Advertisement

ಕೊಯಿಲ: ಪಾಳು ಬಿದ್ದಿದ್ದ ನಾಲ್ಕು ಬಾವಿಗಳಿಗೆ ಕಾಯಕಲ್ಪ

11:19 PM Feb 20, 2020 | mahesh |

ಆಲಂಕಾರು: ಸಮಸ್ಯೆ ತಲೆದೋರುವುದಕ್ಕಿಂತ ಮೊದಲೇ ಆ ಕುರಿತು ಆಲೋಚಿಸಿ ಪೂರ್ವಸಿದ್ಧತೆ ಮಾಡಿಕೊಳ್ಳುವುದು ಜಾಣತನ. ಕಡಬ ತಾಲೂಕು ಕೊಯಿಲ ಗ್ರಾ.ಪಂ. ಇಂತಹ ಜಾಣ ನಡೆಯನ್ನು ಇರಿಸಿದೆ. ಫೆಬ್ರವರಿ ಕೊನೆಯ ಅವಧಿಯಲ್ಲಿ ಕೊಳವೆ ಬಾವಿಗಳಲ್ಲಿ ನೀರು ಬರಿದಾಗಿ ಕುಡಿಯುವ ನೀರಿಗಾಗಿ ಈ ಗ್ರಾಮದಲ್ಲಿ ಹಾಹಾಕಾರ ಪ್ರಾರಂಭವಾಗುತ್ತದೆ. ಈ ಸಮಸ್ಯೆ ಜೂನ್‌ ತಿಂಗಳ ವರೆಗೆ ಕಾಡುತ್ತಿರುವುದರಿಂದ, ಇದರ ನಿವಾರಣೆಗೆ ಗ್ರಾ.ಪಂ. ಆಡಳಿತ ಸಜ್ಜಾಗಿದೆ. ಗ್ರಾಮದ ಕೊಳವೆ ಬಾವಿಗಳಲ್ಲಿ ನೀರು ಬರಿದಾದರೂ ತೆರೆದ ಬಾವಿಗಳು ತುಂಬಿರುವ ಕಾರಣ ಈ ನೀರನ್ನು ಬಳಸಿಕೊಳ್ಳಲು ಸ್ಥಳೀಯ ಆಡಳಿತ ಮಂಡಳಿ ನಿರ್ಧರಿಸಿದೆ.

Advertisement

ಸ್ವಂತ ಅನುದಾನದಲ್ಲಿ ದುರಸ್ತಿ
ಕೊಯಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಾಳು ಬಿದ್ದಿದ್ದ 4 ಬಾವಿಗಳನ್ನು ದುರಸ್ತಿ ಮಾಡಿ ಸಂಭವನೀಯ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಗಂಡಿಬಾಗಿಲು, ಗೋಕುಲ ನಗರ, ವಳಕಡಮ ಮತ್ತು ಸಬಲೂರು ಸಹಿತ 4 ಕಡೆಗಳಲ್ಲಿ ತೆರೆದ ಬಾವಿಗಳಿವೆ. ಇವುಗಳಲ್ಲಿ ನೀರಿದ್ದರೂ ಬಳಸಲಾಗದ ಸ್ಥಿತಿಯಿತ್ತು. ಹೂಳು ತುಂಬಿದ್ದ ಕಾರಣ ಅವು ಪಾಳು ಬಿದ್ದಿದ್ದವು. ಇನ್ನೂ ಕೆಲವರು ಈ ಬಾವಿಗಳಿಗೆ ತ್ಯಾಜ್ಯ ಎಸೆದು, ನೀರನ್ನು ಮಲಿನಗೊಳಿಸಿದ್ದರಿಂದ ಅದನ್ನು ಕುಡಿಯಲು ಅಥವಾ ದಿನಬಳಕೆಗೆ ಪಡೆಯದಂತಹ ಸ್ಥಿತಿ ಉಂಟಾಗಿತ್ತು.

ಹೀಗಾಗಿ ಇದೀಗ ಈ ಎಲ್ಲ ತೆರೆದ ಬಾವಿ ಗಳನ್ನು ಗ್ರಾ.ಪಂ. ಸ್ವಂತ ಅನುದಾನದಲ್ಲಿ ದುರಸ್ತಿ ಮಾಡಲು ಪ್ರಾರಂಭಿಸಿದೆ. ಪ್ರತೀ ವರ್ಷದ ಮಾರ್ಚ್‌, ಎಪ್ರಿಲ್‌, ಮೇ ತಿಂಗಳಲ್ಲಿ ಬೋರ್‌ವೆಲ್‌ಗ‌ಳಲ್ಲಿ ಅಂತರ್ಜಲ ಕುಸಿತ ಆಗಿ ಕುಡಿಯುವ ನೀರಿಗೆ ತೊಂದರೆ ಪಡುವಂತಾಗುತ್ತದೆ. ಈ ಸಂದರ್ಭಗಳಲ್ಲಿ ಇಂತಹ ಬಾವಿಗಳಲ್ಲಿ ನೀರು ಇರುತ್ತಿತ್ತು. ಆದರೆ ಮಲೀನಗೊಂಡಿದ್ದ ಕಾರಣ ತೆಗೆಯುವಂತಿಲ್ಲದೆ ಊಟಕ್ಕೆ ಇಲ್ಲದ ಉಪ್ಪಿನಕಾಯಿ ಎಂಬಂತಾಗಿತ್ತು. ಇದೀಗ ಕೊಯಿಲ ಗ್ರಾ.ಪಂ. ಮಾದರಿ ಹೆಜ್ಜೆ ಇರಿಸಿ, ಬೇಸಗೆಯಲ್ಲಿ ನೀರಿನ ಅಭಾವ ಇಲ್ಲದಂತಾಗಿಸಲು ಕ್ರಮ ಕೈಗೊಂಡಿದೆ.

ಗ್ರಾ.ಪಂ. ಕ್ರಮಕ್ಕೆ ಪ್ರಶಂಸೆ
ಹತ್ತಾರು ವರ್ಷಗಳಿಂದ ಪಾಳು ಬಿದ್ದಿದ್ದ ಬಾವಿಯನ್ನು ದುರಸ್ತಿ ಮಾಡುವ ಮೂಲಕ ಬಿರು ಬೇಸಿಗೆ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಸಮಸ್ಯೆಯನ್ನು ಎದುರಾಗಬಾರದೆಂದು ಗ್ರಾ.ಪಂ. ಕೈಗೊಂಡಿರುವ ಬಾವಿ ದುರಸ್ತಿ ಕ್ರಮದ ಬಗ್ಗೆ ಗ್ರಾಮಸ್ಥರಿಂದ ಪ್ರಶಂಸೆ ವ್ಯಕ್ತವಾಗಿದೆ.

ಸಮಸ್ಯೆ ಆಗಬಾರದು
ವರ್ಷಂಪ್ರತಿ ಬೇಸಗೆಯಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿಗೆ ಸಮಸ್ಯೆ ಎದುರಾಗುತ್ತಿತ್ತು. ಇದನ್ನು ಅರ್ಥೈಸಿಕೊಂಡು ಅಂತಹ ಸಮಸ್ಯೆ ಎದುರಾದಾಗ ಕನಿಷ್ಠ ನೀರಿನ ಸಲುವಾಗಿಯಾದರೂ ನೀರು ಸೇದಿ ತಂದು ತುರ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಬಾವಿಯನ್ನು ಸುಸ್ಥಿತಿಯಲ್ಲಿ ಇಟ್ಟು ಕೊಳ್ಳಬೇಕು ಎಂದು ನಿರ್ಧರಿಸಿದ್ದೆವು. ಆದರೆ ಕಾರ್ಮಿಕರು ಸಿಗದೆ ತಡವಾಗಿತ್ತು. ಇದೀಗ ಬಾವಿಗಳನ್ನು ದುರಸ್ತಿ ಮಾಡಲು ಸಾಧ್ಯವಾಗಿದೆ.
– ಹೇಮಾ ಮೋಹನ್‌ದಾಸ್‌, ಕೊಯಿಲ ಗ್ರಾಮ ಪಂಚಾಯತ್‌ ಅಧ್ಯಕ್ಷೆ

Advertisement

ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next