ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಪುರಾತನ ರಥವನ್ನು ಬದಲಾಯಿಸಿ ನೂತನ ರಥ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಲೋಕಾರ್ಪಣೆಗೆ ಸಿದ್ಧವಾಗಿದೆ.
ಮುರ್ಡೇಶ್ವರದ ಖ್ಯಾತ ಉದ್ಯಮಿ ದಿ| ಆರ್.ಎನ್. ಶೆಟ್ಟಿ ಅವರ ಪುತ್ರ ಉದ್ಯಮಿ ಸುನಿಲ್ ಶೆಟ್ಟಿ ಅವರು ಒಂದು ಕೋಟಿ ರೂ. ವೆಚ್ಚದಲ್ಲಿ ನೂತನ ರಥ ನಿರ್ಮಾಣದ ವೆಚ್ಚ ಭರಿಸಿರುತ್ತಾರೆ.
ಕೋಟೇಶ್ವರದ ರಾಷ್ಟ್ರಪ್ರಶಸ್ತಿ ಪುರಸ್ಕೃತ ರಥ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಹಾಗೂ ಅವರ ಪುತ್ರ ಶಿಲ್ಪಿ ರಾಜಗೋಪಾಲ ಆಚಾರ್ಯ ಅವರ ನೇತೃತ್ವದಲ್ಲಿ ರಥ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಜನವರಿ ಅಥವಾ ಫೆಬ್ರವರಿಯಲ್ಲಿ ನೂತನ ರಥವನ್ನು ಕೊಲ್ಲೂರಿಗೆ ಒಯ್ಯಲಾಗುವುದು. ಮಾರ್ಚ್‌ನಲ್ಲಿ ನಡೆಯಲಿರುವ ದೇಗುಲದ ರಥೋತ್ಸವದಲ್ಲಿ ನೂತನ ರಥ ಬಳಸುವ ಬಗ್ಗೆ ಯೋಜನೆ ರೂಪಿಸಲಾಗಿದೆ.
Related Articles
400 ವರ್ಷಗಳ ಇತಿಹಾಸ
ದೇಗುಲದಲ್ಲಿ ಈ ವರೆಗೆ ಬಳಸುತ್ತಿದ್ದ ರಥವು ಕೆಳದಿ ಅರಸರ ಕಾಲದ್ದಾಗಿದ್ದು, 400 ವರ್ಷಗಳ ಇತಿಹಾಸವನ್ನು ಹೊಂದಿದೆ. ಆ ರಥದಲ್ಲಿದ್ದ ಶಿಲ್ಪಕಲೆಯಲ್ಲಿ ಯಾವುದೇ ಬದಲಾವಣೆಯಾಗದಂತೆ ನೂತನ ರಥದಲ್ಲಿ ಕೂಡ ರೂಪಿಸಿರುವುದು ರಥ ಶಿಲ್ಪಿಗಳ ಕೈಚಳಕವನ್ನು ಎತ್ತಿಹಿಡಿದಿದೆ.
ಹಳೆಯ ರಥ ಸಂರಕ್ಷಣೆ
400 ವರ್ಷಗಳ ಇತಿಹಾಸ ಹೊಂದಿರುವ ಹಳೆ ರಥವನ್ನು ದೇಗುಲದ ಆನೆಬಾಗಿಲಿನ ಬಳಿ ಸೂಕ್ತ ಸ್ಥಳದಲ್ಲಿ ಸಂರಕ್ಷಣೆ ಮಾಡಿ ಪಾರದರ್ಶಕ ಫ್ರೇಮ್ ಬಳಸಿ ಭಕ್ತರ ವೀಕ್ಷಣೆಗೆ ಇಡಲಾಗುವುದು ಎಂದು ದೇಗುಲದ ಕಾರ್ಯನಿರ್ವಹಣಾ ಕಾರಿ ಮಹೇಶ ತಿಳಿಸಿದ್ದಾರೆ.