Advertisement

ವಿದ್ಯಾರ್ಥಿಗಳ ಸ್ವಾಗತಕ್ಕೆ ಸಜ್ಜಾಗದ ಕೊಲ್ಲೂರು ಶಾಲೆ

10:16 AM May 16, 2022 | Team Udayavani |

ವಾಡಿ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಇದೇ ಮೇ 16ರಿಂದ ಶಾಲೆ ಆರಂಭಗೊಳ್ಳುತ್ತಿದ್ದು, ಮಕ್ಕಳು ಶಾಲೆಗೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಅಂದಚಂದದಿ ಬಳುಕತ್ತ ಮಕ್ಕಳ ಸ್ವಾಗತಕ್ಕೆ ನಿಲ್ಲಬೇಕಾದ ಸರ್ಕಾರಿ ಶಾಲೆಗಳು, ಹಳೆ ಸುಣ್ಣ-ಹಳೆ ಗೋಡೆ ಎನ್ನುತ್ತ ಭಣಗುಡುತ್ತಿವೆ.

Advertisement

ಚಿತ್ತಾಪುರ ತಾಲೂಕಿನಲ್ಲಿ ಶಾಲಾ ಪ್ರಾರಂಭೋತ್ಸವದ ಸಂಭ್ರಮ ಕಂಡುಬರುತ್ತಿಲ್ಲ. ಬೇಸಿಗೆ ರಜೆಗೆಂದು ಊರಿಗೆ ಹೋದ ವಿವಿಧ ಗ್ರಾಮಗಳ ಶಾಲೆಯ ಮುಖ್ಯಶಿಕ್ಷಕರು ಶಾಲೆಯತ್ತ ಇಣುಕಿ ನೋಡಿಲ್ಲ. ಶಾಲೆ ವಾತಾವರಣ ಹದಗೆಡುತ್ತಿದ್ದರೂ ಶಿಕ್ಷಣ ಇಲಾಖೆ ಮೌನವಹಿಸಿದೆ. ಬಳವಡಗಿ, ಕುಂಬಾರಹಳ್ಳಿ, ಕಮರವಾಡಿ, ಸೂಲಹಳ್ಳಿ, ರಾವೂರ, ಕನಗನಹಳ್ಳಿ, ಕಡಬೂರ ಸೇರಿದಂತೆ ಇತರ ಗ್ರಾಮಗಳ ಶಾಲೆಗಳಿಗೆ ಶುಚಿತ್ವದ ಸಮಸ್ಯೆ ಕಾಡುತ್ತಿದೆ.

ಚಿತ್ತಾಪುರ ತಾಲೂಕಿನಲ್ಲಿ ಶಿಕ್ಷಣಾ ಧಿಕಾರಿಗಳ ಆಡಳಿತ ವೈಖರಿ ಜಿಡ್ಡುಗಟ್ಟಿದೆ ಎನ್ನುವುದಕ್ಕೆ ಶಾಲೆಗಳು ಎದುರಿಸುತ್ತಿರುವ ಸೌಲಭ್ಯದ ಕೊರತೆಗಳೇ ಸಾಕ್ಷಿಯಾಗಿವೆ. ಸೋಮವಾರ (ಮೇ 16) ಶಾಲೆ ತೆರೆದು ಮಕ್ಕಳನ್ನು ಸ್ವಾಗತಿಸಿಕೊಳ್ಳಿ ಎಂದು ಸರ್ಕಾರ ಆದೇಶ ಹೊರಡಿಸಿದೆ.

ಶಾಲೆ ಶುರುವಾಗುವ ಮುಂಚೆ ತರಗತಿ ಕೋಣೆ, ಆಟದ ಮೈದಾನ, ಶೌಚಾಲಯ ವ್ಯವಸ್ಥೆ ಶುಚಿಗೊಳಿಸಲು ಮುಂದಾಗಬೇಕಿದ್ದ ಶಿಕ್ಷಕರು ನಮಗೇನು ಸಂಭಂದವಿಲ್ಲ ಎನ್ನುವ ಮನಸ್ಥಿತಿಯಲ್ಲಿದ್ದಾರೆ. ನಾಲವಾರ ವಲಯದ ಕೊಲ್ಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಕೋಣೆಗಳು ಮಂಜೂರಾಗಿದ್ದು, ಕಟ್ಟಡ ಕಾಮಗಾರಿ ನಡೆಯುತ್ತಿದೆ.

ಗುತ್ತಿಗೆದಾರ ಮಕ್ಕಳ ಆಟದ ಮೈದಾನವನ್ನು ಕಬಳಿಸಿಕೊಂಡು ಮರಳು, ಕಲ್ಲು, ಸಿಮೆಂಟ್‌ ಮತ್ತು ಕಟ್ಟಡದ ತ್ಯಾಜ್ಯಗಳನ್ನು ಹರಡಿದ್ದಾನೆ. ಕಟ್ಟಿಗೆ ರಾಶಿ, ಕಬ್ಬಿಣದ ರಾಡುಗಳ ದಾಸ್ತಾನನ್ನು ಬೇಕಾಬಿಟ್ಟಿ ಸಂಗ್ರಹಿಸಲಾಗಿದೆ. ಇರುವ ಕಡಿಮೆ ಕೋಣೆಗಳಲ್ಲಿ ವಿದ್ಯುತ್‌ ವೈಯರ್‌, ಸುಣ್ಣದ ಚೀಲ, ಬಣ್ಣದ ಡಬ್ಬಿಗಳು ಹಾಗೂ ಸಿಮೆಂಟ್‌ ಚೀಲಗಳನ್ನು ಹಾಕಿ ಅವಾಂತರ ಸೃಷ್ಟಿಸಿದ್ದಾರೆ.

Advertisement

ಹೆಣ್ಣು ಮತ್ತು ಗಂಡು ಮಕ್ಕಳ ಶೌಚಾಲಯ ಮುರಿದು ಬಿದ್ದಿವೆ. ಬಾಗಿಲುಗಳು ತುಕ್ಕು ಹಿಡಿದಿವೆ. ಕುಡಿಯುವ ನೀರಿನ ಸೌಲಭ್ಯವಿಲ್ಲ. ಹಳೆಯ ನೀರಿನ ಟ್ಯಾಂಕ್‌ ಹಸಿರು ಪಾಚಿಗಟ್ಟಿದ್ದು, ಕಳೆದ ಹದಿನೈದು ವರ್ಷಗಳಿಂದ ಬಳಕೆ ಕೈಬಿಡಲಾಗಿದೆ. ಶಾಲೆಯ ಕಾಂಪೌಂಡ್‌ ಗೋಡೆ ಶಿಥಿಲವಾಗಿ ಉರುಳಿ ಬಿದ್ದಿದೆ.

ಶಾಲೆಯಲ್ಲಿ 1 ರಿಂದ 8ರ ವರೆಗೆ ತರಗತಿಗಳು ನಡೆಯುತ್ತಿದ್ದು, ಒಟ್ಟು 521 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸದ್ಯ 12 ಶಿಕ್ಷಕರಿದ್ದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಐವರು ಶಿಕ್ಷಕರ ಕೊರತೆಯಿದೆ. ಶಾಲೆಗೆ ನಳ ಸಂಪರ್ಕಕ್ಕಾಗಿ ಕೋರಿ ಎಸ್‌ ಡಿಎಂಸಿ ಅಧ್ಯಕ್ಷರು ಮನವಿ ಸಲ್ಲಿಸಿದರೂ ಗ್ರಾಪಂ ಆಡಳಿತ ಸ್ಪಂದಿಸಿಲ್ಲ ಎನ್ನುವ ಆರೋಪವಿದೆ. ಸಮಸ್ಯೆಗಳ ನಡುವೆಯೂ ಶಿಕ್ಷಕರು ಮಕ್ಕಳಿಗೆ ಅಕ್ಷರ ಜ್ಞಾನ ನೀಡುತ್ತಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ಮಕ್ಕಳ ಸಂಖ್ಯೆ (521) ಹೆಚ್ಚಿರುವ ಕೊಲ್ಲೂರಿನ ಶಾಲೆಗೆ ಐವರು ಶಿಕ್ಷಕರ ಕೊರತೆಯಿದೆ. ಕಳೆದ ಸಾಲಿನಿಂದ ಇಂಗ್ಲಿಷ್‌ ಬೋಧನೆ ಶುರುವಾಗಿದೆ. ತರಗತಿ ಕೋಣೆಗಳ ಕೊರತೆ ಗಮನಿಸಿ ತಾಲೂಕು ಆಡಳಿತ ಏಳು ಕೋಣೆಗಳ ನಿರ್ಮಾಣಕ್ಕೆ ಮುಂದಾಗಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಆದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಕಟ್ಟಡ ಕಾಮಗಾರಿ ನಡೆಯುತ್ತಿರುವ ಕಾರಣ ಶುಚಿ ಮಾಡಿದಷ್ಟು ಶಾಲೆಯ ಪರಿಸರ ಹದಗೆಡುತ್ತಿದೆ. ಪರಿಣಾಮ ಸೋಮವಾರ ಬೆಳಗ್ಗೆ 6 ಗಂಟೆಯಿಂದ 10 ಗಂಟೆ ವರೆಗೆ ಶಾಲಾ ಶುಚಿತ್ವಕ್ಕೆ ಆದ್ಯತೆ ನೀಡಲು ತೀರ್ಮಾನಿಸಿದ್ದೇವೆ. ಮಕ್ಕಳು ಬರುವ ಮುಂಚೆಯೇ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇವೆ. ಕಾಶಪ್ಪ ಬೊಮ್ಮಣ್ಣಿ. –ಮುಖ್ಯಶಿಕ್ಷಕ, .ಹಿ. ಪ್ರಾಥಮಿಕ ಶಾಲೆ, ಕೊಲ್ಲೂರ

ಮಡಿವಾಳಪ್ಪ ಹೇರೂರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next