Advertisement

ದಸರಾಗೆ ಕೋಲಾರದ ಯೋಗಾಚಾರ್ಯ ಸ್ತಬ್ಧಚಿತ್ರ

03:54 PM Sep 27, 2022 | Team Udayavani |

ಕೋಲಾರ: 2 ವರ್ಷಗಳ ಕೊರೊನಾ ಕಂಟಕದ ನಂತರ ಮೈಸೂರು ದಸರಾವನ್ನು ಅದ್ದೂರಿಯಾಗಿ ನಡೆಸಲು ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ಈ ಬಾರಿ ದಸರಾ ಅಂಬಾರಿ ಉತ್ಸವದಲ್ಲಿ ಕೋಲಾರ ಜಿಲ್ಲೆಯಿಂದ ಜಗತ್ತಿಗೆ ಯೋಗದ ಮಹತ್ವ ಸಾರಿದ ಬಿ.ಕೆ.ಎಸ್‌.ಅಯ್ಯಂಗಾರ್‌ ಸ್ತಬ್ಧಚಿತ್ರ ಪ್ರದರ್ಶಿಸಲು ತೀರ್ಮಾನಿಸಲಾಗಿದೆ.

Advertisement

ಮೈಸೂರಿನಲ್ಲಿಯೇ ಯೋಗ ಕಲಿತು ಅರಮನೆಯ ಯೋಗಾಚಾರ್ಯರಾಗಿ ರೂಪುಗೊಂಡು ಆನಂತರ ಯೋಗವನ್ನು ವಿಶ್ವದ ನೂರಕ್ಕೂ ಹೆಚ್ಚು ದೇಶಗಳಲ್ಲಿ ಪಸರಿಸಲು ಬಿ.ಕೆ.ಎಸ್‌.ಅಯ್ಯಂಗಾರ್‌ ಕಾರಣರಾದರು. ಸ್ತಬ್ಧಚಿತ್ರದ ಆಯ್ಕೆ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಉಮಾಮಹದೇವನ್‌, ಜಿಪಂ ಸಿಇಒ ಯುಕೇಶ್‌ಕುಮಾರ್‌ ನೇತೃತ್ವದಲ್ಲಿ ಮೈಸೂರು ದಸರಾಗೆ ಕಳುಹಿಸಬೇಕಾಗಿರುವ ಸ್ತಬ್ಧಚಿತ್ರಗಳ ಕುರಿತಂತೆ ಸುದೀರ್ಘ‌ವಾಗಿ ಚರ್ಚಿಸಲಾಗಿತ್ತು. ಅಂತಿಮವಾಗಿ ಕೋಲಾರದ ಐತಿಹ್ಯ ಪುರಾಣ ಸ್ಥಳ ಮಹತ್ವದ ಮೂರು ಸ್ತಬ್ಧಚಿತ್ರಗಳ ವಿಷಯವನ್ನು ಮೈಸೂರು ದಸರಾ ಸಮಿತಿಗೆ ಕೋಲಾರದಿಂದ ತೆಗೆದುಕೊಂಡು ಹೋಗಲಾಗಿತ್ತು. ಮೈಸೂರು ದಸರಾ ಸಮಿತಿ ಮೂರರ ಪೈಕಿ ಈ ಶತಮಾನದಲ್ಲಿ ಯೋಗದ ಮಹತ್ವ ಸಾರಿದ ಬಿ. ಕೆ.ಎಸ್‌.ಅಯ್ಯಂಗಾರ್‌ರ ಸ್ತಬ್ಧಚಿತ್ರಕ್ಕೆ ಸಮ್ಮತಿ ನೀಡಿದೆ.

ಬಿ.ಕೆ.ಎಸ್‌.ಅಯ್ಯಂಗಾರ್‌ರ ಸ್ತಬ್ಧಚಿತ್ರವನ್ನು ರೂಪಿಸುವ ಜವಾಬ್ದಾರಿಯನ್ನು ಬೆಂಗಳೂರಿನ ಸರ್ಕಾರದ ಅಂಗ ಸಂಸ್ಥೆ ಎಂಸಿಎ ಮೂಲಕ ರೂಪಿಸಲು ನಿರ್ಧರಿಸಲಾಗಿದೆ. ಸ್ತಬ್ಧಚಿತ್ರ ರೇಖಾಚಿತ್ರವನ್ನು ಈಗಾಗಲೇ ತಯಾರಿಸಿದ್ದು, ಸ್ತಬ್ಧಚಿತ್ರದ ಉಸ್ತುವಾರಿಯನ್ನು ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕ ರವಿಚಂದ್ರ ಹೊತ್ತುಕೊಂಡಿದ್ದಾರೆ. ಸ್ತಬ್ಧಚಿತ್ರ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಮೈಸೂರಿಗೂ ತೆರಳಿದ್ದಾರೆ.

ಸಾಧನೆ ಶಿಖರ ಬಿ.ಕೆ.ಎಸ್‌.ಅಯ್ಯಂಗಾರ್‌ : ಯೋಗಾಚಾರ್ಯ ಬಿ.ಕೆ.ಎಸ್‌.ಅಯ್ಯಂಗಾರ್‌ 1918 ಡಿ. 14ರಂದು ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಬೆಳ್ಳೂರು ಎಂಬ ಪುಟ್ಟ ಗ್ರಾಮದಲ್ಲಿ ಶಿಕ್ಷಕ ಕೃಷ್ಣಮಾಚಾರ್‌ ಮತ್ತು ತಾಯಿ ಶೇಷಮ್ಮ ದಂಪತಿಗಳ ಪುತ್ರರಾಗಿ ಬೆಳ್ಳೂರು ಕೃಷ್ಣಮಾಚಾರ್‌ ಸುಂದರರಾಜ್‌ ಅಯ್ಯಂಗಾರ್‌ ಜನಿಸಿದರು. 9ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಅಪೌಷ್ಟಿಕತೆ ಕ್ಷಯ ರೋಗದಿಂದ ನರಳುತ್ತಿದ್ದರು. ತಮ್ಮ 15ನೇ ವಯಸ್ಸಿನಲ್ಲಿ ಮೈಸೂರಿನ ಅರಮನೆಯಲ್ಲಿ ಯೋಗಾಚಾರ್ಯರಾಗಿದ್ದ ಸಂಬಂಧಿ ತಿರುಮಲೈ ಕೃಷ್ಣಮಾಚಾರ್‌ರ ಮನೆಯಲ್ಲಿದ್ದುಕೊಂಡು 2 ವರ್ಷಗಳ ಕಾಲ ಯೋಗಾಭ್ಯಾಸ ಆರಂಭಿಸಿದರು. 1936 ರಲ್ಲಿ ಗುರುವಿನ ಮಾರ್ಗದರ್ಶನದಲ್ಲಿ ಧಾರವಾಡಕ್ಕೆ ಯೋಗ ಪ್ರದರ್ಶನ ಮಾಡಿದ್ದರು. ಸಿವಿಲ್‌ ಸರ್ಜನ್‌ ಡಾ.ವಿ.ಜಿ.ಗೋಖಲೆರವರ ಆಹ್ವಾನದ ಮೇರೆಗೆ 1937 ರಲ್ಲಿ ಪುಣೆಗೆ ತೆರಳಿ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು.

ಟ್ರಸ್ಟ್‌ ನಿರ್ಮಾಣ ಮಾಡಿ ಹುಟ್ಟೂರಾದ ಕೋಲಾರ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಶಾಲೆ, ಕಾಲೇಜು, ಆಸ್ಪತ್ರೆ ಮತ್ತು ಮೂಲ ಸೌಕರ್ಯಗಳ ಸೇವಾ ಕಾರ್ಯಗಳನ್ನು ನಡೆಸಿ ಇಂದಿಗೂ ನೂರಾರು ಮಂದಿಗೆ ನೆರವಾಗುವಂತೆ ಮಾಡಿದ್ದಾರೆ. ಯೋಗಾಭ್ಯಾಸದ ಮೇಲೆ 15 ಕ್ಕೂ ಹೆಚ್ಚು ಗ್ರಂಥಗಳನ್ನು ಇಂಗ್ಲಿಷ್‌, ಮರಾಠಿ ಮತ್ತು ಕನ್ನಡ ಭಾಷೆಯಲ್ಲಿ ರಚಿಸಿದ್ದಾರೆ. ಜಗತ್ತಿನಲ್ಲಿಯೇ ಪ್ರಥಮವಾಗಿ ಪತಂಜಲಿ ಮಹರ್ಷಿ ದೇಗುಲವನ್ನು ಹುಟ್ಟೂರಾದ ಬೆಳ್ಳೂರಿನಲ್ಲಿ ಸ್ಥಾಪಿಸಿ ಪೂಜೆ ಸಲ್ಲುವಂತೆ ಮಾಡಿದ್ದಾರೆ. 2004ರಲ್ಲಿ ಟೈಮ್ಸ್‌ ನಿಯತಕಾಲಿಕವು ಜಗತ್ತಿನ 100 ಮಂದಿ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಬಿ.ಕೆ.ಎಸ್‌ .ಅಯ್ಯಂಗಾರ್‌ ಒಬ್ಬರೆಂದು ಗುರುತಿಸಿ ಗೌರವಿಸಿದೆ.

Advertisement

ಭಾರತ ಸರ್ಕಾರವು ಬಿ.ಕೆ.ಎಸ್‌.ಅಯ್ಯಂಗಾರ್‌ರಿಗೆ 1991 ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಹಾಗೂ 2014 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಬಿ.ಕೆ.ಎಸ್‌.ಅಯ್ಯಂಗಾರ್‌ 2014 ಆ. 20ರಂದು ತಮ್ಮ 95ನೇ ವಯಸ್ಸಿನಲ್ಲಿ ಪುಣೆಯ ಆಸ್ಪತ್ರೆಯಲ್ಲಿ ವಿಧಿವಶರಾದರು. ಇಂತ ಮಹನೀಯರ ಸಾಧನೆಯನ್ನು ಸಾರುವ ಸ್ತಬ್ಧಚಿತ್ರ ಕೋಲಾರ ಜಿಲ್ಲೆಯಿಂದ ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸಲು ಆಯ್ಕೆಯಾಗಿರುವುದು ಜಿಲ್ಲೆಗೆ ಮಾತ್ರವಲ್ಲದೆ ಜಗತ್ತಿನಾದ್ಯಂತ ಇರುವ ಅವರ ಶಿಷ್ಯ ವೃಂದಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಸ್ತಬ್ಧಚಿತ್ರದ ರೂಪುರೇಶೆ : ಚಿತ್ರದ ಮುಂಭಾಗ ಮತ್ತು ಸುತ್ತಲೂ ಬಿ.ಕೆ.ಎಸ್‌.ಅಯ್ಯಂಗಾರ್‌ ರ ವಿವಿಧ ಯೋಗ ಭಂಗಿಗಳ ಚಿತ್ರಗಳು ಪ್ರದರ್ಶಿಸಲ್ಪಡಲಿದೆ. ಮಧ್ಯಭಾಗದಲ್ಲಿ ಕೋಲಾರದ ಅಂತರಗಂಗೆ ಬೆಟ್ಟದ ಹಿನ್ನೆಲೆಯನ್ನು ಬೆಟ್ಟದ ಮೇಲೆ ಯೋಗ ಪ್ರದರ್ಶಿಸುತ್ತಿರುವ ಚಿತ್ರಗಳನ್ನು ಅಳವಡಿಸಲಾಗುತ್ತಿದೆ. ಸ್ತಬ್ಧಚಿತ್ರದ ಮಧ್ಯಭಾಗದಲ್ಲಿ ಜನ ಯೋಗಾಭ್ಯಾಸ ಮಾಡುತ್ತಿರುವ ಚಿತ್ರಗಳಿರುತ್ತವೆ. ಹಿಂಭಾಗದಲ್ಲಿ ವಿಶ್ವದ ಬೃಹತ್‌ ಪ್ರತಿರೂಪದ ತುದಿಯಲ್ಲಿ ಅಯ್ಯಂಗಾರ್‌ ನಮಸ್ಕರಿಸುತ್ತಿರುವ ಪ್ರತಿಮೆಯಿದೆ.

ಯೋಗಾದಿನವನ್ನು ವಿಶ್ವಾದ್ಯಂತ ಆಚರಿಸುತ್ತಿರುವ ಕಾಲಘಟ್ಟದಲ್ಲಿ ಯೋಗವನ್ನು ಜಗತ್ತಿನಲ್ಲಿ ಜನಪ್ರಿಯವಾಗಲು ಕಾರಣರಾದ ಕೋಲಾರ ಜಿಲ್ಲೆಯ ಬಿ.ಕೆ. ಎಸ್‌.ಅಯ್ಯಂಗಾರ್‌ರ ಸ್ತಬ್ಧಚಿತ್ರವನ್ನು ಮೈಸೂರು ದಸರಾದಲ್ಲಿ ಕೋಲಾರ ಜಿಲ್ಲೆಯಿಂದ ಹೆಮ್ಮೆಯಿಂದ ಪ್ರದರ್ಶಿಸಿ ಯೋಗದ ಮಹತ್ವವನ್ನು ಸಾರಲು ಮುಂದಾಗಿದ್ದೇವೆ. -ಯುಕೇಶ್‌ಕುಮಾರ್‌, ಕೋಲಾರ ಜಿಪಂ ಸಿಇಒ

ಕೋಲಾರ ಜಿಲ್ಲೆಯಿಂದ ಈ ಬಾರಿ ಬಿ. ಕೆ.ಎಸ್‌.ಅಯ್ಯಂಗಾರ್‌ರ ಸ್ತಬ್ಧಚಿತ್ರ ಪಾಲ್ಗೊಳ್ಳಲಿದ್ದು, ಸ್ತಬ್ಧಚಿತ್ರವನ್ನು ಅತ್ಯುತ್ತಮವಾಗಿ ರೂಪಿಸಿ ಮೈಸೂರು ದಸರಾ ಉತ್ಸವದ ಆಕರ್ಷಣೀಯ ಕೇಂದ್ರಬಿಂದುವಾಗಿಸಲು ಶ್ರಮಿಸುತ್ತಿದ್ದೇವೆ. -ರವಿಚಂದ್ರ, ಉಪ ನಿರ್ದೇಶಕ, ಡಿಐಸಿ

 

-ಕೆ.ಎಸ್‌.ಗಣೇಶ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next