ಕೊಪ್ಪಳ: ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ಕ್ಷೇತ್ರ ಸಿಕ್ಕಿಲ್ಲ. ಕೋಲಾರ ಅವರ ಕೊನೇ ಆಯ್ಕೆಯಾಗಿದೆ. ಆ ಕ್ಷೇತ್ರದಲ್ಲಿ ಸ್ಪರ್ಧಿಸದಂತೆ ಹೈಕಮಾಂಡ್ ಹೇಳಿರೋದು ಸಿದ್ದರಾಮಯ್ಯ ಅಸಹಾಯಕತೆ ತೋರಿಸುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ, ಸಿದ್ದರಾಮಯ್ಯ ಎಷ್ಟು ಅಸಹಾಯಕರಾಗಿದ್ದಾರೆ ಎಂಬುದಕ್ಕೆ ಅವರನ್ನು ಕೋಲಾರದಿಂದ ಸ್ಪರ್ಧಿಸದಂತೆ ಹೇಳಿರೋದೇ ಸಾಕ್ಷಿಯಾಗಿದೆ. ಅವರು ಎಲ್ಲಿ ನಿಲ್ಲಬೇಕೆಂಬುವುದು ಅವರೇ ಯೋಚಿಸಬೇಕು. ಮೊದಲು ಎಲ್ಲೆಯೊ ನಿಲ್ಲಬೇಕೆಂದು ಕೊನೆಗೆ ಕೋಲಾರ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದರು. ಅವರು ಸ್ಪರ್ಧೆಯ ಹಿನ್ನೆಲೆಯಲ್ಲಿ ಹತ್ತಾರು ಸಭೆ ನಡೆಸಿದ್ದರು. ಆದರೆ ಹೈಕಮಾಂಡ್ ಅವರಿಗೆ ಸ್ಪ ರ್ಧಿಸದಂತೆ ಹೇಳಿದ್ದಾರೆ ಎಂದರು.
ಕಾಂಗ್ರೆಸ್ ಯಾವಾಗಲೂ ಒಡೆದ ಮನೆ ಎಂಬುವುದು ಸಾಬೀತಾಗಿದೆ. ಕಾಂಗ್ರೆಸ್ ಯಾವಾಗಲೂ ಮುಚ್ಚಿದ ಲಕೋಟೆಯಿಂದ ಬಂದ ಸಂದೇಶದಿಂದ ಅಧಿಕಾರ ಮಾಡಿದೆ. ಇದು ಕಾಂಗ್ರೆಸ್ ಇತಿಹಾಸ. ಇದು ಕಾಂಗ್ರೆಸ್ ಸಂಸ್ಕೃತಿಗೆ ಸಾಕ್ಷಿಯಾಗಿದೆ. ಅಲ್ಲಿ ಕುಟುಂಬ ರಾಜಕಾರಣವಿದೆ. ಅಲ್ಲಿ ಪ್ರಜಾತಂತ್ರ ವ್ಯವಸ್ಥೆಯೇ ಇಲ್ಲ. ಯಲಬುರ್ಗಾದಲ್ಲಿ ಸೀರೆ ಹಂಚಿದ ಪ್ರಕರಣ ಹಾಗೂ ಶಾಲೆಯಲ್ಲಿ ಚುನಾವಣೆ ಪ್ರಚಾರ ಮಾಡಿದ್ದು ಸರಿಯಲ್ಲ. ಕಾಂಗ್ರೆಸ್ ಹಾಗೂ ರಾಯರಡ್ಡಿಗೆ ಬೇರೆ ಕೆಲಸವಿಲ್ಲ. ಅವರಿಗೆ ಅಭಿವೃದ್ಧಿ ವಿಚಾರ ಹೇಳಿಕೊಳ್ಳುವುದಕ್ಕೆ ಏನೂ ಇಲ್ಲ. ಯಾವುದೇ ಕೆರೆ ಅಭಿವೃದ್ಧಿ, ಶಾಲಾ ಅಭಿವೃದ್ಧಿ, ಕೃಷಿ ಸ್ಪಂದನೆ ಮಾಡಿಲ್ಲ. ಕುಂಟು ನೆಪ ಮಾಡಿಕೊಂಡು ಆರೋಪ ಮಾಡೋದೇ ಅವರ ಕೆಲಸವಾಗಿದೆ ಎಂದರು.