Advertisement

Konkani Cinema; 50ಕ್ಕೂ ಹೆಚ್ಚು ಹೌಸ್‌ಫುಲ್ ಶೋ ಕಂಡ “ತರ್ಪಣ’

11:30 PM Jul 21, 2024 | Team Udayavani |

ಉಡುಪಿ: ಕೇರಳದ ತಿರುವನಂತ ಪುರದಿಂದ ಮಹಾರಾಷ್ಟ್ರದ ಮುಂಬಯಿ ವರೆಗೆ ವಿಶಾಲವಾಗಿ ಹರಡಿಕೊಂಡಿರುವ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಕೌಟುಂಬಿಕ ಕಥೆ ಆಧರಿಸಿ ಚಿತ್ರೀಕರಣಗೊಂಡ “ತರ್ಪಣ’ ಕೊಂಕಣಿ ಚಲನಚಿತ್ರ ಅಮೆರಿಕದಲ್ಲಿ ಪ್ರೀಮಿಯರ್‌ ಶೋ ಪ್ರದರ್ಶನವಾಗಿ, ದೇಶದ ವಿವಿಧ ನಗರಗಳಲ್ಲಿ 50ಕ್ಕೂ ಹೆಚ್ಚು ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡಿದೆ. ಚಿತ್ರದ ಟ್ರೈಲರ್‌ ಅನ್ನು ಯೂಟ್ಯೂಬ್‌ನಲ್ಲಿ 50,000ಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.

Advertisement

ಅಮೆರಿಕದಲ್ಲಿ ಮೊದಲ ಪ್ರದರ್ಶನ
ಕೊಂಕಣಿ ಭಾಷೆಯಲ್ಲಿ ಚಲನಚಿತ್ರಗಳು ನಿರ್ಮಾಣವಾಗುವುದು ಅತಿ ಕಡಿಮೆ. ಅದರಲ್ಲೂ ಉತ್ತಮ ಗುಣಮಟ್ಟದ ಕೊಂಕಣಿ ಚಲನಚಿತ್ರಗಳು ವಿರಳ ಎನ್ನಬಹುದು. ಈ ನಿಟ್ಟಿನಲ್ಲಿ ಚಲನಚಿತ್ರದ ಭರ್ಜರಿ ಪ್ರದರ್ಶನದ ಹಿಂದೆ ಐಟಿ ಉದ್ಯಮಿ ದೇವದಾಸ್‌ ನಾಯಕ್‌ ಅವರ ನಿರ್ದೇಶಕತ್ವ ಬಹುಶ್ರಮದ ಕಾರ್ಯವೆಸಗಿದೆ.

2023ರ ನ. 16ರಂದು ಅಮೆರಿಕದಲ್ಲಿ ಮೊದಲ ಪ್ರದರ್ಶನ ಯಶಸ್ವಿಯಾದ ಬಳಿಕ ಕೆನಡಾದ ಟೊರೆಂಟೋ, ಮಲೇಶ್ಯಾದಲ್ಲೂ ನಡೆಯಿತು. ಭಾರತದಲ್ಲಿ ಮೊದಲ ಪ್ರದರ್ಶನ ನಡೆದದ್ದು ಮಂಗಳೂರಿನಲ್ಲಿ. ತೀರಾ ಇತ್ತೀಚೆಗಿನ ಪ್ರದರ್ಶನ ನಡೆದದ್ದು ಉಡುಪಿಯ ಪುರಭವನದಲ್ಲಿ. ಈ ನಡುವೆ ಮುಂಬಯಿ, ಬೆಂಗಳೂರಿನಲ್ಲಿ ತಲಾ 15ಕ್ಕೂ ಹೆಚ್ಚು ಪ್ರದರ್ಶನಗಳು ಆಗಿವೆ. ಮಣಿಪಾಲ, ಪಡುಬಿದ್ರಿ, ಕುಂದಾಪುರ, ಪುತ್ತೂರಿನಲ್ಲೂ ಪ್ರದರ್ಶನ ಕಂಡಿದೆ. ಬೇಡಿಕೆ ಇರುವಂತೆ ಪ್ರದರ್ಶನವನ್ನು ಆಯೋಜಿಲಾಗುತ್ತಿದೆ.

ಹಲವು ಭಾಷಿಕರಿಂದ ವೀಕ್ಷಣೆ
ಜಿಎಸ್‌ಬಿ ಸಮುದಾಯದ ಕಥಾನಕವಾದರೂ ಕೊಂಕಣಿ ಭಾಷಿಕರಲ್ಲದವರು ಹಾಗೂ ಹಿಂದೂಯೇತರ ಧರ್ಮದವರೂ ತರ್ಪಣ ವನ್ನು ವೀಕ್ಷಿಸಿದ್ದಾರೆ. ಮುಂಬಯಿ ಪ್ರದರ್ಶನಗಳಲ್ಲಿ ಮರಾಠಿ, ಹಿಂದಿ ಭಾಷಿಕರೂ, ಕರ್ನಾಟಕದ ಕರಾವಳಿ ಪ್ರದರ್ಶನಗಳಲ್ಲಿ ಕೊಂಕಣಿ ಭಾಷೆಯನ್ನು ಮಾತನಾಡುವ ಕ್ರೈಸ್ತ ಸಮುದಾಯದವರು, ಕನ್ನಡಿಗರೂ, ತುಳುವರೂ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಕಥಾಹಂದರ, ನಿರ್ವಹಣ ರೀತಿ, ಸುಶ್ರಾವ್ಯ ಸಂಗೀತದಿಂದ ಎಲ್ಲ ಸಮುದಾಯದವರಿಗೂ ಮನೋರಂಜನೆ ನೀಡುವುದೇ ಯಶಸ್ಸಿಗೆ ಕಾರಣವಾಗಿದೆ. ಚಿತ್ರದಲ್ಲಿ ಇಂಗ್ಲಿಷ್‌ನಲ್ಲಿ ಸಬ್‌ ಟೈಟಲ್ಸ್‌ ನೀಡಿರುವುದು ಎಲ್ಲ ಭಾಷಿಕರನ್ನೂ ತಲುಪುತ್ತದೆ.

ಕಥಾವಸ್ತುವಿನ ಪ್ರಸ್ತುತತೆ
“ತರ್ಪಣ’ ಚಲನಚಿತ್ರದಲ್ಲಿ ತಂದೆ ಮಗನ ನಡುವೆ ಇರುವ ಇಗೋ(ಅಹಂ)ದಿಂದ ನಡೆ ಯುವ ಘರ್ಷಣೆಯನ್ನು ಮೂಲ ಕಥಾವಸ್ತು ವಾಗಿ ಬಳಸಿಕೊಂಡಿರುವುದರಿಂದ ಭಾಷೆ ಯಾವುದೇ ಆದರೂ ಪ್ರತಿ ಮನೆಗಳಲ್ಲಿ ನಡೆ ಯುವ ವಿಷಯವಾದ ಕಾರಣ ಎಲ್ಲ ಭಾಷೆ, ಸಮುದಾಯದವರಿಗೂ ವೀಕ್ಷಣೆಯೋಗ್ಯ ವಾಗಿದೆ. ಪ್ರದರ್ಶನದ ಬಗ್ಗೆ ಆಸಕ್ತಿ ಉಳ್ಳವರು  devdasmulky@gmail.com ಇ ಮೇಲ್‌ ಐಡಿಗೆ ಸಂಪರ್ಕಿಸಬಹುದು.

Advertisement

ಇನ್ನಷ್ಟು ಪ್ರಶಸ್ತಿಗಳ ವಿಶ್ವಾಸ
“ತರಂಗ’ದ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅವರು ತಂಡದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಈ ಚಿತ್ರವು ಡೆಲ್ಲಿ ಫಿಲ್ಮ್ ಫೆಸ್ಟಿವಲ್‌, ಕಲಾಕಾರಿ ಫೆಸ್ಟಿವಲ್‌, ದಾದಾಸಾಹೇಬ್‌ ಫಿಲ್ಮ್ ಪುರಸ್ಕಾರ, ಇಂಡೋ ಫ್ರೆಂಚ್‌ ಫಿಲ್ಮ್ ಪುರಸ್ಕಾರವನ್ನು ಚಲನಚಿತ್ರೋತ್ಸಗಳಲ್ಲಿ ಪಡೆದಿದ್ದು, ಮುಂದೆಯೂ ಪ್ರಶಸ್ತಿಗಳನ್ನು ಗಳಿಸಲಿದೆ. ಸೀಮಿತ ಪ್ರದರ್ಶನದ ಮೂಲಕ ಕಲಾಕೃತಿಯನ್ನು ಜನರಿಗೆ ತಲುಪಿಸುವ ಆಯೋಜನೆ ಹಾಕಿಕೊಂಡ ತಂಡಕ್ಕೆ ವೀಕ್ಷಕರ ಮೆಚ್ಚುಗೆ ಅತೀವ ಸಂತೋಷ ನೀಡಿದೆ ಎಂದು ನಿರ್ದೇಶಕ ದೇವದಾಸ್‌ ನಾಯಕ್‌ ತಿಳಿಸಿದ್ದಾರೆ.

ಮೂಲ್ಕಿ, ಕಟಪಾಡಿಯಲ್ಲಿ ಚಿತ್ರೀಕರಣ
ಮಳ್ಳಿ ಪಿಕ್ಚರ್ಸ್‌ ನಿರ್ಮಿಸಿದ ಚಲನಚಿತ್ರದ ನಿರ್ಮಾಪಕರು ವೀಣಾ ದೇವಣ್ಣ ನಾಯಕ್‌ ಮತ್ತು ಅವಿನಾಶ ಶೆಟ್ಟಿ. ರಚನೆ ಮತ್ತು ನಿರ್ದೇಶನದಲ್ಲಿ ದೇವದಾಸ ನಾಯಕ್‌, ಛಾಯಾಚಿತ್ರಗ್ರಹಣದಲ್ಲಿ ಮಹೇಶ್‌ ಡಿ. ಪೈ, ಸಂಗೀತ ಮತ್ತು ಗಾಯನದಲ್ಲಿ ಕಾರ್ತಿಕ್‌ ಮೂಲ್ಕಿ ಅವರ ತಂಡ ಕಾರ್ಯನಿರ್ವಹಿಸಿದೆ. ಸಂಜಯ್‌ ಸವುರ್‌, ಅನುಜ್‌ ನಾಯಕ್‌, ಮೀರಾ ನೈಮಳ್ಳಿ, ಮಧುರ ಶೆಣೈ, ಜಯಪ್ರಕಾಶ್‌ ಭಟ್‌ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೂರೂ ಹಾಡುಗಳನ್ನು ದೇವದಾಸ ನಾಯಕ್‌ ರಚಿಸಿದ್ದಾರೆ. ಪಾತ್ರಧಾರಿಗಳ ಆಯ್ಕೆಯನ್ನು ಆಡಿಷನ್‌ ಮೂಲಕ ನಡೆಸಲಾಯಿತು.

ಮೂಲ್ಕಿ ಮತ್ತು ಕಟಪಾಡಿಯಲ್ಲಿ 15 ದಿನಗಳ ಕಾಲ ಚಿತ್ರೀಕರಿಸಲಾಗಿತ್ತು. ಮೂಲ್ಕಿಯಲ್ಲಿ ಪೂರ್ಣ ಚಿತ್ರೀಕರಣವಾದರೆ, ದೇವಸ್ಥಾನದ ದೃಶ್ಯಗಳನ್ನು ಕಟಪಾಡಿಯಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಕತೆಯ ಗಟ್ಟಿತನ ಮತ್ತು ಪಾತ್ರಪೋಷಣೆಯನ್ನು ಅರಿತ ಅಮೆರಿಕ ದೇಶವಾಸಿ ಸಂಜಯ್‌ ಅವರು ಭಾರತಕ್ಕೆ ಬಂದು ತಮ್ಮ ಪಾತ್ರ ನಿರ್ವಹಿಸಿದ್ದು ಚಿತ್ರದ ಗುಣಮಟ್ಟವನ್ನು ತಿಳಿಸುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next