Advertisement

ಕೋಲಾರದ ರಕ್ತ ಚರಿತ್ರೆ!

05:22 PM Jul 09, 2017 | Harsha Rao |

ಒಂದು ವಾರ ಟೈಮ್‌ ಕೊಡು, ಕೆಲಸ ಮುಗಿಸಿ ಬರಿ¤àನಿ … ಹೀಗೆ ಒಂದು ವಾರದ ಸಮಯ ಪಡೆದು ಹೋಗುತ್ತಾನೆ. ಒಂದು ವಾರದ ನಂತರ ಅವನು ವಾಪಸ್ಸು ಬರುವಷ್ಟರಲ್ಲಿ ಮೂರು ಬರ್ಬರ ಹತ್ಯೆಗಳನ್ನು ಮಾಡಿರುತ್ತಾನೆ. ಹಾಗಂತ ಅವನು ಕೊಲೆ ಮಾಡಿದವರ್ಯಾರೂ ಸಾಚಾಗಳಲ್ಲ. ಅವನು ಕೆಟ್ಟವನಾಗಲು, ಇಡೀ ಕೋಲಾರದಲ್ಲಿ ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌ ಆಗುವುದಕ್ಕೆ ಕಾರಣರಾದ ಆ ಮೂವರನ್ನು ಕೊಂದು ಬರುತ್ತಾನೆ. ಇನ್ನು ಈ ಕೆಟ್ಟ ಜೀವನ ಸಾಕು, ತಾನು ಬದಲಾಗಬೇಕು ಎಂದು ತೀರ್ಮಾನಿಸಿ, ಹಳೆಯ ನೆನಪುಗಳನ್ನು, ಹಳೆಯ ಊರನ್ನು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹಳೆಯ ಜೀವನವನ್ನು ಬಿಟ್ಟು, ಇಷ್ಟಪಟ್ಟವಳೊಂದಿಗೆ ಹೊಸ ಹೆಜ್ಜೆ ಇಡುತ್ತಾನೆ. ಆದರೆ, ಅವನಂದುಕೊಂಡಂತೆ
ಬದುಕುವುದಕ್ಕಾಗುತ್ತಾ?

Advertisement

ಕೋಲಾರದ ಕುಖ್ಯಾತ ರೌಡಿ ತಂಗಂ ಬಗ್ಗೆ ಗೊತ್ತಿದ್ದರೆ ಮತ್ತು ಈ ಚಿತ್ರ ಅವನ ಜೀವನವನ್ನಾಧರಿಸಿದೆ ಎಂದು ಗೊತ್ತಿದ್ದರೆ, ಅವನಂದುಕೊಂಡಂತೆ ಬದುಕುವುದಕ್ಕಾಗುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಾಗಾದರೆ ತಂಗಂ ಹೇಗೆ ಸತ್ತ ಮತ್ತು ಒಬ್ಬ ಕುಖ್ಯಾತ ರೌಡಿ ಕುಗ್ಗುವುದಕ್ಕೆ ಏನೆಲ್ಲಾ ಘಟನೆಗಳು ಕಾರಣವಾದವು ಎಂಬುದು “ಕೋಲಾರ’ ಚಿತ್ರದಲ್ಲಿರುವ ಒಂದು ಟ್ವಿಸ್ಟು. ಬಹುಶಃ ಚಿತ್ರದ ಕೊನೆಯಲ್ಲಿ ಇಂಥದ್ದೊಂದು ಟ್ವಿಸ್ಟು ಇಲ್ಲದಿದ್ದರೆ, “ಕೋಲಾರ’ ಇನ್ನೊಂದು ಮಾಮೂಲಿ ಗ್ಯಾಂಗ್‌ಸ್ಟರ್‌ ಸಿನಿಮಾ. ಬಡತನದ ಕುಟುಂಬವೊಂದರ ಹುಡುಗ, ಹೇಗೆ ಮುಂದೊಂದು ದಿನ ಇಡೀ ಊರನ್ನೇ ಅಲ್ಲಾಡಿಸುವ ಗ್ಯಾಂಗ್‌ಸ್ಟರ್‌ ಆಗುತ್ತಾನೆ ಎಂಬ ಕಥೆಗಳು ಸಾಕಷ್ಟು ಸಿನಿಮಾಗಳು ಬಂದಿವೆ. “ಕೋಲಾರ’ ಸಹ ಆ ಸಾಲಿಗೆ ಸೇರುವ ಸಿನಿಮಾ. ಒಂದು ನೈಜ ಪಾತ್ರವನ್ನು ಇಟ್ಟುಕೊಂಡು ಚಿತ್ರ ಮಾಡುವಾಗ ಸಾಕಷ್ಟು ಸಮಸ್ಯೆಗಳಿರುತ್ತವೆ.

ಎಲ್ಲಾ ವಿಷಯವನ್ನು ಅಷ್ಟೇ ನೈಜವಾಗಿ ಹೇಳುವುದಕ್ಕೂ ಆಗುವುದಿಲ್ಲ, ಹಾಗೆಯೇ ಬಿಡುವುದೂ ಕಷ್ಟ. ಆ
ತರಹದ್ದೊಂದು ಸಮಸ್ಯೆಯನ್ನು ನಿರ್ದೇಶಕ ಮಹೇಶ್‌ ಆರ್ಯ ಚಿತ್ರದುದ್ದಕ್ಕೂ ಎದುರಿಸುವುದು ಗೊತ್ತಾಗುತ್ತದೆ. “ಮಿನಿ ವೀರಪ್ಪನ್‌’ ಎಂದೇ ಕುಖ್ಯಾತನಾಗಿದ್ದ ತಂಗಂನ ನೈಜ ಚಿತ್ರಣವನ್ನು ಅವರಿಗೆ ಕಟ್ಟಿಕೊಡುವುದಕ್ಕೇ ಸಾಧ್ಯವಾಗಿಲ್ಲ
ಎಂದರೆ ತಪ್ಪಿಲ್ಲ. ಏಕೆಂದರೆ, ತಂಗಂ ಬಗ್ಗೆ ಕೆಟ್ಟದಾಗಿ ತೋರಿಸಿದರೆ ಮನೆಯವರಿಗೆ ಸಿಟ್ಟು ಬರುತ್ತದೆ. ಇನ್ನು ಅವನನ್ನು ಒಳ್ಳೆಯವನು ಎಂದರೆ ಸಮಾಜ ಒಪ್ಪುವುದಿಲ್ಲ. ಹಾಗಾಗಿ ಇಡೀ ಚಿತ್ರದುದ್ದಕ್ಕೂ ತಂಗಂ ಪಾತ್ರವನ್ನ ಬ್ಯಾಲೆನ್ಸ್‌ ಮಾಡುವುದಕ್ಕೆ ಅವರು ಸಾಕಷ್ಟು ಹೆಣಗಾಡಿದ್ದಾರೆ. ತಂಗಂನ ಬೆಳವಣಿಗೆ, ಮಾಡಿದ ಕೃತ್ಯಗಳು, ಅವನ ಕುಖ್ಯಾತಿ ಹೇಗಿತ್ತು ಇದ್ಯಾವುದನ್ನೂ ತೋರಿಸುವುದಿಲ್ಲ. ಒಂದು ರಾಬರಿ ತೋರಿಸಿ, ತಂಗಂನ ದೊಡ್ಡ ಡಾನ್‌ ಮಾಡಿಬಿಡುತ್ತಾರೆ. ಬೆಟ್ಟದ ಮೇಲೆ ನಿಲ್ಲಿಸಿ, “ಕೋಲಾರ ನಂದು’ ಅಂತ ಹೇಳಿಸಿ, ಇಡೀ ಕೋಲಾರವನ್ನು ಅವನಿಗೆ ಒಪ್ಪಿಸಿಬಿಡುತ್ತಾರೆ.

ಚಿಕ್ಕಂದಿನಲ್ಲಾದ ಘಟನೆಯೊಂದನ್ನು ತೋರಿಸಿ, ಅದರಿಂದಲೇ ತಂಗಂ ರೆಬೆಲ್‌ ಆದ ಎಂಬಂತೆ ಬಿಂಬಿಸಿಬಿಡುತ್ತಾರೆ. ಕೊನೆಗೆ ಅವನನ್ನು ಸಾಯಿಸಿ ಹುತಾತ್ಮನ ತರಹ ಚಿತ್ರಿಸುತ್ತಾರೆ. ತಂಗಂ ಎನ್ನುವ ಒಂದು ಹೆಸರಿಲ್ಲದಿದ್ದರೆ, “ಕೋಲಾರ’ ಇನ್ನೊಂದು ಗ್ಯಾಂಗ್‌ಸ್ಟರ್‌ ಸಿನಿಮಾ. ಇಲ್ಲಿ ಅದೇ ಎರಡು ಗ್ಯಾಂಗ್‌ಗಳ ನಡುವೆ ಕಾದಾಟ, ಅದೇ ರಕ್ತಪಾತ, ಹಿಂಸೆ, ಐಟಂ ಸಾಂಗ್‌ ಎಲ್ಲವೂ ಮುಂದುವರೆದಿದೆ. ಇದೆಲ್ಲದರ ಮಧ್ಯೆ ಯಾವುದೇ ಆಸಕ್ತಿಕರ ವಿಷಯವಾಗಲೀ, ಟ್ವಿಸ್ಟ್‌ ಆಗಲೀ
ಇಲ್ಲ. ಚಿತ್ರದ ಕೊನೆಯಲ್ಲೊಂದು ದೊಡ್ಡ ಟ್ವಿಸ್ಟ್‌ ಇದೆ ಮತ್ತು ಅದಕ್ಕಾಗಿ ತುಂಬಾ ಕಾಯಬೇಕು.

ಇನ್ನು ಚಿತ್ರದಲ್ಲಿ ಒಂದಿಷ್ಟು ಗಮನಾರ್ಹ ವಿಷಯಗಳೂ ಇವೆ. ಅದು ಭಾಷೆ ಮತ್ತು ನೇಟಿವಿಟಿಗೆ ಸಂಬಂಧಿಸಿದ್ದು. ಕೋಲಾರದ ಪರಿಸರವನ್ನು ಮತ್ತು ಭಾಷೆಯನ್ನು ನಿರ್ದೇಶಕ ಮಹೇಶ್‌ ಬಹಳ ಚೆನ್ನಾಗಿ ಹಿಡಿದಿಟ್ಟಿದ್ದಾರೆ. ಕನ್ನಡ, ತಮಿಳು ಮತ್ತು ತೆಲುಗು ಮಿಶ್ರಿತ ಸಂಭಾಷಣೆಗಳು ಗಮನಸೆಳೆಯುತ್ತವೆ. ಯೋಗಿ, “ನಾನ್‌ ಕಡುವಳ್‌’ ರಾಜೇಂದ್ರನ್‌, ಸಂಗೀತಾ
ಬಾಲನ್‌, ಆದಿತ್ಯ ಮೆನನ್‌, ಯತಿರಾಜ್‌ ಮುಂತಾದವರು ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅದರಲ್ಲೂ ರಾಜೇಂದ್ರನ್‌ ಮತ್ತು ಸಂಗೀತಾ ಬಾಲನ್‌ ನಡುವಿನ ಜಿದ್ದಾಜಿದ್ದಿ, ಆ ಸಂದರ್ಭದಲ್ಲಿ ಅವರಿಬ್ಬರ ನಟನೆ ಇಷ್ಟವಾಗುತ್ತದೆ. ದರ್ಶನ್‌ ಕನಕ ಛಾಯಾಗ್ರಹಣದಲ್ಲಿ ಇಡೀ ಪರಿಸರ ಚೆನ್ನಾಗಿ ಮೂಡಿಬಂದಿದೆ. ಹೇಮಂತ್‌ ಕುಮಾರ್‌ ಹಾಡುಗಳಲ್ಲಿ
ನೆನಪಿನಲ್ಲುಳಿಯುವಂತದ್ದೇನೂ ಇಲ್ಲ. 

Advertisement

– ಚೇತನ್

Advertisement

Udayavani is now on Telegram. Click here to join our channel and stay updated with the latest news.

Next