Advertisement
ಮುಳಬಾಗಿಲು ಶಾಸಕ ಎಚ್.ನಾಗೇಶ್ ಕೋಲಾರ ಜಿಲ್ಲಾ ಹೊಣೆಗಾರಿಕೆ ಹೊತ್ತುಕೊಂಡಿದ್ದ ಸಂದರ್ಭದಲ್ಲಿ 2021ರ ಜನವರಿ 8 ರಂದು ಕೆಡಿಪಿ ಸಭೆ ನಡೆದಿದ್ದು ಬಿಟ್ಟರೆ, ಆನಂತರ ಉಸ್ತುವಾರಿ ಹೊಣೆ ಹೊತ್ತುಕೊಂಡಿದ್ದ ಎಂ.ಟಿ.ಬಿ.ನಾಗರಾಜ್ ಮತ್ತು ಈಗಿನ ಉಸ್ತುವಾರಿ ಸಚಿವ ಮುನಿರತ್ನ ಒಂದೇ ಒಂದು ಕೆಡಿಪಿ ಸಭೆಯನ್ನು ಕರೆಯುವ ಗೋಜಿಗೆ ಹೋಗಲಿಲ್ಲ.
Related Articles
Advertisement
ಸಚಿವರಿಗೆ ಪುರುಸೊತ್ತಿಲ್ಲ: ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತಿದ್ದರೂ ಸಚಿವ ಮುನಿರತ್ನ ಕೋಲಾರ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದಾಗ ಮತ್ತು ಬಿಜೆಪಿಯ ಕಾರ್ಯಕ್ರಮ, ಸರಕಾರದ ಒಂದೆರೆಡ ಕಾರ್ಯಕ್ರಮಗಳಿಗೆ ಬಂದು ಹೋಗಿದ್ದು ಬಿಟ್ಟರೆ ಅಭಿವೃದ್ಧಿ ವಿಚಾರದಲ್ಲಿ ಚರ್ಚಿಸಲು ಉಸ್ತುವಾರಿ ಸಚಿವರಿಗೆ ಇದುವರೆವಿಗೂ ಪುರುಸೊತ್ತಾಗಿರಲಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಶಾಸಕರ್ಯಾರು ಆಯ್ಕೆಯಾಗಿಲ್ಲದ ಕಾರಣ ಹಾಲಿ ಇರುವ ಶಾಸಕರ್ಯಾರು ಉಸ್ತುವಾರಿ ಸಚಿವರು ಬರಬೇಕೆಂದು ಬಯಸುತ್ತಿಲ್ಲ. ರೋಗಿ ಕೇಳಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಎನ್ನುವಂತಾಗಿದೆ.
ಚರ್ಚೆಯೇ ಇಲ್ಲ: ಕೋಲಾರ ಜಿಲ್ಲಾ ಕೇಂದ್ರದಿಂದ ಕೇವಲ 70 ಕಿ.ಮೀ ದೂರದಲ್ಲಿರುವ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಬಜೆಟ್ ಅನುಷ್ಠಾನ ಕುರಿತಂತೆ ಸರಣಿ ಸಭೆಗಳನ್ನು ವಿವಿಧ ಇಲಾಖಾವಾರು ನಡೆಸುತ್ತಿದ್ದರೆ, ಕೋಲಾರ ಜಿಲ್ಲೆಯಲ್ಲಿ ಬಜೆಟ್ ಅನುಷ್ಠಾನ ಕುರಿತಂತೆ ಚರ್ಚಿಸುವವರೇ ಇಲ್ಲವಾಗಿದ್ದಾರೆ. ಅಂತೂ ಇಂತೂ ಅತ್ತೂ ಕರೆದು ಔತಣ ಮಾಡಿಸಿಕೊಂಡರು ಎಂಬಂತೆ ಸಾಕಷ್ಟು ಟೀಕೆ ಟಿಪ್ಪಣಿಗಳು ಕೇಳಿ ಬಂದ ಮೇಲೆ ಮೇ.10ರಂದು ಜಿಪಂ ಸಭಾಂಗಣದಲ್ಲಿ ಕೆಡಿಪಿ ಸಭೆಯನ್ನು ಕರೆಯಲಾಗಿದೆ. ಈ ಸಭೆ ಕಾಟಾಚಾರದ ಸಭೆಯಾಗದೆ ಕನಿಷ್ಠ ಕೋಲಾರ ಜಿಲ್ಲೆಯ ಅಭಿವೃದ್ಧಿಪರವಾದ ಚರ್ಚೆಗೆ ಸೀಮಿತವಾಗಲಿ ಎಂದು ಜಿಲ್ಲೆಯ ಜನರು ಬಯಸುತ್ತಿದ್ದಾರೆ.
ಸಚಿವರು ನಾಪತ್ತೆ ಹುಡುಕಿಕೊಡಿ : ಉಸ್ತುವಾರಿ ಸಚಿವರ ಈ ನಿರ್ಲಕ್ಷ್ಯ ಕುರಿತಂತೆ ಜಿಲ್ಲೆಯಲ್ಲಿ ಈಗಾಗಲೇ ಜನಸಾಮಾನ್ಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ವಲಯದಲ್ಲಿ ಆಕ್ರೋಶ ನ್ಪೋಟಗೊಂಡಿದೆ. ರೈತ ಸಂಘಟನೆಗಳು ಹಲವಾರು ಬಾರಿ ಸಚಿವರು ಕಳೆದು ಹೋಗಿದ್ದಾರೆ ಹುಡುಕಿ ಕೊಡಿ ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡುವ ಪ್ರತಿಭಟನೆ ನಡೆಸಿದ್ದರು. ಕೆಲ ಘಟನೆಗಳಿಗೆ ಸ್ಪಂದಿಸಿಲ್ಲವೆಂದು ಪ್ರತಿಕೃತಿ ದಹನವೂ ನಡೆದಿದೆ. ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಸುದ್ದಿಗೋಷ್ಠಿಯನ್ನೇ ಮಾಡಿ ಒಂದೂವರೆ ವರ್ಷದಿಂದ ಕೆಡಿಪಿ ಸಭೆ ಕರೆಯದಿರುವ ಕುರಿತು ಸಚಿವರನ್ನು ಟೀಕಿಸಿದ್ದರು. ಆದರೂ, ಸಚಿವ ಮುನಿರತ್ನರಿಂದ ಪ್ರತ್ಯುತ್ತರವೇ ಇಲ್ಲ.
ಧ್ವಜ ಹಾರಿಸುವ ಸಚಿವ : ಜನವರಿ ನಂತರ ಕೋಲಾರ ಜಿಲ್ಲೆಯಲ್ಲಿ ಒಂದೆರೆಡು ಬಾರಿ ಅಕಾಲಿಕ ಮಳೆ ಸುರಿದು ತೋಟಗಾರಿಕೆ ಬೆಳೆಗಳಿಗೆ ಸಾಕಷ್ಟು ನಷ್ಟ ಸಂಭವಿಸಿತ್ತು. ಆಗಲೂ ಸಚಿವರು ಕೋಲಾರದತ್ತ ಗಮನಹರಿಸಲಿಲ್ಲ. ಕೋಲಾರ ಜಿಲ್ಲೆಗೆ ತಮ್ಮ ಉಸ್ತುವಾರಿ ಇದೆ ಎನ್ನುವುದನ್ನು ನೆನಪಿಸಿಕೊಳ್ಳಲಿಲ್ಲ. ತಾವೇನಿದ್ದರೂ ಆ. 15ರ ಸ್ವಾತಂತ್ರ್ಯೋತ್ಸವ ಮತ್ತು ಜ. 26 ರ ಗಣರಾಜ್ಯೋತ್ಸವಗಳಿಗೆ ಬಂದು ತ್ರಿವರ್ಣ ಧ್ವಜ ಹಾರಿಸಿ, ಅಧಿಕಾರಿಗಳು ಸಿದ್ಧಪಡಿಸಿದ ಭಾಷಣ ಓದಿ ಹೇಳುವುದಷ್ಟೇ ಕರ್ತವ್ಯ ಎಂದು ಭಾವಿಸಿದಂತಿದೆ.
-ಕೆ.ಎಸ್.ಗಣೇಶ್