ಕೋಲ್ಕತಾ: ಶ್ರದ್ಧಾ ಕೊಲೆಯ ಭಯಾನಕ ಕೃತ್ಯ ಮಾಸುವ ಮುನ್ನವೇ ಅಂತಹದೇ ಮತ್ತೂಂದು ಕೊಲೆ ಪ್ರಕರಣ ಪಶ್ಚಿಮ ಬಂಗಾಲದ ದಕ್ಷಿಣ 24 ಪರಗಣ ಜಿಲ್ಲೆಯ ಬುರಾಯಿಪುರದಲ್ಲಿ ವರದಿಯಾಗಿದೆ.
ನೌಕಾ ಪಡೆಯ ನಿವೃತ್ತ ಅಧಿಕಾರಿಯಾಗಿರುವ ತಂದೆಯನ್ನು ಮಗ ಕೊಲೆ ಮಾಡಿ, ಮೃತದೇಹವನ್ನು ಆರು ಭಾಗಗಳನ್ನಾಗಿ ತುಂಡರಿಸಿ, ಅದನ್ನು ಬುರಾಯಿಪುರದ ಬೇರೆ ಬೇರೆ ಸ್ಥಳಗಳಿಗೆ ಎಸೆದು ಬಂದಿದ್ದಾನೆ ಎನ್ನಲಾಗಿದೆ.
ಉಜ್ಜಲ್ ಚಕ್ರವರ್ತಿ (55) ಮೃತ ದುರ್ದೈವಿ. ಪ್ರಕರಣ ಸಂಬಂಧ ಬುರಾಯಿಪುರ ಪೊಲೀಸರು ಉಜ್ಜಲ್ ಅವರ ಪತ್ನಿ ಹಾಗೂ ಕಾಲೇಜು ವ್ಯಾಸಂಗ ಮಾಡುತ್ತಿದ್ದ ಮಗನನ್ನು ಬಂಧಿಸಿದ್ದಾರೆ.
ಕಾಲೇಜು ಶುಲ್ಕ ಕಟ್ಟಬೇಕೆಂದು ತಂದೆಯ ಬಳಿ ಹಣ ಕೇಳಿದ್ದಾನೆ. ಉಜ್ಜಲ್ ಕೊಡಲು ನಿರಾಕರಿಸಿದ್ದಾರೆ. ಹಠ ಮಾಡಿ ದಕ್ಕೆ ಕಪಾಳಕ್ಕೆ ಬಿಗಿದಿದ್ದಾರೆ. ಇದರಿಂದ ರೊಚ್ಚಿಗೆದ್ದ ಮಗ, ಅವರನ್ನು ಜೋರಾಗಿ ತಳ್ಳಿದ್ದಾನೆ. ಅವರ ತಲೆ ಕುರ್ಚಿಗೆ ಬಡಿದು ಪ್ರಜ್ಞೆ ಕಳೆದುಕೊಂಡಿದ್ದಾರೆ. ಅನಂತರ ಪುತ್ರ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೇ ಮೃತದೇಹವನ್ನು ಬಾತ್ರೂಮ್ಗೆ ತೆಗೆದುಕೊಂಡು ಹೋಗಿ ಮರಗೆಲಸದ ಕೋರ್ಸ್ಗೆ ಆತ ಬಳಸುತ್ತಿದ್ದ ಸಾಧನ ಗಳಿಂದ ದೇಹವನ್ನು ಆರು ತುಂಡು ಗಳನ್ನಾಗಿ ಮಾಡಿದ್ದಾನೆ. ಅನಂತರ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಹಂತ- ಹಂತವಾಗಿ ಬೇರೆ ಬೇರೆ ಸ್ಥಳಗಳಿಗೆ ಸೈಕಲ್ನಲ್ಲಿ ತೆಗೆದುಕೊಂಡು ಹೋಗಿ ಎಸೆದು ಬಂದಿದ್ದಾನೆ.