ಕೋಲಾರ: ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಾರ್ವಜನಿಕರ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಜಿಲ್ಲಾ ನ್ಯಾಯಾಲಯ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ಜು.8ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ರಾಷ್ಟ್ರೀಯ ಜನತಾ ನ್ಯಾಯಾಲಯ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶುಕ್ಲಾಕ್ಷ ಪಾಲನ್ ತಿಳಿಸಿದರು.
ಜಿಲ್ಲಾ ನ್ಯಾಯಾಲಯದ ತಮ್ಮ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಕೋಲಾರ ಜಿಲ್ಲಾ ನ್ಯಾಯಾಲಯ, ಬಂಗಾರಪೇಟೆ, ಶ್ರೀನಿವಾಸಪುರ, ಮಾಲೂರು, ಮುಳಬಾಗಿಲು ಮತ್ತು ಕೆಜಿಎಫ್ ತಾಲೂಕುಈ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಜನತಾ ನ್ಯಾಯಾಲಯ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ತಮ್ಮ ಪ್ರಕರಣ ಮತ್ತು ವ್ಯಾಜ್ಯ ಪೂರ್ವ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಅವಕಾಶವಿದೆ ಎಂದರು.
ಸಂಪರ್ಕಿಸಿ: ಉಭಯ ಪಕ್ಷಗಾರರು ಹಾಗೂ ಅವರ ವಕೀಲರು ಪೂರ್ವ ಸಂಧಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸಂಧಾನ ಮೂಲಕ ಬಗೆಹರಿಸಿಕೊಳ್ಳಬಹುದು. ರಾಷ್ಟ್ರೀಯ ಜನತಾ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಇಚ್ಛಿಸುವ ಪಕ್ಷಗಾರರು ಮುಂಚಿತವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಸೇವಾ ಸಮಿತಿ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು.
Related Articles
ಯಾವ ಪ್ರಕರಣ ರಾಜಿ ಮಾಡಿಕೊಳ್ಳಬಹುದು?: ಜನತಾ ನ್ಯಾಯಾಲಯದಲ್ಲಿ ಸಿವಿಲ್ ಪ್ರಕರಣ, ರಾಜಿಯಾಗುವ ಕ್ರಿಮಿನಲ್ ಪ್ರಕರಣ, ಚೆಕ್ ಬೌನ್ಸ್ ಪ್ರಕರಣ, ಮೋಟಾರ್ ವಾಹನ ಅಪಘಾತ ಪ್ರಕರಣ, ಬ್ಯಾಂಕ್ ವಸೂಲಾತಿ ಪ್ರಕರಣ, ವೈವಾಹಿಕ ಕುಟುಂಬ ನ್ಯಾಯಾಲಯ ಪ್ರಕರಣ (ವಿಚ್ಛೇದನಾ ಹೊರತುಪಡಿಸಿ), ಕಾರ್ಮಿಕ ವಿವಾದ, ಪಿಂಚಣಿ ಪ್ರಕರಣ ಹಾಗೂ ಜೀವನಾಂಶ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳುವ ಅವಕಾಶವಿದೆ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಫೆ.11ರಂದು ನಡೆದ ಲೋಕ್ ಅದಾಲತ್‌ನಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ 5,398 ಹಾಗೂ 3,163 ವ್ಯಾಜ್ಯ ಪೂರ್ವ ಪ್ರಕರಣ ಸೇರಿ ಒಟ್ಟು 8,561 ಪ್ರಕರಣ ವಿಲೇಯಾಗಿದ್ದವು. ರಾಜಿ ಮೂಲಕ 26 ಕೋಟಿ ಪರಿಹಾರ ಪಾವತಿಯಾಗಿತ್ತು ಎಂದು ಮಾಹಿತಿ ನೀಡಿದರು.
ಕಡಿಮೆ ಖರ್ಚು: ರಾಷ್ಟ್ರೀಯ ಜನತಾ ನ್ಯಾಯಾಲಯದಲ್ಲಿ ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣ ಬಗೆಹರಿಯುವುದರಿಂದ ಬಾಂಧವ್ಯ ಉಳಿಯುತ್ತದೆ, ವಿವಾದವೂ ತೀರ್ಮಾನವಾಗುತ್ತದೆ. ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿಸಲಾಗುವುದು ನ್ಯಾಯಾಲಯದಲ್ಲಿ ದಾಖಲಾಗದೆ ಇರುವ ಪ್ರಕರಣವನ್ನೂ ರಾಜಿ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿದೆ. ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕೆ ಇದೊಂದು ವಿಶೇಷ ಅವಕಾಶ ಎಂದರು.
ಸದುಪಯೋಗ ಮಾಡಿಕೊಳ್ಳಲು ಸಲಹೆ:ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಸುನೀಲ ಎಸ್.ಹೊಸಮನಿ ಮಾತನಾಡಿ, ರಾಷ್ಟ್ರೀಯ ಜನತಾ ನ್ಯಾಯಾಲಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.