Advertisement
ಕಳೆದ ವರ್ಷ ದಾಖಲೆ: ಕೋಲಾರ ಎಪಿಎಂಸಿ ಮಾರುಕಟ್ಟೆಯನ್ನು ಭಾರತದ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆ ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರದ ನಾಸಿಕ್ ಅಥವಾ ದೇಶದ ಇನ್ನಿತರ ಭಾಗದ ಮಾರುಕಟ್ಟೆಯಲ್ಲಿ ವರ್ಷದಲ್ಲಿ ಕೆಲವೇ ತಿಂಗಳು ಮಾತ್ರವೇ ಟೊಮೆಟೋ ಮಾರಾಟ ಆಗುತ್ತದೆ. ಆದರೆ, ಕೋಲಾರ ಮಾರುಕಟ್ಟೆಯಲಿ ಎಂಥ ಬರಗಾಲ ಇದ್ದರೂ ನಿತ್ಯವೂ ಟೊಮೆಟೋ ಆವಕವಾಗುತ್ತದೆ.
Related Articles
Advertisement
ಆವಕ ಕಡಿಮೆ ಧಾರಣೆ ಹೆಚ್ಚಳ: ಕೋಲಾರ ಎಪಿಎಂಸಿ ಟೊಮೆಟೋಗೆ ಆವಕವಾಗುತ್ತಿರುವ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಇಳಿಕೆಯಾದ ಕಾರಣ ಟೊಮೆಟೋ ಧಾರಣೆ ಹೆಚ್ಚಾಗುತ್ತಿದೆ ಎಂದು ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳು ವಿವರಿಸುತ್ತಾರೆ. ಜೂ.17 ರಂದು 2023ರಲ್ಲಿ ಕೋಲಾರ ಮಾರುಕಟ್ಟೆಗೆ 11,700 ಕ್ವಿಂಟಲ್ ಟೊಮೆಟೋ ಆವಕವಾಗಿದ್ದರೆ ಈ ವರ್ಷ ಇದೇ ದಿನ ಕೇವಲ 7,400 ಕ್ವಿಂಟಲ್ ಟೊಮೆಟೋ ಮಾತ್ರವೇ ಆವಕವಾಗಿದೆ. ಇದರಿಂದ ಜೂ.17 ರಂದು ಕೋಲಾರ ಮಾರುಕಟ್ಟೆಗೆ ಸುಮಾರು 3 ಸಾವಿರ ಕ್ವಿಂಟಲ್ ಟೊಮೆಟೋ ಕಡಿಮೆ ಬಂದಿದೆ. ಹಾಗೆಯೇ 78 ಬಾಕ್ಸ್ ಟೊಮೆಟೋ ಬದಲಿ ಕೇವಲ 48 ಬಾಕ್ಸ್ ಮಾತ್ರವೇ ಹರಾಜು ಪ್ರಕ್ರಿಯೆಗೊಳಾಗಿದೆ.
ಇನ್ನೊಂದು ತಿಂಗಳು ಇದೇ ಸ್ಥಿತಿ: ಈಗ ಇರುವ ರೀತಿಯಲ್ಲಿಯೇ ಮಳೆಯ ಪ್ರಮಾಣ ಮುಂದಿನ ಒಂದು ತಿಂಗಳು ಮುಂದುವರಿದರೆ ಟೊಮೆಟೋ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮುಂದಿನ 20-30 ದಿನಗಳ ಕಾಲ ಟೊಮೆಟೋ ಧಾರಣೆ ಏರುಮುಖದಲ್ಲೇ ಸಾಗಲಿದೆ ಎಂದು ಹೇಳಲಾಗುತ್ತಿದೆ. ಹಿಂದಿನ ವರ್ಷ ಜೂ. 24 ರಂದು ಬಾಕ್ಸ್ ಟೊಮೆಟೋ 1100 ರೂ.ಗಳಿಗೆ ಹಾಗೂ ಆಗಸ್ಟ್ 1 ರಂದು 2700 ರೂ.ಗಳಿಗೆ ಮಾರಾಟವಾಗಿತ್ತು.ಆನಂತರ ಆ. 4 ರ ನಂತರ ಧಾರಣೆ ಇಳಿಕೆಯಾಗಿತ್ತು. ಹಿಂದಿನ ವರ್ಷದಂತೆ ಬಾಕ್ಸ್ ಟೊಮೆಟೋ ಗರಿಷ್ಠ 2,700 ರೂ. ತಲುಪಬಹುದೇ ಅಥವಾ ಅದನ್ನು ಮೀರುವ ನಿರೀಕ್ಷೆ ರೈತರದ್ದಾಗಿದೆ.
ನೆರೆರಾಜ್ಯಗಳಲ್ಲಿ ಟೊಮೆಟೋ ಫಸಲಿಲ್ಲ
ಮೇ, ಜೂನ್ ಮತ್ತು ಆಗಸ್ಟ್ ತಿಂಗಳಿನಲ್ಲಿ ದಕ್ಷಿಣ ಭಾರತದ ರಾಜ್ಯಗಳ ಕೆಲವು ಭಾಗಗಳಲ್ಲಿ ಮಾತ್ರವೇ ಟೊಮೆಟೋ ಬೆಳೆಯಲಾಗುತ್ತದೆ. ಮಹಾರಾಷ್ಟ್ರದ ನಾಸಿಕ್ ಮಾರುಕಟ್ಟೆ ಆಗಸ್ಟ್ ಮಧ್ಯಭಾಗದಲ್ಲಿ ಆರಂಭವಾಗುತ್ತದೆ. ಅಲ್ಲಿಯವರೆವಿಗೂ ದಕ್ಷಿಣ ರಾಜ್ಯಗಳ ಟೊಮೆಟೋ ರಾಷ್ಟ್ರಕ್ಕೆ ಸರಬರಾಜಾಗುತ್ತದೆ. ಆದರೆ, ಈ ಬಾರಿ ಆಂಧ್ರಪ್ರದೇಶದಲ್ಲಿ ಅಲ್ಪಸ್ವಲ್ಪ ಟೊಮೆಟೋ ಉತ್ಪಾದನೆಯಾಗುತ್ತಿದ್ದರೆ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಟೊಮೆಟೋ ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಕೋಲಾರದ ಟೊಮೆಟೋ ಕಡಿಮೆ ಆವಕವಾಗುತ್ತಿದ್ದರೂ, ಕೇರಳ, ತಮಿಳುನಾಡು ಹಾಗೂ ಸ್ವಲ್ಪ ಆಂಧ್ರಪ್ರದೇಶ ಮತ್ತು ದೇಶದ ಇನ್ನಿತರ ಭಾಗಗಳಿಗೆ ಸರಬರಾಜಾಗುತ್ತಿದೆ. ಇದರಿಂದ ಕೋಲಾರಕ್ಕೆ ಕಡಿಮೆ ಟೊಮೆಟೋ ಬರುತ್ತಿದೆ ಎಂದು ಅಂದಾಜಿಸಲಾಗಿದೆ.
ಕಡಿಮೆ ಆವಕಕ್ಕೆ ಮಳೆಯೇ ಕಾರಣ
ಈ ಬಾರಿ ಟೊಮೆಟೋ ಮಾರುಕಟ್ಟೆಗೆ ಕಡಿಮೆ ಬರಲು ಮಳೆಯೇ ಮುಖ್ಯ ಕಾರಣವಾಗಿದೆ. ಟೊಮೆಟೋಗೆ ಅಗತ್ಯವಿರುವ ಉಷ್ಣಾಂಶ ಕಡಿ ಮೆಯಾಗಿದ್ದು, ಇದರ ಪರಿಣಾಮ ಫಸಲಿನ ಮೇಲಾಗಿದೆ. ಇದರಿಂದ ಮಾರುಕಟ್ಟೆಗೆ ಬರಬೇ ಕಾಗಿದ್ದ ಮಾಲಿನಲ್ಲಿ ಕಡಿತವುಂಟಾಗಿದೆ. ಮಳೆ ಜತೆಗೆ ಇತ್ತೀಚಿಗೆ ರೈತರನ್ನು ಕಾಡುತ್ತಿರುವ ನಕಲಿ ಬೀಜಗಳು, ಟೊಮೆಟೋ ಗುಣಮಟ್ಟದ ಕೊರತೆ ಮತ್ತಿತರ ಸಮಸ್ಯೆಗಳಿಂದಾಗಿ ಟೊಮೆಟೋ ಉತ್ಪಾದನೆ ಪ್ರಮಾಣದಲ್ಲೂ ಕುಸಿತ ಕಂಡಿದೆ.
“ಮಳೆ ಕಾರಣಕ್ಕಾಗಿ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಬಂದ ಟೊಮೆಟೋ ಪ್ರಮಾಣ ಕಡಿಮೆಯಾಗಿದೆ. ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಟೊಮೆಟೋ ಉತ್ಪಾದನೆ ಇಲ್ಲದಿರುವುದರಿಂದ ಕೋಲಾರದ ಟೊಮೆಟೋ ಹೆಚ್ಚು ಆ ರಾಜ್ಯಗಳಿಗೆ ಸರಬರಾಜಾಗುತ್ತಿದೆ. ಮಳೆ ವಾತಾ ವರಣ ಮುಂದುವರಿದರೆ ಮುಂದಿನ 20 ದಿನಗಳ ಕಾಲ ಟೊಮೆಟೋ ಧಾರಣೆ ಏರುಮುಖದಲ್ಲಿ ಸಾಗಬಹುದು ಎಂದು ನಿರೀಕ್ಷಿಸಲಾಗಿದೆ.” – ವಿಜಯಲಕ್ಷ್ಮಿ, ಕೋಲಾರ ಎಪಿಎಂಸಿ ಕಾರ್ಯದರ್ಶಿ
-ಕೆ.ಎಸ್.ಗಣೇಶ್