ಕೊಲ್ಲೂರು: ಜಡ್ಕಲ್ ಗ್ರಾ.ಪಂ. ವ್ಯಾಪ್ತಿಯ ಮೆಕ್ಕೆಯಿಂದ ತಲಕಾಣಕ್ಕೆ ಸಾಗುವ 2 ಕಿ.ಮೀ. ದೂರದವರೆಗಿನ ಮುಖ್ಯ ರಸ್ತೆ ಹೊಂಡಗಳಿಂದ ಕೂಡಿದೆ. ಆ ಮಳೆಗಾಲದಲ್ಲಿ ಇದು ಕೆಸರಿನಿಂದ ಕೂಡಿದ್ದರೆ, ಬೇಸಗೆಯಲ್ಲಿ ಧೂಳು ಮಯವಾಗುತ್ತದೆ.
ಕಳೆದ ಹಲವು ವರ್ಷಗಳಿಂದ ತಲಕಾಣ ರಸ್ತೆ ಅಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳು, ಇಲಾಖೆಯನ್ನು ಸಂಪರ್ಕಿಸಿರುವ ಗ್ರಾಮಸ್ಥರು ಮನವಿ ಸಲ್ಲಿಸಿ ರಸ್ತೆಯ ದುರಸ್ತಿಗೊಂದು ಶಾಶ್ವತ ಪರಿಹಾರ ಒದಗಿಸುವುದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಆದರೆ ಈವರೆಗೂ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯ ನಡೆಯದಿರುವುದರ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2 ಕಿ.ಮೀ. ಸಂಚಾರ ವ್ಯಾಪ್ತಿಯ ಇಲ್ಲಿನ ಮುಖ್ಯ ರಸ್ತೆ 400 ಮೀ.ವರೆಗೆ ಮಾತ್ರ ರಸ್ತೆ ದುರಸ್ತಿಗೊಂಡಿರುವುದು ಇನ್ನುಳಿದ ಭಾಗದ ನಿವಾಸಿಗಳಿಗೆ ಕಿರಿಕಿರಿ ಉಂಟುಮಾಡಿದೆ. 60 ಮನೆಗಳಿವೆ ಪ. ಜಾತಿ, ಪಂಗಡ, ಭೋವಿ, ಮರಾಠಿ, ಬಿಲ್ಲವ, ಸಹಿತ ಇನ್ನಿತರ ಸಮುದಾಯದವರ ಸುಮಾರು 60 ಮನೆಗಳಿವೆ. ಶಾಲಾ ಮಕ್ಕಳು, ಕೂಲಿ ಕಾರ್ಮಿಕರು ಇನ್ನಿತರ ಉದ್ಯೋಗಸ್ಥರು ಮಳೆಗಾಲದಲ್ಲಿ ಕಷ್ಟಪಟ್ಟು ಆ ಮಾರ್ಗವಾಗಿ ಕ್ರಮಿಸುತ್ತಾರೆ.
ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ
ರಸ್ತೆ ದುರಸ್ತಿ ಕಾಮಗಾರಿ ನಡೆಯದಿದ್ದಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಅಲ್ಲಿನ ನಿವಾಸಿಗಳಾದ ರಾಘವೇಂದ್ರ ತಲಕಾಣ, ನಾಗರಾಜ ಹುಣ್ಸೆಮನೆ, ನಾಗೇಂದ್ರ ಹಕ್ಲುಮನೆ ಹಾಗೂ ಜಗದೀಶ ತಲಕಾಣ ಎಚ್ಚರಿಸಿದ್ದಾರೆ.
Related Articles
96 ಲ.ರೂ. ಬಿಡುಗಡೆ
ಪ. ಜಾತಿ , ಪಂಗಡದ ನಿವಾಸಿಗಳ ಅನುಕೂಲತೆಗಾಗಿ ಲೋಕಸಭಾ ಸದಸ್ಯರ ನಿಧಿಯಿಂದ 96 ಲ.ರೂ. ಬಿಡುಗಡೆಯಾಗಿದೆ. ಆದರೆ ಇಲಾಖೆಯ ಅಧಿಕಾರಿ ಗಳಿಗೆ ಎದುರಾದ ತಾಂತ್ರಿಕ ತೊಂದರೆಯಿಂದಾಗಿ ಹಣ ಬಿಡುಗಡೆಯಾದರೂ ಬಳಸಲಾಗದ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಗ್ರಾಮಸ್ಥರ ಬೇಡಿಕೆ ಈಡೇರಿಸಲು ವಿಳಂಬವಾಗುತ್ತಿದೆ.
-ವನಜಾಕ್ಷಿ ಶೆಟ್ಟಿ,ಅಧ್ಯಕ್ಷರು, ಗ್ರಾ,ಪಂ. ಜಡ್ಕಲ್
ಡಾ| ಸುಧಾಕರ ನಂಬಿಯಾರ್