ, 1951ರ ಪ್ಲಾಂಟೇಷನ್‌ ಕಾಯ್ದೆ, 1952ರ ಗಣಿ ಕಾಯ್ದೆ, ಭವಿಷ್ಯನಿಧಿ ಕಾಯ್ದೆ, 1965ರ ಬೋನಸ್‌ ಕಾಯ್ದೆಗಳು ಸೇರಿದಂತೆ ಕಾರ್ಮಿಕ ಪರವಾದ ಕಾನೂನುಗಳು ಜಾರಿಯಾಗಲು ಸಾಧ್ಯವಾಗಿದೆ ಎಂದರು.

ಇಂದು ಇಡೀ ದುಡಿಯುವ ವರ್ಗ ಅಪಾಯಕಾರಿ ಹಂತಕ್ಕೆ ಬಂದಿದ್ದು, ದೇಶ ಆಳುವ ಸರ್ಕಾರಗಳು ಜನವಿರೋಧಿ, ಕಾರ್ಮಿಕ ವಿರೋಧಿ, ನವ ಉದಾರವಾದ ನೀತಿಗಳ ಮೂಲಕ ದೇಶದ ಸಂಪನ್ಮೂಲಗಳನ್ನು ಬಂಡವಾಳಿಗರ ಲಾಭಕ್ಕೆ ಪೂರಕವಾಗಿ ಹೊಸ ಹೊಸ ಕಾಯ್ದ್ನೆ ರೂಪಿಸುತ್ತಾ, ಈ ಹಿಂದೆ ಹೋರಾಡಿ ಪಡೆದಿದ್ದ ಹಕ್ಕುಗಳನ್ನು ನಿರಾಕರಿಸುತ್ತಿದ್ದಾರೆ. ಇದರ ಪರಿಣಾಮ ದೇಶದಲ್ಲಿ ಬಿಎಸ್‌ಎನ್‌ಎಲ್, ಎಚ್ಎಎಲ್, ವಿಮಾನಯಾನ, ಬ್ಯಾಂಕಿಂಗ್‌ ಕ್ಷೇತ್ರ, ಅಂಚೆ ಇಲಾಖೆ ನಷ್ಟಕ್ಕೆ ಸಿಲುಕಿ ಕಾರ್ಮಿಕ ವರ್ಗದ ಬಿಕ್ಕಟ್ಟಿಗೆ ಕಾರಣವಾಗಿದೆ. ಅಂಗನವಾಡಿ ಸೇರಿದಂತೆ ಸರ್ಕಾರಿ ಕ್ಷೇತ್ರದಲ್ಲಿನ ನೌಕರರಿಗೆ ಭದ್ರತೆ ಇಲ್ಲವಾಗಿದೆ. ಎಲ್ಲಾ ಕಡೆ ಗುತ್ತಿಗೆ ಕಾರ್ಮಿಕ ಪದ್ಧತಿ ಜಾರಿಗೊಳಿಸುತ್ತಾ ಕಾಯಂ ನೌಕರಿಯನ್ನು ನಿರಾಕರಿಸಲಾಗಿದೆ ಎಂದು ತಿಳಿಸಿದರು.

Advertisement

2016ರ ಸುಪ್ರೀಂ ಕೋರ್ಟ್‌ನ ಆದೇಶ ಪ್ರಕಾರ ಯಾವ ಸಂಸ್ಥೆಗಳು ಕನಿಷ್ಠ ವೇತನ ನೀಡುತ್ತಿಲ್ಲ. ಶಿಕ್ಷಣ, ಆರೋಗ್ಯ, ಬ್ಯಾಂಕ್‌, ವಿಮೆ, ಅಂಚೆ, ದೂರವಾಣಿ ಕ್ಷೇತ್ರಗಳನ್ನು ಕಾರ್ಪೋೕರೇಟ್‌ಗೆ ಮಾರಲಾಗುತ್ತಿದೆ. ಬೆಲೆ ಏರಿಕೆಯ ಬೆಂಕಿ, ನಿರುದ್ಯೋಗದ ಪೆಟ್ಟುಗಳು ಯುವ ಜನರನ್ನು ಬಾಧಿಸುತ್ತಿದೆ. ಆಳುವ ಸರ್ಕಾರಗಳು ಬದಲಾದರೂ ನೀತಿಗಳು ಬದಲಾಗಿಲ್ಲ. ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಕಾರ್ಮಿಕರನ್ನು ವಿಭಜಿಸಲಾಗುತ್ತಿದೆ ಎಂದು ಆರೋಪಿಸಿದರು.

ದುಡಿಯುವ ವರ್ಗ ಜಾಗೃತಗೊಳ್ಳದಿದ್ದರೆ ನಮ್ಮ ಪರಿಸ್ಥಿತಿ ಚಿಂತಾಜನಕವಾಗಲಿದೆ. ಮುಂದಿನ ಪೀಳಿಗೆ ಸಂಕಷ್ಟದ ಜೀವನ ನಡೆಸಬೇಕಾಗುತ್ತದೆ. ಆದ್ದದರಿಂದ ಶ್ರಮಿಕ ವರ್ಗ ಎಚ್ಚೆತ್ತು ನಮ್ಮ ಹಕ್ಕುಗಳನ್ನು ಹೋರಾಟದ ಮೂಲಕವೇ ಪಡೆದುಕೊಳ್ಳಬೇಕು. ಸಂಘಟನೆಯನ್ನು ಗಟ್ಟಿಗೊಳಿಸಬೇಕು. ಈ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆಗಳು ಮರುಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಕರೆ ನೀಡಿದರು.

ಟಿಯುಸಿಐ ಜಿಲ್ಲಾಧ್ಯಕ್ಷ ಗೋಪಾಲರಾವ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ್‌ ಪ್ರಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕುಟ್ರಾಚ್ಚಿ ಚಿನ್ನಪ್ಪ, ತಾಲೂಕು ಅಧ್ಯಕ್ಷ ವರದರಾಜ್‌, ಕಾರ್ಮಿಕ ಮುಖಂಡರಾದ ಕೆ.ಎನ್‌. ರಮೇಶ್‌, ಕೃಷ್ಣ, ಸಾವಿತ್ರಿ, ಪರಮೇಶ್‌ ಇನ್ನಿತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮೇಲಿನಪೇಟೆ ಕುವೆಂಪು ವೃತ್ತದಿಂದ ಪುರ ಭವನದವರೆಗೆ ಮೆರವಣಿಗೆ ನಡೆಸಲಾಯಿತು. ಈ ವೇಳೆ ವಿವಿಧ ಸಂಘಟನೆಗಳ ಕಾರ್ಮಿಕರು ಭಾಗವಹಿಸಿದ್ದರು.

2016ರ ಸುಪ್ರೀಂ ಕೋರ್ಟ್‌ನ ಆದೇಶ ಪ್ರಕಾರ ಯಾವ ಸಂಸ್ಥೆಗಳು ಕನಿಷ್ಠ ವೇತನ ನೀಡುತ್ತಿಲ್ಲ. ಶಿಕ್ಷಣ, ಆರೋಗ್ಯ, ಬ್ಯಾಂಕ್‌, ವಿಮೆ, ಅಂಚೆ, ದೂರವಾಣಿ ಕ್ಷೇತ್ರಗಳನ್ನು ಕಾರ್ಪೋೕರೇಟ್‌ಗೆ ಮಾರಲಾಗುತ್ತಿದೆ. ಬೆಲೆ ಏರಿಕೆಯ ಬೆಂಕಿ, ನಿರುದ್ಯೋಗದ ಪೆಟ್ಟುಗಳು ಯುವ ಜನರನ್ನು ಬಾಧಿಸುತ್ತಿದೆ. ಆಳುವ ಸರ್ಕಾರಗಳು ಬದಲಾದರೂ ನೀತಿಗಳು ಬದಲಾಗಿಲ್ಲ. ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಕಾರ್ಮಿಕರನ್ನು ವಿಭಜಿಸಲಾಗುತ್ತಿದೆ.
ಪಿ.ರುದ್ರಯ್ಯ,
ಸಿಪಿಐ(ಎಂಎಲ್) ರೆಡ್‌ಸ್ಟಾರ್‌ ಸಂಘಟನೆಯ ರಾಜ್ಯಾಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next