Advertisement

ಕೋಮಲ್ ಈಸ್ ಬ್ಯಾಕ್: ‘ಕಾಲಾಯ ನಮಃ’ಎಂದ ನಟ

11:16 AM Nov 21, 2022 | Team Udayavani |

ಎಲ್ಲರಿಗೂ ಗೊತ್ತಿರುವಂತೆ, ನಟ ಕೋಮಲ್‌ ತಮ್ಮ ಕಾಮಿಡಿ ನಟನೆಯ ಮೂಲಕವೇ ಚಿತ್ರರಂಗದಲ್ಲಿ ಪ್ರೇಕ್ಷಕರಿಗೆ ಪ್ರಿಯವಾದವರು. ಬಳಿಕ ಕಾಮಿಡಿ ಸಿನಿಮಾಗಳ ಮೂಲಕವೇ ನಾಯಕ ನಟನ ಸ್ಥಾನವನ್ನೂ ಗಿಟ್ಟಿಸಿಕೊಂಡವರು. ನಂತರ ಕೋಮಲ್‌ ನಿಧಾನವಾಗಿ ಕಾಮಿಡಿ ಸಿನಿಮಾಗಳಿಂದ ವಿಮುಖರಾಗಿ ಬೇರೆ ಥರದ ಪಾತ್ರಗಳತ್ತ ತಮ್ಮನ್ನು ತೆರೆದುಕೊಳ್ಳಲು ಮುಂದಾದರು. ಈಗ ಮತ್ತೆ ತಮ್ಮ ಹಿಂದಿನ ಶೈಲಿಗೆ ಮರಳಲು ಮಂದಾಗಿರುವ ಕೋಮಲ್‌, ಮತ್ತೂಂದು ಕಾಮಿಡಿ ಕಂ ಸಸ್ಪೆನ್ಸ್‌ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದ್ದಾರೆ. ಈ ಬಾರಿ ನಟನೆ ಜೊತೆಗೆ ನಿರ್ಮಾಣ ಕೂಡಾ ಇವರರದ್ದೇ. ಕೋಮಲ್‌ ಕನಸಿನ “ಕಾಲಾಯ ನಮಃ’ ಎಂಬ ಚಿತ್ರವೊಂದು ಇತ್ತೀಚೆಗೆ ಸೆಟ್ಟೇರಿದೆ.

Advertisement

ತಮ್ಮ ಕಂಬ್ಯಾಕ್‌ ಬಗ್ಗೆ ಮಾತನಾಡುವ ಕೋಮಲ್‌, “ಮನುಷ್ಯನ ಜೀವನದಲ್ಲಿ ಗ್ರಹಗಳ ಪ್ರಭಾವ ಅಪಾರ. ನನ್ನ ಜೀವನದಲ್ಲೂ ಹಾಗೆ. ನಮ್ಮ ಅಣ್ಣ ಜಗ್ಗೇಶ್‌ ಅವರು, ಕೆಲವು ವರ್ಷಗಳ ಹಿಂದೆ ನನ್ನ ಜಾತಕ ನೋಡಿ, ನಿನಗೆ ಈಗ ಕೇತು ದೆಸೆ ನಡೆಯುತ್ತಿದೆ. ಹಾಗಾಗಿ ಸ್ವಲ್ಪ ಹುಷಾರಾಗಿರು ಅಂದಿದ್ದರು. ಹಾಗಾಗಿ ಐದು ವರ್ಷದಿಂದ ನಾನು ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ನಮ್ಮ ಊರಿನ ದೇವರಾದ ಕಾಲಭೈರವನ ಉಪಾಸನೆ ಮಾಡುತ್ತಿದ್ದೆ. ಈಗ ಕಾಲ ಕೂಡಿ ಬಂದಿದೆ. “ಕಾಲಾಯ ನಮಃ’ ಶುರುವಾಗಿದೆ. ಕಾಲಭೈರವ ದೇವರ ಭಕ್ತನಾದ ನನ್ನ ಸಿನಿಮಾ ಶೀರ್ಷಿಕೆ ಕೂಡ, ಕಾಲದಿಂದಲೇ ಶುರುವಾಗುತ್ತಿರುವುದು ಕಾಕತಾಳೀಯ. ಕಾಲ ನಿಲ್ಲುವುದಿಲ್ಲ. ಕಾಲ ಯಾರಿಗೂ ಕಾಯುವುದಿಲ್ಲ. ಈ ರೀತಿ ಕಾಲದ ಬಗ್ಗೆ ನಮ್ಮ ಸಿನಿಮಾ ಸಾಗುತ್ತದೆ. ನನ್ನ ಪತ್ನಿ ಅನಸೂಯ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮತಿವಣನ್‌ ನಿರ್ದೇಶಿಸುತ್ತಿದ್ದಾರೆ. ನನ್ನ ಅಣ್ಣ ಜಗ್ಗೇಶ್‌ ಅವರ ಸಹಕಾರವಿದೆ. ಅಸಿಯಾ ಫಿರ್ದೋಸಿ, ಸುಚೇಂದ್ರ ಪ್ರಸಾದ್‌, ತಿಲಕ್‌ ಹಾಗೂ ನನ್ನ ಅಣ್ಣ ಜಗ್ಗೇಶ್‌ ಅವರ ಪುತ್ರ ಯತಿರಾಜ್‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾನು ನಟಿಸಿರುವ “2020′ ಚಿತ್ರ ಕೂಡ ಸದ್ಯದಲ್ಲೇ ತೆರೆಗೆ ಬರುತ್ತಿದೆ’ ಎಂದು ವಿವರಣೆ ನೀಡಿದರು.

ಇತ್ತೀಚೆಗೆ ನಡೆದ ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದ ಜಗ್ಗೇಶ್‌, “ಜ್ಯೋತಿಷ್ಯ ಯಾರು ನಂಬುತ್ತಾರೊ, ಬಿಡುತ್ತಾರೊ ನನಗ ಗೊತ್ತಿಲ್ಲ. ಆದರೆ ನನಗೆ ನಂಬಿಕೆಯಿದೆ. ಕೋಮಲ್‌ ಗೆ ಕೇತುದೆಸೆ ಇದೆ. 2022ರವರೆಗೂ ಏನು ಮಾಡಬೇಡ ಅಂದಿದ್ದೆ. ಆತ ನನ್ನ ಮಾತು ಕೇಳಿ ಹಾಗೆ ನಡೆದುಕೊಂಡ. ಈಗ ಕಾಲಭೈರವನ ದಯೆಯಿಂದ ಈ ಚಿತ್ರ ಆರಂಭಿಸಿದ್ದಾನೆ. ನನ್ನ ಮಗ ಯತಿರಾಜ್‌ ಕೂಡ ಇದರಲ್ಲಿ ಅಭಿನಯಿಸುತ್ತಿದ್ದಾನೆ. ಈ ತಂಡದಿಂದ ಒಳ್ಳೆಯ ಸಿನಿಮಾ ಬರುವ ವಿಶ್ವಾಸವಿದೆ. ಒಳ್ಳೆಯದಾಗಲಿ ಎಂದರು ಜಗ್ಗೇಶ್‌. ಕಾಲಾಯ ನಮಃ ಒಳ್ಳೆಯ ಕಥೆಯುಳ್ಳ ಚಿತ್ರ. ಕೋಮಲ್‌ ಅವರ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಎಂದು ನಿರ್ದೇಶಕ ಮತಿವಣನ್‌ ತಿಳಿಸಿದರು.

ನಿರ್ಮಾಪಕಿ ಅನಸೂಯ ಕೋಮಲ್‌ ಕುಮಾರ್‌ ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next