Advertisement

Kollegala; ಪ್ರಧಾನಿ ಮೋದಿಯವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ: ಸಿದ್ದರಾಮಯ್ಯ

03:53 PM Apr 12, 2024 | Team Udayavani |

ಕೊಳ್ಳೇಗಾಲ (ಚಾ.ನಗರ): ಪ್ರಧಾನಿ ನರೇಂದ್ರ ಮೋದಿಯವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಅವರು ಹಿಟ್ಲರ್ ಮತ್ತು ಮುಸಲೋನಿ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರು. ಹೀಗಾಗಿ ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಯಬೇಕಾದರೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಪಟ್ಟಣದ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ಕೊಳ್ಳೇಗಾಲ ಮತ್ತು ಹನೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ಮತ್ತು ಪ್ರಜಾಪ್ರಭುತ್ವ ಪ್ರಧಾನಿ ನರೇಂದ್ರ ಮೋದಿಯವರ ಕೈಯಲ್ಲಿ ಸುರಕ್ಷಿತವಾಗಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ. ಅದನ್ನೇ ಬದಲಾವಣೆ ಮಾಡಲು ನರೇಂದ್ರಮೋದಿಯವರ ಸರ್ಕಾರ ಹೊರಟಿದೆ. ಸಂವಿಧಾನ ಉಳಿಯಲೇಬೇಕು. ಬಡವರು, ಹಿಂದುಳಿದವರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಅಭಿವೃದ್ಧಿ ಆಗಬೇಕಾದರೆ ದೇಶದಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕು. ಪ್ರಜಾಪ್ರಭುತ್ವ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ ಎಂದು ಅವರು ಹೇಳಿದರು.

ನರೇಂದ್ರ ಮೋದಿಯವರು ಪ್ರಧಾನಿಯಾಗಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಮತ್ತೆ 10 ವರ್ಷ ಪ್ರಧಾನಿಯಾಗುತ್ತೇನೆ ಎಂದು ಹೇಳುತ್ತಿದ್ದಾರೆ. 140 ಕೋಟಿ ಜನರ ಅಭಿವೃದ್ಧಿ ಮಾಡುತ್ತೇನೆ ಎಂದರು. ಇವತ್ತಿನವರೆಗೂ ಮಾಡಲಿಲ್ಲ. ಇವರು ಅಬಿವೃದ್ಧಿ ಮಾಡಿದ್ದು ಅಂಬಾನಿ, ಆದಾನಿ, ಟಾಟಾ ಬಿರ್ಲಾಗಳನ್ನು. ಬಡವರು, ರೈತರು, ಮಹಿಳೆಯರ ಅಭಿವೃದ್ಧಿಯಾಲಿಲ್ಲ. ಇಷ್ಟಾದರೂ ನರೇಂದ್ರ ಮೋದಿಯವರಿಗೆ ಬಿಜೆಪಿಗೆ ಓಟು ಹಾಕಬೇಕಾ? ಕೈಮುಗಿದು ಕೇಳಿಕೊಳ್ಳುತ್ತೇನೆ ಬಿಜೆಪಿಗೆ ಓಟು ಹಾಕಬೇಡಿ. ಅವರು ಬಡವರು, ಹಿಂದುಳಿದ, ಮಹಿಳೆಯರ, ಅಲ್ಪಸಂಖ್ಯಾತರ ವಿರೋಧಿಗಳು ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಬಡವರಿಗೆ ಅನೇಕ ಯೋಜನೆ ಕೊಡುತ್ತಿದ್ದಾರಲ್ಲ ಎಂದು ಬಿಜೆಪಿಯವರಿಗೆ ಹೊಟ್ಟೆಉರಿ. ಹೀಗಾಗಿ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದೂಗಳ ಓಟೇ ಬೇಡ ಎಂದು ಹೇಳಿದೆ ಅಂತ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಹೀಗೆ ಸುಳ್ಳು ಸುದ್ದಿ ಸೃಷ್ಟಿಸಿ ಪ್ರಸಾರ ಮಾಡಿದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಿ ಎಂದು ಹೇಳಿದ್ದೇನೆ.

Advertisement

ಚುನಾವಣೆ ನಂತರ ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆಂಬ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಕೊಟ್ಟ ಮಾತಿಗೆ ತಪ್ಪಿಸಿಕೊಳ್ಳುವವನಲ್ಲ. ಹಿಂದೆ ಸಿಎಂ ಆಗಿದ್ದಾಗ ಎಲ್ಲ ಯೋಜನೆ ಈಡೇರಿಸಲಿಲ್ಲವಾ? ಯಾವಾಗ ಮಾತಿಗೆ ತಪ್ಪಿಸಿಕೊಂಡಿದ್ದೇವೆ? ನರೇಂದ್ರ ಮೋದಿ, ಬಿಜೆಪಿ ಮಾತಿಗೆ ತಪ್ಪಿಸಿಕೊಂಡವರು. ಇದೇ ಕಾಂಗ್ರೆಸ್ ಗೂ ಬಿಜೆಪಿಗೂ ಇರುವ ವ್ಯತ್ಯಾಸ. ಸುಳ್ಳೇ ಅವರ ಮನೆ ದೇವರು. ಬಡವರು, ಮಹಿಳೆಯರನ್ನು ಕಂಡರೆ ಅವರಿಗೆ ಆಗಲ್ಲ. ಬಡವರಿಗೆ, ದಲಿತರಿಗೆ, ಮಹಿಳೆಯರಿಗೆ, ಹಿಂದುಳಿದವರಿಗೆ ಶಕ್ತಿ ತುಂಬುವ ಕೆಲಸ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯವೇ ಹೊರತು ಬಿಜೆಪಿಗಲ್ಲ ಎಂದರು.

ಸಚಿವರಾದ ಎಚ್ ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೆ. ವೆಂಕಟೇಶ್ , ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್,  ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಸಿ. ಪುಟ್ಟರಂಗಶೆಟ್ಟಿ, ಎಚ್. ಎಂ. ಗಣೇಶ್ ಪ್ರಸಾದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ ಮರಿಸ್ವಾಮಿ, ಬ್ಲಾಕ್ ಅಧ್ಯಕ್ಷ ತೋಟೇಶ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next