Advertisement

ಕೊಲ್ಲೂರು: ವಾಗ್ದೇವಿ ಸನ್ನಿಧಿಯಲ್ಲಿ ನೀರಿನ‌ ಬರ; ಬತ್ತಿಹೋದ ಸೌಪರ್ಣಿಕಾ ನದಿ

04:13 PM May 27, 2023 | Team Udayavani |

ಕೊಲ್ಲೂರು: ಸೌಪರ್ಣಿಕಾ ನದಿ ನೀರು ಬರಿದಾಗು ತ್ತಿದ್ದು, ಮುಂದಿನ ಎರಡು ದಿನದೊಳಗೆ ಕೊಲ್ಲೂರಿನ ಪರಿಸರದಲ್ಲಿ ಮಳೆ ಆರಂಭಗೊಳ್ಳದಿದ್ದಲ್ಲಿ ಈ ಭಾಗದ ನಿವಾಸಿಗಳು ಕುಡಿಯುವ ನೀರಿಗಾಗಿ ವಲಸೆ ಹೋಗ ಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗುವ ಭೀತಿ ಇದೆ.

Advertisement

ಕೊಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ವೆಂಟೆಡ್‌ ಡ್ಯಾಮ್‌ಗೆ ನೀರಿನ ಅಭಾವ ಕಾಡುತ್ತಿದ್ದು, ಕೊಡಚಾದ್ರಿ ಬೆಟ್ಟದಿಂದ ಹರಿದುಬರುವ ನೀರು ಕೂಡ ಮಳೆಯಿಲ್ಲದೇ ಬರಿದಾಗಿದ್ದು, ವೆಂಟೆಡ್‌ ಡ್ಯಾಮ್‌ನಲ್ಲಿ ನೀರಿನ ಕೊರತೆ ಎದುರಾಗಿದೆ.

ನಿರ್ವಹಣೆಯ ಕೊರತೆ
ಒಳಚರಂಡಿ ಹಾಗೂ ಕುಡಿಯುವ ನೀರಿನ ಮಂಡಳಿಯ ನಿರ್ವಹಣೆಯ ಕೊರತೆ ವೆಂಟೆಡ್‌ ಡ್ಯಾಮ್‌ ನಲ್ಲಿ ನೀರು ಇಂಗಲು ಕಾರಣವಾಯಿತೇ ಎಂಬ ಪ್ರಶ್ನೆ ಕಾಡುತ್ತಿದೆ. ಮಾರ್ಚ್‌ ತಿಂಗಳಲ್ಲೇ ಡ್ಯಾಮ್‌ನ ಗೇಟ್‌ ವಾಲ್‌ ಬಳಸಿದಲ್ಲಿ ಒಂದಿಷ್ಟು ನೀರು ಸಂಗ್ರಹವಾಗುತ್ತಿದ್ದು, ಬಳಕೆಗೆ ಉಪಯೋಗವಾದೀತೆಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.

ಕೊಲ್ಲೂರು ದೇಗುಲದ ವಸತಿಗೃಹ ಸಹಿತ ದೇಗುಲದ ನಿತ್ಯ ಕಾರ್ಯಗಳು. ಊಟದ ಹಾಲ್‌, ಶೌಚಾಲಯಗಳಿಗೆ ಪ್ರತಿದಿನ ಕನಿಷ್ಠ 56 ಸಾವಿರ ಲೀಟರ್‌ನಷ್ಟು ನೀರಿನ ಅಗತ್ಯವಿದೆ. ಈವರೆಗೆ ಅಚ್ಚುಕಟ್ಟಾಗಿ ನೀರನ್ನು ಬಳಸಲಾಗುತ್ತಿದ್ದು, ಮುಂದಿನ ಒಂದು ವಾರದಲ್ಲಿ ಮಳೆ ಬಾರದಿದ್ದಲ್ಲಿ ನೀರಿನ ûಾಮ ಎದುರಾಗುವ ಭೀತಿ ಇದೆ.

ಟ್ಯಾಂಕರ್‌ ಮೂಲಕ ನೀರು ಸರಬರಾಜು
ಇಲ್ಲಿನ ಖಾಸಗಿ ವಸತಿ ಗೃಹಗಳಲ್ಲಿ ನೀರಿನ ಅಭಾವ ಎದುರಾಗಿದ್ದು, ಬಹುತೇಕರು ಟ್ಯಾಂಕರ್‌ ಮೂಲಕ ನೀರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ.

Advertisement

ಗ್ರಾಮಸ್ಥರ ಬವಣೆ
ಕಳೆದ 15 ದಿನಗಳಿಂದ ಬರಿದಾದ ಬಾವಿಯಿಂದಾಗಿ ಕುಡಿಯುವ ನೀರಿನ ಯೋಜನೆಗೆ ಮೊರೆಹೋಗಿರುವ ಇಲ್ಲಿನ ನಿವಾಸಿಗಳಿಗೆ ನಿತ್ಯ ನೀರಿನ ಸರಬರಾಜಿನ ಕೊರತೆಯಿಂದಾಗಿ ನೀರಿಗಾಗಿ ಬವಣಿಸುವಂತಾಗಿದೆ. ನಿಗಮವು 2-3 ದಿನಕ್ಕೊಮ್ಮೆ ನೀರನ್ನು ಒದಗಿಸುತ್ತಿದ್ದರೂ, ಗ್ರಾಮಸ್ಥರು ನೀರಿಗಾಗಿ ವಲಸೆ ಹೋಗುವ ಭೀತಿ ಕಂಡುಬಂದಿದೆ.

ಪ್ರಾ.ಆರೋಗ್ಯ ಕೇಂದ್ರದಲ್ಲಿ ನೀರಿನ ಕೊರತೆ
ಆಸುಪಾಸಿನ 5 ಗ್ರಾಮಗಳ ಜೀವನಾಡಿಯಾಗಿರುವ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀರಿನ ಕೊರತೆ ಎದುರಾಗಿದೆ. ಹಾಗಾಗಿ ಚಿಕಿತ್ಸೆ ಸಹಿತ ಇನ್ನಿತರ ದೈನಂದಿನ ಉಪಯೋಗಕ್ಕೆ ಬಳಸಲಾಗುವ ನೀರಿಗಾಗಿ ವೈದ್ಯರು ಹಾಗೂ ದಾದಿಯರು ಖಾಸಗಿ ವ್ಯವಸ್ಥೆಯನ್ನು ಅವಲಂಬಿಸಬೇಕಾಗಿದೆ.

ಸೌಪರ್ಣಿಕಾ ನದಿಯಲ್ಲಿ
ಸಾಯುತ್ತಿವೆ ಮೀನುಗಳು
ಕೊಲ್ಲೂರು: ಸೌಪರ್ಣಿಕಾ ನದಿಯಲ್ಲಿ ಬಹಳಷ್ಟು ಮೀನುಗಳು ಜಲಕ್ಷಾಮದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಸಾಮಾನ್ಯವಾಗಿ ಎಪ್ರಿಲ್‌ ಮೇ ತಿಂಗಳಲ್ಲಿ ಈ ಭಾಗದಲ್ಲಿ ಮಳೆಯಾಗುತ್ತಿದ್ದು, ಈ ಬಾರಿ ತಡವಾಗಿ ಆರಂಭಗೊಳ್ಳುತ್ತಿರುವ ಮುಂಗಾರು ಮಳೆಯಿಂದಾಗಿ ಅನೇಕ ಕಡೆ ನದಿಗಳು ಬತ್ತಿಹೋಗುತ್ತಿದ್ದು, ಸೌಪರ್ಣಿಕಾ ನದಿ ನೀರು ಕೂಡ ದಿನೇ-ದಿನೇ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರಿನ ಅಭಾವ ಹಾಗೂ ಕಲುಷಿತಗೊಂಡ ನೀರಿನಿಂದಾಗಿ ಮೀನುಗಳು ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.

ಸ್ಥಳೀಯ ನಿವಾಸಿಗಳು ಹಾಗೂ ಭಕ್ತರು ಕೊಳೆತ ಮೀನುಗಳನ್ನು ನದಿಯಿಂದ ಎತ್ತಿ ಕ್ರಮ ಕೈಗೊಳ್ಳುವಂತೆ ದೇಗುಲ ಹಾಗೂ ಪಂಚಾಯತ್‌ ಗೆ ಮೊರೆಹೋಗಿದ್ದಾರೆ.

ಸುಮಾರು 3,500 ಜನಸಂಖ್ಯೆ ಹೊಂದಿರುವ ಕೊಲ್ಲೂರಿನಲ್ಲಿ 350 ಮನೆಗಳಿದ್ದು, 150 ವಾಣಿಜ್ಯ ಸಂಕೀರ್ಣಗಳಿವೆ. ಕೊಲ್ಲೂರಿನಲ್ಲಿ ನೀರಿನ ಅಭಾವ ಕಂಡುಬಂದಿದೆ. ಅತೀ ಅಗತ್ಯತೆ ಎದುರಾದಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ಬಗ್ಗೆ ಜಿಲ್ಲಾ ಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಮನವಿ ಮಾಡಲಾಗುವುದು.
-ರುಕ್ಕನ ಗೌಡ, ಪಿಡಿಒ ಕೊಲ್ಲೂರು ಗ್ರಾ.ಪಂ.

– ಡಾ| ಸುಧಾಕರ ನಂಬಿಯಾರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next