Advertisement
ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕೊಂಕಣ ರೈಲ್ವೇಯು ಭಾರೀ ಮಳೆಯ ಸಂದರ್ಭ ತನ್ನ ಮಾರ್ಗದಲ್ಲಿ ಓಡುವ ರೈಲುಗಳ ವೇಗವನ್ನು ಗಂಟೆಗೆ 100 ಕಿ.ಮೀ.ಗಳ ಸರಾಸರಿ ವೇಗದಿಂದ ಗಂಟೆಗೆ 40 ಕಿ.ಮೀ.ವರೆಗೆ ಕಡಿಮೆ ಮಾಡುವಂತೆ ಲೋಕೋ ಪೈಲಟ್‌ಗಳಿಗೆ ಸೂಚನೆ ನೀಡಿದೆ. ಇದರರ್ಥ ಮುಂಬಯಿ-ಗೋವಾ ಅಥವಾ ಇತರ ಕೊಂಕಣ ರೈಲ್ವೇ ಮಾರ್ಗಗಳಲ್ಲಿ ಓಡುವ ದೂರದ ರೈಲುಗಳು ಭಾರಿ ಮಳೆಯಾದಾಗ ಗಂಟೆಗೆ 40 ಕಿ.ಮೀ. ವೇಗದಲ್ಲಿ ಓಡಲಿವೆ. ಕೊಂಕಣ ರೈಲ್ವೇಯು ಅದರ ಮಾನ್ಸೂನ್ ವೇಳಾಪಟ್ಟಿಯನ್ನು ಜಾರಿಗೊಳಿಸುವ ಸಮಯದಲ್ಲಿ ಅಂದರೆ ಜೂನ್ 10 ರಿಂದ ಅಕ್ಟೋಬರ್ ಅಂತ್ಯದ ವರೆಗೆ ಈ ವೇಗ ನಿಯಂತ್ರಣ ಸೂಚನೆ ಅನ್ವಯವಾಗಲಿದೆ.
ಮಧ್ಯ ರೈಲ್ವೇಯ ರೋಹಾ ನಿಲ್ದಾಣದ ಅನಂತರ ಬರುವ ಕೋಲಾಡ್‌ನಿಂದ ಮಂಗಳೂರು ನಿಲ್ದಾಣಕ್ಕೆ ಮೊದಲು ಬರುವ ಥೋಕೂರು ವರೆಗಿನ ಕೊಂಕಣ ರೈಲ್ವೇ ವಿಭಾಗದಲ್ಲಿ ಗೂಡ್ಸ್ ರೈಲುಗಳನ್ನು ಹೊರತುಪಡಿಸಿ, ಒಟ್ಟು 50 ಪ್ಯಾಸೆಂಜರ್ ರೈಲುಗಳು ಓಡುತ್ತವೆ.
ಕಳೆದ 13 ವರ್ಷಗಳಲ್ಲಿ ಕೊಂಕಣ ರೈಲ್ವೇ ಮಾರ್ಗದ ಉದ್ದಕ್ಕೂ ಕಾರ್ಯರೂಪಕ್ಕೆ ಬಂದಿರುವ ದೊಡ್ಡ ಪ್ರಮಾಣದ ಭೂ-ಸುರಕ್ಷತೆ ಕಾರ್ಯಗಳು ಕಲ್ಲುಗಳ ಕುಸಿತ ಮತ್ತು ಮಣ್ಣಿನ ಕುಸಿತದ ಘಟನೆಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಕಳೆದ ಆರು ವರ್ಷಗಳಲ್ಲಿ ಮಳೆಗಾಲದಲ್ಲಿ ಬಂಡೆಗಳ ಕುಸಿತದಿಂದಾಗಿ ರೈಲುಗಳಿಗೆ ಯಾವುದೇ ಪ್ರಮುಖ ಅಡೆತಡೆಗಳು ಸಂಭವಿಸಿಲ್ಲ ಎಂದವರು ತಿಳಿಸಿದ್ದಾರೆ. ಏತನ್ಮಧ್ಯೆ, ಗಣಪತಿ ಉತ್ಸವಕ್ಕೆ ಕೊಂಕಣ ರೈಲ್ವೇ 166 ವಿಶೇಷ ರೈಲುಗಳನ್ನು ಘೋಷಿಸಿದೆ. ಸುರಕ್ಷತೆಗಾಗಿ ಕ್ರಮ
ಕೊಂಕಣ ರೈಲ್ವೇ ಮಾರ್ಗದಲ್ಲಿ ರೈಲುಗಳು ಗಂಟೆಗೆ 100 ಕಿ.ಮೀ. ಅಥವಾ ಅದಕ್ಕೂ ಹೆಚ್ಚಿನ ವೇಗದಲ್ಲಿ ಚಲಿಸುತ್ತವೆ, ಆದರೆ ಮಾನ್ಸೂನ್ ಸಮಯದಲ್ಲಿ ಕೆಲವು ವಿಭಾಗಗಳಲ್ಲಿ ಈ ವೇಗವು 75ರಿಂದ 90 ಕಿ.ಮೀ.ಗೆ ಕಡಿಮೆಯಾಗುತ್ತದೆ. ಭಾರೀ ಮಳೆಯ ಸಮಯದಲ್ಲಿ ಗೋಚರತೆಯು ತೀವ್ರವಾಗಿ ಕಡಿಮೆಯಾಗುತ್ತದೆ ಮತ್ತು ಕೊಂಕಣ ರೈಲ್ವೇ ಮಾರ್ಗವು ಭೂಕುಸಿತಗಳು ಮತ್ತು ಇತರ ಮಳೆ ಪ್ರೇರಿತ ವಿಕೋಪಗಳಿಗೆ ಕಾರಣವಾಗುವಂತಹ ಗುಡ್ಡಗಾಡು ಭೂಪ್ರದೇಶದ ಮೂಲಕ ಹಾದು ಹೋಗುವ ಹಿನ್ನೆಲೆಯಲ್ಲಿ ರೈಲುಗಳ ವೇಗವನ್ನು ಮತ್ತಷ್ಟು ಕಡಿಮೆಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕೊಂಕಣ ರೈಲ್ವೇ ವಕ್ತಾರರು ತಿಳಿಸಿದ್ದಾರೆ.
Related Articles
ತುರ್ತು ಪರಿಸ್ಥಿತಿಯಲ್ಲಿ ತ್ವರಿತ ಸಂವಹನಕ್ಕಾಗಿ ರೈಲ್ವೇಯು ಲೋಕೋ ಪೈಲಟ್‌ಗಳು, ಸ್ಟೇಷನ್ ಮಾಸ್ಟರ್‌ಗಳು ಮತ್ತು ಫೀಲ್ಡ… ಅಧಿಕಾರಿಗಳಿಗೆ ಮೊಬೈಲ್ ಫೋನ್‌ಗಳನ್ನು ಒದಗಿಸಿದೆ. ರೈಲು ಸಿಬಂದಿಗಳಿಗೆ ವಾಕಿ-ಟಾಕಿಗಳನ್ನೂ ಒದಗಿಸಲಾಗಿದೆ ಮತ್ತು ವೈರ್‌ಲೆಸ್ ಸಂವಹನವನ್ನು ಸಕ್ರಿಯಗೊಳಿಸಲು ಪ್ರತಿ ನಿಲ್ದಾಣದಲ್ಲಿ 25-ವ್ಯಾಟ್ ವಿಎಚ್‌ಎಫ್‌ನ ಬೇಸ್ ಸ್ಟೇಷನ್ ಅನ್ನು ಸ್ಥಾಪಿಸಲಾಗಿದೆ. ಇದಲ್ಲದೇ ಸಂಭವನೀಯ ಗುಡ್ಡ ಕುಸಿತದ ಸ್ಥಳಗಳಲ್ಲಿ ತುರ್ತು ಪರಿಸ್ಥಿತಿಯ ವೇಳೆ ಸೇವೆಗಳ ತ್ವರಿತ ಚಾಲನೆಗಾಗಿ ಗುಡ್ಡ ಅಗೆಯುವ ಯಂತ್ರಗಳನ್ನು ಸಿದ್ಧ ಇಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
Advertisement