ಬೆಳ್ತಂಗಡಿ: ಕೊಕ್ಕಡ ಗ್ರಾಮದ ಪಿಜಿನಡ್ಕ ಸಮೀಪ ಮನೆ ಹಾಗೂ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ 3 ಕ್ವಿಂಟಾಲ್‌ಗೂ ಮಿಕ್ಕಿ ರಬ್ಬರ್ ಶೀಟ್ ಹಾಗೂ ನಗದು, ಮನೆಯ ದಾಖಲೆ ಪತ್ರಗಳು ಬೆಂಕಿಗಾಹುತಿಯಾದ ಘಟನೆ ಜ.13ರಂದು ಸಂಭವಿಸಿದೆ.
ಇಲ್ಲಿನ ಪಿ.ಕೆ. ಚೀಂಕ್ರರವರ ಮನೆಗೆ ಅಗ್ನಿ ಅವಘಡ ಸಂಭವಿಸಿದ್ದು, ರಬ್ಬರ್ ಶೀಟ್, ಹಾಗೂ 30 ಸಾವಿರ ರೂ. ನಗದು ಸಹಿತ ಸುಮಾರು 1.50 ಲಕ್ಷ ರೂ. ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.
ಚೀಂಕ್ರ ಅವರು ವಸತಿ ಯೋಜನೆಯಡಿ ಹೊಸಮನೆ ಕಟ್ಟುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಹಂಚಿನ ಹಳೇ ಮನೆಯಲ್ಲಿ ವಾಸವಾಗಿದ್ದರು. ಬೆಳಗ್ಗೆ ಅಡುಗೆ ಮಾಡಿದ ಬಳಿಕ 7 ಗಂಟೆಯ ಹೊತ್ತಿಗೆ ಬೆಂಕಿ ಮನೆಗೆ ಹೊತ್ತಿಕೊಂಡಿದೆ.
ಮನೆಮಂದಿ ಹೊಸಮನೆಯಲ್ಲಿದ್ದುದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯ ಹೆಂಚು ಹಾಗೂ ಶೀಟ್ ಒಡೆಯುವ ಸದ್ದು ಕೇಳಿ ಹೊರಗೆ ಬಂದು ನೋಡಿದಾಗ ರಬ್ಬರ್ ಶೀಟ್‌ಗೆ ತಗಲಿದ ಬೆಂಕಿ ಮನೆಯನ್ನು ಸಂಪೂರ್ಣವಾಗಿ ಆವರಿಸಿತ್ತು.
ತತ್‌ಕ್ಷಣ ಅಕ್ಕಪಕ್ಕದವರು ಸೇರಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಹಳೆ ಮನೆಗೆ ತಾಗಿಕೊಂಡೇ ಕೊಟ್ಟಿಗೆ ಇದ್ದು, ಮನೆಯೊಳಗಡೆ ರಬ್ಬರ್ ಶೀಟ್‌ನ ದಾಸ್ತಾನು ಇರಿಸಲಾಗಿತ್ತು. ಆಕಸ್ಮಿಕ ಬೆಂಕಿ ತಗಲಿದ್ದರಿಂದ ಮನೆಯವರ ದಾಖಲೆ ಪತ್ರಗಳೆಲ್ಲವೂ ಬೆಂಕಿಗಾಹುತಿಯಾಗಿದೆ.
ಸ್ಥಳಕ್ಕೆ ಗ್ರಾಮಕರಣಿಕ ರೂಪೇಶ್, ಗ್ರಾ.ಪಂ. ಸದಸ್ಯರಾದ ಯೋಗೀಶ್ ಆಲಂಬಿಲ, ಜಗದೀಶ್, ಪುರುಷೋತ್ತಮ, ಜಾನಕಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.