ಕೋಲಾರ: ಜಿಲ್ಲೆಯಲ್ಲಿ ಭಾನುವಾರ ತಡ ರಾತ್ರಿ ಹಾಗೂ ಸೋಮವಾರ ತಲಾ ಎರಡು ಕೋವಿಡ್ 19 ಪಾಸಿಟಿವ್ ಪ್ರಕರಣ ಗಳು ಪತ್ತೆಯಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಪಾಸಿಟಿವ್ ವ್ಯಕ್ತಿಗಳ ಸಂಖ್ಯೆ 18ಕ್ಕೆ ಏರಿಕೆಯಾದಂತಾಗಿದೆ. ಮುಳಬಾಗಿಲು ಪಟ್ಟಣದ ಶಾಮೀರ್ ಮೊಹಲ್ಲಾದ 48 ವರ್ಷಗಳ ಪುರುಷ ಚಾಲಕ ಪಿ.2129ಕ ಭಾನುವಾರ ತಡರಾತ್ರಿ ಪಾಸಿಟಿವ್ ಪತ್ತೆಯಾಗಿತ್ತು. ಇದೇ ದಿನ ಶ್ರೀನಿ ವಾಸಪುರ ತಾಲೂ ಕಿನ ಮೊದಲ ಪಾಸಿಟಿವ್ ಪ್ರಕರಣ 60 ವರ್ಷದ ವೃದ್ಧ ಪಿ. 2137ರ ಮೂಲಕ ಆರಂಭವಾಗಿದೆ.
ಈತ ಪಿ.1963 ದಾವಣ ಗೆರೆ ವ್ಯಕ್ತಿಯ ಸಂಪರ್ಕದಲ್ಲಿದ್ದ ರೆಂದು ಆರೋಗ್ಯ ಬುಲೆಟಿನ್ ದೃಢಪಡಿಸಿದೆ. ಸೋಮವಾರ ಸಂಜೆ ವೇಳೆಗೆ ಬಂಗಾರಪೇಟೆಯಲ್ಲಿ ಮತ್ತೆರೆಡು ಪ್ರಕರಣಗಳು ಪತ್ತೆಯಾಗಿವೆ. ಈ ಹಿಂದೆ ಬಂಗಾರಪೇಟೆಯಲ್ಲಿ ಪತ್ತೆಯಾಗಿದ್ದ ಚಾಲಕ ಪಿ.1946ರ ಸಂಪರ್ಕದಲ್ಲಿದ್ದ ಆತನ 27 ವರ್ಷದ ಪತ್ನಿ ಮತ್ತು 6 ವರ್ಷದ ಹೆಣ್ಣು ಮಗುವಿನಲ್ಲಿ ಕೋವಿಡ್ 19 ಸೋಂಕು ದೃಢ ಪಟ್ಟಿದೆ. ಇದರಿಂದ 14ರಲ್ಲಿದ್ದ ಕೋಲಾರದ ಕೋವಿಡ್ 19 ಪ್ರಕರಣಗಳು 18 ಕ್ಕೇರುವಂತಾಗಿದೆ.
ತಾಲೂಕುವಾರು: ಕೋಲಾರ ಜಿಲ್ಲೆಯ18 ಪ್ರಕರಣಗಳ ಪೈಕಿ ತಾಲೂಕುವಾರು ಮುಳಬಾಗಿಲಿನಲ್ಲಿ 7, ಬಂಗಾರ ಪೇಟೆಯಲ್ಲಿ 6, ಮಾಲೂರು ಹಾಗೂ ಕೆಜಿಎಫ್ನಲ್ಲಿ ತಲಾ 2 ಮತ್ತು ಶ್ರೀನಿವಾಸಪುರದಲ್ಲಿ 1 ಪ್ರಕರಣ ಸೇರಿವೆ. ಆಶ್ಚರ್ಯವೆಂದರೆ ಕೋಲಾರ ಜಿಲ್ಲಾ ಕೇಂದ್ರದಲ್ಲಿ ಮಂಡ್ಯವ್ಯಕ್ತಿ ಪಾಸಿಟಿವ್ ಆಗಿ ಓಡಾಡಿ ಹೋಗಿದ್ದು ಹೊರತು ಪಡಿ ಸಿದರೆ ಇದುವರೆಗೂ ಯಾವುದೇ ನೇರ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಈ ವ್ಯಕ್ತಿಯ ಸಂಪರ್ಕಿತ ಐವತ್ತಕ್ಕೂ ಹೆಚ್ಚು ಮಂದಿ ಕ್ವಾರಂಟೈನ್‌ನಲ್ಲಿದ್ದು ಎಲ್ಲರೂ ನೆಗೆಟಿವ್ ಆಗಿದ್ದು ಸದ್ಯಕ್ಕೆ ನಿರಾಳ ಗೊಳ್ಳುವಂತಾಗಿದೆ.
22 ಪೊಲೀಸರ ಕ್ವಾರಂಟೈನ್ ಅವಧಿ ಮುಂದುವರಿಕೆ: ಮಾರಿಕುಪ್ಪಂ ಗಣಿ ಕಳ್ಳತನಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ವ್ಯಕ್ತಿಗೆ ಕೋವಿಡ್ 19 ವೈರಸ್ ಸೋಂಕು ಇರುವುದರಿಂದ, ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದ 22 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕ್ವಾರಂಟೈನ್ ಇನ್ನೂ ಮುಂದುವರಿದಿದೆ. ಬೆಮಲ್‌ನಗರದ ಹೋಟೆಲ್ ಮತ್ತು ಪಾರಾಂಡಹಳ್ಳಿಯ ಕಲ್ಯಾಣ ಮಂಟಪದಲ್ಲಿ ತಲಾ 11 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಎಲ್ಲರಿಗೂ ಪ್ರಾಥಮಿಕ ಹಂತದಲ್ಲಿ ಪರೀಕ್ಷೆ ನಡೆದಿದ್ದು,
ಎರಡನೇ ಬಾರಿಗೆ ಪರೀಕ್ಷೆ ನಡೆದು, ವರದಿ ಬಂದ ಮೇಲೆ ಕ್ವಾರಂಟೈನ್‌ನಿಂದ ಮುಕ್ತಿ ಸಿಗುವ ಸಂಭವ ಇದೆ ಎಂದು ಮೂಲಗಳು ತಿಳಿಸಿವೆ. ಗಣಿ ಕಳ್ಳತನಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ವ್ಯಕ್ತಿಗೆ ಕೋವಿಡ್ 19 ವೈರಸ್ ಬಂದ ಹಿನ್ನೆಲೆಯಲ್ಲಿ ಎಲ್ಲಾ 50 ಕೈದಿಗಳಿಗೆ ತಪಾಸಣೆ ಮಾಡಲಾಗಿದ್ದು, ಎಲ್ಲರಿಗೂ ನೆಗಟಿವ್ ವರದಿ ಬಂದಿದೆ. ಜೊತೆಗೆ ಆರೋಪಿ ಮನೆಯವರಿಗೂ ನೆಗೆಟಿವ್ ವರದಿ ಬಂದಿದೆ. ಇದರಿಂದಾಗಿ ಅಧಿಕಾರಿಗಳು ನಿರಾಳರಾಗಿದ್ದಾರೆ.