Advertisement

ಬೇಳೂರು: ಕೋಣಬಗೆಯ ಶಿಥಿಲ ಸೇತುವೆಗೆ ಮುಕ್ತಿ; ಚುರುಕುಗೊಂಡ ನೂತನ ಸೇತುವೆ ಕಾಮಗಾರಿ

12:17 PM Nov 17, 2022 | Team Udayavani |

ತೆಕ್ಕಟ್ಟೆ: ಬೇಳೂರು ಗ್ರಾ.ಪಂ. ವ್ಯಾಪ್ತಿಯ ಹಿರೆ ಹೊಳೆಗೆ ಅಡ್ಡಲಾಗಿರುವ ಕೋಣಬಗೆ -ಅಚ್ಲಾಡಿ ಸಂಪರ್ಕ ಸೇತುವೆ ಶಿಥಿಲಗೊಂಡು ಅಪಾಯಕಾರಿಯಾಗಿ ಪರಿಣಮಿಸಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಶಿಫಾರಸಿನ ಮೇರೆಗೆ ಪಶ್ಚಿಮ ವಾಹಿನಿ ಯೋಜನೆ ಅಡಿಯಲ್ಲಿ 2.10 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಸುಮಾರು 3 ಮೀಟರ್‌ ಅಗಲದ ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣ ಕಾಮಗಾರಿಗೆ ಸಿದ್ಧತೆ ನಡೆಯುತ್ತಿದೆ.

Advertisement

ಶಿಥಿಲ ಸೇತುವೆಗೆ ಮುಕ್ತಿ

ಸುಮಾರು 40 ವರ್ಷ ಹಿಂದೆ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇದರ ಸುತ್ತಮುತ್ತ ಬೇಸಗೆಯಲ್ಲಿ ಯಾಂತ್ರಿಕ ಮರಳುಗಾರಿಕೆ ನಡೆಸುವ ಪರಿಣಾಮ ಸೇತುವೆ ಮುರಿದು ಅಪಾಯದ ಮಟ್ಟವನ್ನು ತಲುಪಲು ಕಾರಣವಾಗಿತ್ತು. ಮಳೆಗಾಲದಲ್ಲಿ ನೀರಿನ ಒಳಹರಿವಿನ ತೀವ್ರತೆ ಹೆಚ್ಚಾಗಿರುವುದರಿಂದ ಸೇತುವೆ ಮಧ್ಯ ಭಾಗ ಮುರಿದು ಹೋಗಿ ಸಂಭವನೀಯ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಶಿಥಿಲಗೊಂಡಿರುವ ಅಪಾಯಕಾರಿ ಸೇತುವೆ ತೆರವುಗೊಳಿಸಿ ನೂತನ ಸೇತುವೆ ನಿರ್ಮಾಣಕ್ಕೆ ಮುಂದಾಗಿದೆ.

ಬೇಳೂರು -ಅಚ್ಲಾಡಿ: ಸಂಪರ್ಕ ಕೊಂಡಿ ಬೇಳೂರು ಗ್ರಾಮದಿಂದ ಅಚ್ಲಾಡಿ ಗ್ರಾಮಗಳಿಗೆ ಪ್ರಮುಖ ಸಂಪರ್ಕ ಸೇತುವಿನಿಂದಾಗಿ ಎರಡು ಗ್ರಾಮಗಳಿಗೆ ಸುಮಾರು 2 ಕಿ.ಮೀ. ಸಮೀಪದ ಅಂತರದಲ್ಲಿ ಸಂಧಿಸಬಹುದು. ಇಲ್ಲದಿದ್ದಲ್ಲಿ ಸುಮಾರು 8 ಕಿ.ಮೀ. ಸುತ್ತುವರಿದು ದೂರ ಕ್ರಮಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿನ ಗ್ರಾಮಸ್ಥರದಾಗಿದ್ದು, ಶಾಸಕ ಹಾಲಾಡಿ ಶ್ರೀನಿವಾಸ ಶಟ್ಟಿ ಸ್ಪಂದನೆಗೆ ಬೇಳೂರು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಉದಯವಾಣಿ ವರದಿ

Advertisement

ಕೋಣಬಗೆ – ಅಚ್ಲಾಡಿ ಸಂಪರ್ಕ ಸೇತುವೆ ಅಪಾಯದಲ್ಲಿದ್ದು ಈ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉದಯವಾಣಿ ನಿರಂತರ ವಿಶೇಷ ವರದಿ ಪ್ರಕಟಿಸಿತ್ತು.

ದಶಕಗಳ ಕನಸು: ಹಲವು ದಶಕಗಳ ಕನಸಾಗಿರುವ ಪ್ರಮುಖ ಸಂಪರ್ಕ ರಸ್ತೆ ಕಲ್ಪಿಸುವ ಈ ಕೋಣಬಗೆ ಸೇತುವೆ ಶಿಥಿಲಗೊಂಡು ಅಪಾಯಕಾರಿಯಾಗಿತ್ತು. ಈ ಬಗ್ಗೆ ಸಾರ್ವಜನಿಕರು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಪ್ರಸ್ತುತ ಶಾಸಕರ ವಿಶೇಷ ಮುತುವರ್ಜಿಯಿಂದಾಗಿ ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ದಶಕಗಳ ಕನಸು ನನಸಾಗುತ್ತಿರುವುದು ನಿಜಕ್ಕೂ ಸಂತಸ ತಂದಿದೆ. –ಮಧುಕರ ಶೆಟ್ಟಿ ಬೇಳೂರು, ಸ್ಥಳೀಯರು

ಗ್ರಾಮೀಣರಿಗೆ ಅನುಕೂಲ: ನೇರವಾಗಿ ನಿರ್ಮಾಣವಾಗಿದ್ದ ಈ ಕಿರು ಸೇತುವೆ ಮುರಿದು ಹೋಗಿ ಅಪಾಯದ ಮಟ್ಟವನ್ನು ತಲುಪಿದ್ದು, ಸೇತುವೆ ಮಧ್ಯದಲ್ಲಿ ಬಿರುಕು ಬಿಟ್ಟಿದ್ದು ಸಂಪೂರ್ಣ ಶಿಥಿಲಗೊಂಡಿತ್ತು. ಈ ನಡುವೆ ಗ್ರಾಮಸ್ಥರು ಅಪಾಯದ ತೀವ್ರತೆ ಅರಿಯದೆ ನಿತ್ಯ ಸಂಚಾರ ನಡೆಸುತ್ತಿದ್ದರು. ಈ ಬಗ್ಗೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ವಿಶೇಷ ಮುತುವರ್ಜಿಯಿಂದ ಈ ಸೇತುವೆ ನಿರ್ಮಾಣವಾಗುತ್ತಿರುವುದರಿಂದ ಗ್ರಾಮೀಣ ಭಾಗದ ಕೃಷಿಕರು ಹಾಗೂ ಹೈನುಗಾರರ ಪಾಲಿಗೆ ವರವಾಗಲಿದೆ.- ರವಿಕುಮಾರ್‌ ಶೆಟ್ಟಿ ಬೇಳೂರು, ಸಂಘಟಕರು

Advertisement

Udayavani is now on Telegram. Click here to join our channel and stay updated with the latest news.

Next