Advertisement

ಕೇರಳದ ಕೂಡಲಮಾಣಿಕ್ಯಂ ದೇಗುಲ:ಕಲಾವಿದೆ ಹಿಂದೂ ಅಲ್ಲವೆಂದು ಭರತನಾಟ್ಯಕ್ಕೆ ನಿಷೇಧ!

08:28 AM Mar 29, 2022 | Team Udayavani |

ತಿರುವನಂತಪುರಂ: ಕೇರಳದಲ್ಲಿ ಇತ್ತೀಚೆಗೆ ನ್ಯಾಯಾಧೀಶರೊಬ್ಬರು ನೃತ್ಯವನ್ನು ಅರ್ಧಕ್ಕೇ ನಿಲ್ಲಿಸುವಂತೆ ಆದೇಶಿಸಿದ್ದು ಸುದ್ದಿಯಾಗಿತ್ತು. ಇದೀಗ ಅದರ ಬೆನ್ನಲ್ಲೇ, ಭರತನಾಟ್ಯ ಕಲಾವಿದೆಯು ಹಿಂದೂ ಧರ್ಮದವರಲ್ಲ ಎನ್ನುವ ಕಾರಣಕ್ಕೆ ಆಕೆಯ ಕಾರ್ಯಕ್ರಮವನ್ನೇ ರದ್ದು ಮಾಡಿರುವ ಘಟನೆ ನಡೆದಿದೆ.

Advertisement

ತ್ರಿಶೂರ್‌ ಜಿಲ್ಲೆಯ ಇರಿಂಜಲಕುಡದಲ್ಲಿರುವ ಕೂಡಲಮಾಣಿಕ್ಯಂ ದೇಗುಲದಲ್ಲಿ ಏಪ್ರಿಲ್‌ನಲ್ಲಿ 10 ದಿನಗಳ ಉತ್ಸವ ನಡೆಯಲಿದೆ. ಕೇರಳ ಸರ್ಕಾರದ ದೇವಸ್ವಂ ಮಂಡಳಿಯಡಿ ಬರುವ ಈ ದೇಗುಲದ ಉತ್ಸವದಲ್ಲಿ 800 ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಅದರಲ್ಲಿ ಮುಸ್ಲಿಂ ಧರ್ಮದ ಪ್ರಸಿದ್ಧ ಭರತನಾಟ್ಯ ಕಲಾವಿದೆ ಮನ್ಸಿಯಾ ವಿ.ಪಿ ಕೂಡ ಆಯ್ಕೆಯಾಗಿದ್ದರು. ಆದರೆ ಅವರು ಹಿಂದೂ ಧರ್ಮದವರಲ್ಲ ಎನ್ನುವ ಕಾರಣಕ್ಕೆ ದೇವಸ್ಥಾನ ಮಂಡಳಿ ಅವರ ಕಾರ್ಯಕ್ರಮವನ್ನು ರದ್ದು ಮಾಡಿದೆ.

ಈ ವಿಚಾರವನ್ನು ಮನ್ಸಿಯಾ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಇಲ್ಲಿ ಕಲೆಗಿಂತ ಧರ್ಮವೇ ಮುಖ್ಯ. ಇದೇನೂ ನನಗೆ ಮೊದಲಲ್ಲ. ಈ ಹಿಂದೆ ಗುರುವಾಯೂರು ದೇಗುಲದಲ್ಲೂ ಇದೇ ಕಾರಣ ಕೊಟ್ಟು ಕಾರ್ಯಕ್ರಮ ರದ್ದು ಮಾಡಿದ್ದರು. ನಾನು ಹಿಂದೂವನ್ನು ಮದುವೆಯಾದ ಮೇಲೆ ಧರ್ಮ ಬದಲಾವಣೆ ಮಾಡಿಕೊಂಡಿಲ್ಲವೆಂದೂ ಅನೇಕರು ಪ್ರಶ್ನಿಸುತ್ತಾರೆ. ಆದರೆ ನನಗೆ ಯಾವುದೇ ಧರ್ಮವಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ವಿದ್ಯಾರ್ಥಿನಿಗೆ ದೈಹಿಕ ಶಿಕ್ಷಕನಿಂದ ಅಶ್ಲೀಲ ಸಂದೇಶ : ಪ್ರಶ್ನಿಸಿದ ವಿದ್ಯಾರ್ಥಿಗೆ ಬೆದರಿಕೆ

ದೇವಸ್ಥಾನದ ಕಾರ್ಯಕ್ರಮಕ್ಕೆ ಭಾಗವಹಿಸಲು ನೀಡಿದ್ದ ಅರ್ಜಿಯಲ್ಲಿ ಮನ್ಸಿಯಾ ಅವರು “ನಾನು ಯಾವುದೇ ಧರ್ಮಕ್ಕೆ ಸೇರಿದವಳಲ್ಲ’ ಎಂದು ಬರೆದುಕೊಟ್ಟಿದ್ದರು ಎಂದು ಮಂಡಳಿ ತಿಳಿಸಿದೆ. ಹಿಂದೂ ಧರ್ಮದವರಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡುವುದು ವ್ಯವಸ್ಥಾಪನಾ ಮಂಡಳಿಯ ನಿಯಮ ಎಂದು ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next