Advertisement

ನೀರು ಸಿಗದ ಹಿನ್ನೆಲೆ: ಕೋಲಾರದಲ್ಲಿ ನೋಟಾ ಪರ ಪ್ರಚಾರ

06:35 AM Apr 18, 2018 | Team Udayavani |

ಕೋಲಾರ: ಜಿಲ್ಲಾ ಕೇಂದ್ರವನ್ನೊಳಗೊಂಡ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಮುಳುಗಿರುವಾಗಲೇ ನೋಟಾ ಪರ ಪ್ರಚಾರ ಭರ್ಜರಿಯಾಗಿಯೇ ಸಾಗಿದೆ.

Advertisement

ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಮೂರೂ ರಾಜಕೀಯ ಪಕ್ಷಗಳಿಂದ ಇದುವರೆಗೂ ಅಭ್ಯರ್ಥಿಗಳ ಆಯ್ಕೆ ನಡೆಯದ ಕಾರಣ ಯಾವ ಪಕ್ಷದಿಂದಲೂ ತಮಗೆ ಮತ ಹಾಕಿ ಎಂದು ಮತದಾರರನ್ನು ಕೇಳುವವರಿಲ್ಲದಂತಾಗಿದೆ. ಈ ನಡುವೆ, ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡರು ಮಾತ್ರ ನೋಟಾಗೆ ಮತ ಚಲಾಯಿಸಿ ಎಂದು ಪ್ರಚಾರ ನಡೆಸುತ್ತಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರದ ಮತದಾರರು ನೋಟಾಗೆ ಮತ ಚಲಾಯಿಸುವ ಮೂಲಕ ಶಾಶ್ವತ ನೀರಾವರಿ ಬೇಡಿಕೆಯ ವಿಚಾರದಲ್ಲಿ ಸರಕಾರ ಹಾಗೂ ದೇಶದ ಗಮನ ಸೆಳೆಯ ಬಹುದು ಎಂಬ ಉದ್ದೇಶವನ್ನಿಟ್ಟುಕೊಂಡು ಸಾಮಾ ಜಿಕ ಜಾಲತಾಣಗಳಲ್ಲೂ ನೋಟಾ ಪರ ಪ್ರಚಾರ ನಡೆಸಲಾಗುತ್ತಿದೆ.

ಕೋಲಾರ ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಹೋರಾಟ ಆರಂಭವಾಗಿ ಹದಿನೆಂಟು ವರ್ಷಗಳೇ ಕಳೆದಿವೆ.ಹೋರಾಟದ ಆರಂಭದಿಂದಲೂ ಶಾಶ್ವತ ನೀರಾವರಿ ಹೋರಾಟಕ್ಕೆ ಹಲವಾರು ರಾಜಕಾರಣಿಗಳು ಧುಮುಕುವುದು, ಚುನಾವಣೆಯಲ್ಲಿ ಅವರಿಗೆ ಅಧಿಕಾರ ಸಿಕ್ಕ ನಂತರ ಹೋರಾಟವನ್ನು ಮರೆಯುವುದು ಹಿಂದಿನ ಅನೇಕ ಚುನಾವಣೆಗಳಿಂದ ರೂಢಿಯಾಗಿಬಿಟ್ಟಿದೆ.

ನೀರಾವರಿ ಹೋರಾಟಕ್ಕೆ 18 ವರ್ಷದ ಇತಿಹಾಸ: ಇತ್ತೀಚಿನ ದಿನಗಳಲ್ಲಿ ಅಧಿಕಾರಕ್ಕೆ ಬರುವ ಮುನ್ನ ಎಲ್ಲಾ ರಾಜಕೀಯ ಪಕ್ಷಗಳು ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಕುರಿತು ಭರವಸೆಗಳನ್ನು ನೀಡುತ್ತಲೇ ಭಾಷಣ ಆರಂಭಿಸುತ್ತಾರೆ. ಆದರೆ, ಅಧಿಕಾರದಲ್ಲಿ ಇರುವಾಗ ಶಾಶ್ವತ ನೀರಾವರಿ ವಿಚಾರವನ್ನು ಪೂರ್ಣವಾಗಿ ಕಡೆಗಣಿಸಿರುವುದಕ್ಕೆ 18 ವರ್ಷಗಳ ಇತಿಹಾಸವೇ ಇದೆ. ಇದನ್ನು ಗಮನಿಸಿದ ಯುವಕರ ಪಡೆ ರಾಜಕೀಯ ರಹಿತವಾಗಿ 2016ರ ಜೂ.12ರಂದು ನಟ ಶಿವರಾಜ್‌ ಕುಮಾರ್‌ ನೇತೃತ್ವದಲ್ಲಿ ಶಾಶ್ವತ ನೀರಾವರಿ ಹೋರಾಟದ ನಿತ್ಯ ಧರಣಿ ಆರಂಭಿಸಿದ್ದರು.

ಕೋಲಾರಕ್ಕೆ ಅಧಿಕೃತ ಪ್ರವಾಸ ನಿಮಿತ್ತ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಂತರ ಧರಣಿ ಸ್ಥಳಕ್ಕೆ ಭೇಟಿ ಕೊಟ್ಟರಾದರೂ, ಶಾಶ್ವತ ನೀರಾವರಿ ವಿಚಾರದಲ್ಲಿ ಸ್ಪಷ್ಟ ಭರವಸೆ ನೀಡುವುದರ ಬದಲು, ಧರಣಿಯನ್ನು ಕೊನೆಗಾಣಿಸುವಂತೆ ಮನವಿ ಮಾಡಿದ್ದರು. ಆದರೆ, ಇದಕ್ಕೆ ಸಮ್ಮತಿಸದ ನೀರಾವರಿ ಹೋರಾಟಗಾರರು 1 ವರ್ಷ ಹೋರಾಟ ಜೀವಂತವಾಗಿಟ್ಟಿದ್ದರು.

Advertisement

ಧರಣಿ ಸ್ಥಳಕ್ಕೆ ಭೇಟಿ ನೀಡದ ಮುಖಂಡರು ಶುದಟಛಿ ಕುಡಿಯುವ ನೀರು ಹಾಗೂ ಶಾಶ್ವತ ನೀರಾವರಿ ಯೋಜನೆಗಳ ಬೇಡಿಕೆಯನ್ನಿಟ್ಟು ಕೊಂಡು ನೀರಾವರಿ ಹೋರಾಟ ಸಮಿತಿ ಧರಣಿ ನಡೆಸುತ್ತಿರುವ ಕುರಿತು ಸಮಿತಿ ಮುಖಂಡರು ಖುದ್ದು ಮಾಹಿತಿ ನೀಡಿದರೂ, ಕಾಂಗ್ರೆಸ್‌ ಪಕ್ಷದ ರಾಜ್ಯಾಧ್ಯಕ್ಷ ಪರಮೇಶ್ವರ್‌ ಆಗಲಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆಗಲಿ, ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆಗಲಿ ಒಂದು ದಿನವೂ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ಬಗ್ಗೆ ವಿಚಾರಿಸಲಿಲ್ಲ ಎಂಬುದು ಶಾಶ್ವತ ನೀರಾವರಿ ಹೋರಾಟಗಾರರ ಆಕ್ರೋಶ. 

ನೀರಾವರಿ ಹೋರಾಟಕ್ಕೆ ಯಾವುದೇ ಪಕ್ಷದ ಮುಖಂಡರು ಸ್ಪಂದಿಸಲಿಲ್ಲ. ನಮ್ಮ ಬೇಡಿಕೆ ಕೇಳಲಿಲ್ಲ. ಆದ್ದರಿಂದ, ನೋಟಾಗೆ 10,000ಕ್ಕಿಂತ ಹೆಚ್ಚು ಮತಗಳು ಚಲಾವಣೆಯಾಗುವಂತೆ ಮಾಡಿ ದೇಶದ ಗಮನ ಸೆಳೆಯಲು ಕ್ಷೇತ್ರದ ಮತದಾರರಲಿ ಮನವಿ ಮಾಡಲಾಗುತ್ತಿದೆ.
– ಕುರುಬರಪೇಟೆ ವೆಂಕಟೇಶ್‌, ನೀರಾವರಿ
ಹೋರಾಟ ಸಮಿತಿ ಮುಖಂಡ

– ಕೆ ಎಸ್‌ ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next