Advertisement

ಕೆಸರು ರಸ್ತೆಗೆ ಮುಕ್ತಿ ಕಲ್ಪಿಸಲು ಗ್ರಾಮಸ್ಥರ ಆಗ್ರಹ

12:28 PM Jul 30, 2022 | Team Udayavani |

ಕೊಲ್ಲೂರು: ಗ್ರಾಮೀಣ ಪ್ರದೇಶದ ಅಭಯಾರಣ್ಯಕ್ಕೆ ಚಾಚಿರುವ ಅನೇಕ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕಾನೂನಾತ್ಮಕ ತೊಡಕು ಅಡ್ಡಿ ಇದೆ ಎಂದು ಎನ್ನಲಾಗುತ್ತಿದೆ. ಆದರೆ ಕನಿಷ್ಠ ದುರಸ್ತಿ ಕಾರ್ಯವನ್ನಾದರೂ ಮಾಡಿದರೆ ಸಂಚಾರಕ್ಕಾಗಿ ಕೊಲ್ಲೂರಿನ ಮಾಸ್ತಿಕಟ್ಟೆ- ಬಿದ್ರಕಳಿ ರಸ್ತೆಯನ್ನು ಅವಲಂಬಿಸಿರುವವರ ಕಷ್ಟ ಕೊಂಚವಾದರೂ ಕಡಿಮೆ ಆದೀತು.

Advertisement

ಹೊಂಡಮಯ ರಸ್ತೆ

ಮಾಸ್ತಿಕಟ್ಟೆಯಿಂದ ಮಾವಿನಕಾರು ಹಾಗೂ ಬಾವಡಿಗೆ ಸಾಗಲು 5 ಕಿ.ಮೀ ದೂರ ವ್ಯಾಪ್ತಿಯಷ್ಟು ಕ್ರಮಿಸಬೇಕಾಗಿದೆ. ಮಳೆಗಾಲ ಬಂತೆಂದರೆ ಭಾರೀ ಹೊಂಡ ಹಾಗೂ ಕೆಸರುಮಯವಾಗುವ ಈ ರಸ್ತೆಯೂ ಬೇಸಗೆಯಲ್ಲಿ ಧೂಳುಮಯ. ಈ ಮಾರ್ಗವಾಗಿ ಸಂಚರಿಸುವುದೇ ಒಂದು ಸಾಹಸವಾಗುತ್ತದೆ. ದ್ವಿಚಕ್ರ ವಾಹನ ಸಹಿತ ರಿಕ್ಷಾಗಳಲ್ಲಿ ಹರಸಾಹಸಪಟ್ಟು ಸಾಗ ಬೇಕಾಗಿದೆ. ಅದೆಷ್ಟೋ ಮಂದಿ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಕೆಸರು ರಸ್ತೆಯಲ್ಲಿ ಹೂತುಹೋದ ರಿಕ್ಷಾವನ್ನು ದೂಡಿ ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ.

ಗ್ರಾಮಸ್ಥರ ಬವಣೆ ಬಾವಡಿಯಲ್ಲಿ 12 ಮನೆಗಳಿದ್ದೂ, ಮಾವಿನಕಾರಿನಲ್ಲಿ 45 ಮನೆಗಳಿವೆ. ಒಟ್ಟು 400ಕ್ಕೂ ಮಿಕ್ಕಿ ಮಂದಿ ಇಲ್ಲಿ ವಾಸವಾಗಿದ್ದಾರೆ. ದಿನಂಪ್ರತಿ ಕೊಲ್ಲೂರು ಸಹಿತ ವಂಡ್ಸೆ, ಕುಂದಾಪುರ ಇತರೆಡೆ ಶಾಲೆ ಕಾಲೇಜುಗಳಿಗೆ ಸಾಗುವ ವಿದ್ಯಾರ್ಥಿಗಳು ಸಹಿತ ಕಾರ್ಯನಿಮಿತ್ತ ತೆರಳುವವರು ಪ್ರತೀ ದಿನ ಈ ಮಾರ್ಗವನ್ನು ಅವಲಂಬಿಸಬೇಕಾಗಿದೆ. ಶಾಲೆಗೆ ತೆರಳುವ ಮಕ್ಕಳ ಸ್ಥಿತಿ ಹೇಳತೀರದು. ಕೆಸರಿನಿಂದ, ಭಾರೀ ಗಾತ್ರದ ಹೊಂಡಗಳು ಇರುವ ಈ ರಸ್ತೆಯಲ್ಲಿ ಪಾದಚಾರಿಗಳು ಕಷ್ಟಪಟ್ಟು ಸಾಗಬೇಕಾಗಿದೆ.

ಇನ್ನೂ ಒದಗದ ಪರ್ಯಾಯ ವ್ಯವಸ್ಥೆ

Advertisement

ಅಭಯಾರಣ್ಯದ ನಡುವಿನ ಈ ಮಾರ್ಗದ ದುರಸ್ತಿ ಕಾರ್ಯ ವರ್ಷ ಹಲವು ಕಳೆದರೂ ಬಗೆ ಹರಿಯದಿರುವುದು ಈ ಭಾಗದ ನಿವಾಸಿಗಳಿಗೆ ನಿರಾಸೆ ಉಂಟು ಮಾಡಿದೆ. ವರ್ಷವಿಡೀ ಕಿರಿಕಿರಿ ಅನುಭವಿಸಿ, ಸಾಕಾಗಿರುವ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಮೊರೆ ಹೋದರೂ ಪರಿಹಾರ ದೊರಕದಿರುವುದು ದುರಾದೃಷ್ಟಕರ.

ಮುಚ್ಚಿದ ಸರಕಾರಿ ಶಾಲೆ: ಮಾವಿನಕಾರಿನಲ್ಲಿ 1ರಿಂದ 5ನೇ ತರಗತಿವರೆಗೆ ನಡೆಯುತ್ತಿದ್ದ ಸರಕಾರಿ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲಾಗಿದೆ. ಮೊದಲು ಶಾಶ್ವತ ಶಿಕ್ಷಕರಿದ್ದ ಈ ಶಾಲೆಯಲ್ಲಿ 30ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದರು. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಅಲ್ಲಿನ ವಿದ್ಯಾರ್ಥಿಗಳನ್ನು ಕೊಲ್ಲೂರು, ಶಂಕರನಾರಾಯಣ, ಕುಂದಾಪುರ ಹಾಸ್ಟೆಲ್‌ ಶಾಲೆಗಳಿಗೆ ಸೇರ್ಪಡೆ ಗೊಳಿಸಿರುವುದರಿಂದ ಈ ಶಾಲೆಯ ವಿದ್ಯಾರ್ಥಿ ಸಂಖ್ಯಾಬಲ ಕುಗ್ಗಿತು. ಜೂನ್‌ನಿಂದ ವಿದ್ಯಾರ್ಥಿಗಳಿಲ್ಲದೆ ಮುಚ್ಚಲಾಗಿದೆ. ಸಂಚಾರ ದುಸ್ತರ: ದುಃಸ್ಥಿತಿಯಲ್ಲಿರುವ ಮಾಸ್ತಿಕಟ್ಟೆ -ಬಿದ್ರಕಳಿ ರಸ್ತೆಯನ್ನು ದುರಸ್ತಿಪಡಿಸಲು ಗ್ರಾ.ಪಂ. ಹಾಗೂ ಇಲಾಖೆ ಕ್ರಮ ಕೈಗೊಳ್ಳಬೇಕು. ಮಳೆಗಾಲದಲ್ಲಿ ಈ ಮಾರ್ಗವಾಗಿ ಸಂಚರಿಸುವುದು ಕಷ್ಟಸಾಧ್ಯ. –ಕರುಣಾಕರ ಶೆಟ್ಟಿ, ಮಾವಿನಕಾರು ನಿವಾಸಿ

ಪರಿಹಾರಕ್ಕೆ ಕ್ರಮ: ಮಾಸ್ತಿಕಟ್ಟೆ- ಬಿದ್ರಕಳಿ ರಸ್ತೆಗೆ ಡಾಮರು ಕಾಮಗಾರಿ ನಡೆಸಲು ಅಭಯಾರಣ್ಯದ ಕಾನೂನು ಅಡ್ಡಿಯಾಗಿದೆ. ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ ಹೊಂಡಮಯವಾಗಿದೆ. ಮಳೆ ಕಡಿಮೆಯಾದೊಡನೆ ಅದಕ್ಕೊಂದು ಪರಿಹಾರ ಒದಗಿಸುವ ಬಗ್ಗೆ ಶ್ರಮಿಸಲಾಗುವುದು. –ಶಿವರಾಮಕೃಷ್ಣ ಭಟ್‌, ಅಧ್ಯಕ್ಷರು, ಗ್ರಾ.ಪಂ. ಕೊಲ್ಲೂರು 

ಡಾ| ಸುಧಾಕರ ನಂಬಿಯಾರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next