Advertisement

Kohli ಆಗಮನ; ಸರಣಿ ಜಯದತ್ತ ಗಮನ: ಇಂದೋರ್‌ನಲ್ಲಿಂದು 2ನೇ ಟಿ20 

11:42 PM Jan 13, 2024 | Team Udayavani |

ಇಂದೋರ್‌: ಅಫ್ಘಾನಿಸ್ಥಾನ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಅಧಿಕಾರಯುತವಾಗಿ ಗೆದ್ದ ಭಾರತವೀಗ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ರವಿವಾರ ಇಂದೋರ್‌ನಲ್ಲಿ ಗೆದ್ದರೆ ಸರಣಿ ಟೀಮ್‌ ಇಂಡಿಯಾ ವಶವಾಗಲಿದೆ. ಭಾರತದ ವಿರುದ್ಧ ಅಫ್ಘಾನ್‌ ಇನ್ನೂ ಗೆಲುವಿನ ಖಾತೆ ತೆರೆದಿಲ್ಲ ಎಂಬುದನ್ನು ಗಮನಿಸುವಾಗ ಎರಡೇ ಪಂದ್ಯಗಳಲ್ಲಿ ಸರಣಿ ನಮ್ಮವರ ವಶವಾಗಬಹುದು ಎಂಬ ನಿರೀಕ್ಷೆಯೊಂದನ್ನು ಇರಿಸಿ ಕೊಳ್ಳಲಡ್ಡಿಯಿಲ್ಲ.

Advertisement

ಮೊಹಾಲಿ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಜಯಿಸಿತ್ತು. 4ಕ್ಕೆ 159 ರನ್‌ ಗಳಿಸುವ ವೇಳೆ ಆಗಿನ್ನೂ 2.3 ಓವರ್‌ ಬಾಕಿ ಇತ್ತು. ಶಿವಂ ದುಬೆ ಅಜೇಯ 60 ರನ್‌ ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶುಭಮನ್‌ ಗಿಲ್‌, ತಿಲಕ್‌ ವರ್ಮ, ಜಿತೇಶ್‌ ಶರ್ಮ, ರಿಂಕು ಸಿಂಗ್‌… ಎಲ್ಲರೂ ಬ್ಯಾಟಿಂಗ್‌ನಲ್ಲಿ ಯಶಸ್ಸು ಕಂಡಿದ್ದರು.
ಹಾಗೆಯೇ ನಾಯಕ ರೋಹಿತ್‌ ಶರ್ಮ ಸೊನ್ನೆ ಸುತ್ತಿ ಟೀಕೆಗೊಳಗಾ ಗಿದ್ದನ್ನೂ ಮರೆಯುವಂತಿಲ್ಲ. ಕೇವಲ ತಂಡ ಗೆದ್ದರಷ್ಟೇ ಸಾಲದು, ನಾಯಕನ ಬ್ಯಾಟ್‌ನಿಂದ ರನ್‌ ಹರಿದು ಬಂದರಷ್ಟೇ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಬಹುದೆಂಬುದು ಸರಳ ಲೆಕ್ಕಾಚಾರ. ಇಲ್ಲವಾದರೆ ವಿಶ್ವಕಪ್‌ ಪಂದ್ಯಾವಳಿಗೆ ಯುವಕರ ತಂಡವೇ ಅಂತಿಮಗೊಂಡೀತು.

ತಿಲಕ್‌ ಸ್ಥಾನಕ್ಕೆ ಕೊಹ್ಲಿ?
ಮೊದಲ ಪಂದ್ಯದಿಂದ ಹೊರಗುಳಿ ದಿದ್ದ ವಿರಾಟ್‌ ಕೊಹ್ಲಿ ಇಂದೋರ್‌ನಲ್ಲಿ ಆಡಲಿದ್ದಾರೆ. ಇವರಿಗಾಗಿ ಸ್ಥಾನ ಬಿಡುವವರು ಯಾರು ಎಂಬುದು ಸದ್ಯದ ಪ್ರಶ್ನೆ. ವಾಷಿಂಗ್ಟನ್‌ ಸುಂದರ್‌ ಅವರನ್ನೇ ಕೈಬಿಡಬಹುದು, ಆದರೆ ಆಗ 6ನೇ ಬೌಲರ್‌ ಕೊರತೆ ಕಾಡಲಿದೆ. ಹೀಗಾಗಿ ವನ್‌ಡೌನ್‌ನಲ್ಲಿ ಬಂದಿದ್ದ ತಿಲಕ್‌ ವರ್ಮ ಅವರೇ ಟಾರ್ಗೆಟ್‌ ಆಗಬಹುದು.

ವಿಕೆಟ್‌ ಕೀಪರ್‌ ಜಿತೇಶ್‌ ವರ್ಮ ಬದಲು ಸಂಜು ಸ್ಯಾಮ್ಸನ್‌ ಉತ್ತಮ ಆಯ್ಕೆ ಎಂಬುದರಲ್ಲಿ ಎರಡು ಮಾತಿಲ್ಲ. ಜಿತೇಶ್‌ ವೆಸ್ಟ್‌ ಇಂಡೀಸ್‌ ವಿರುದ್ಧದ 3 ಪಂದ್ಯಗಳಲ್ಲಿ ಕ್ರಮವಾಗಿ 39, 51 ಮತ್ತು ಅಜೇಯ 49 ರನ್‌ ಹೊಡೆದು ಗಮನ ಸೆಳೆದಿದ್ದರು. ಅನಂತರದ 13 ಇನ್ನಿಂಗ್ಸ್‌ ಗಳಲ್ಲಿ ಬಾರಿಸಿದ್ದು ಒಂದೇ ಶತಕಾರ್ಧ. ಇದು ಏಷ್ಯಾಡ್‌ನ‌ಲ್ಲಿ ಬಾಂಗ್ಲಾದೇಶ ವಿರುದ್ಧ ಬಂದಿತ್ತು.

ಗಾಯಾಳಾಗಿ ವಿಶ್ವಕಪ್‌ ತಪ್ಪಿಸಿ ಕೊಂಡಿದ್ದ ಅಕ್ಷರ್‌ ಪಟೇಲ್‌ ಈಗ ಎಲ್ಲ ಮಾದರಿಗಳಲ್ಲೂ ಕಾಣಿಸಿಕೊಂಡಿದ್ದಾರೆ. ಎಡಗೈ ಸ್ಪಿನ್ನರ್‌ ಆಗಿರುವ ಪಟೇಲ್‌ ಅವರನ್ನು ಇಂಗ್ಲೆಂಡ್‌ ಎದುರಿನ ಟೆಸ್ಟ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಖುಷಿಯಲ್ಲಿ ಅವರು ಮೊದಲ ಪಂದ್ಯಕ್ಕಿಂತಲೂ ಉತ್ತಮ ನಿರ್ವಹಣೆ ನೀಡಬೇಕಿದೆ. ಮೊಹಾಲಿಯಲ್ಲಿ ಅಕ್ಷರ್‌ ಸಾಧನೆ 23ಕ್ಕೆ 2 ವಿಕೆಟ್‌. ಮತ್ತೋರ್ವ ಸ್ಪಿನ್ನರ್‌ ರವಿ ಬಿಷ್ಣೋಯಿ ಅಲ್ಲಿ ದುಬಾರಿ ಆಗಿದ್ದರು. ಇಂದೋರ್‌ನಲ್ಲಿ ಸ್ಪಿನ್‌ ಮ್ಯಾಜಿಕ್‌ ಮಾಡಬೇಕಿದೆ.

Advertisement

ರಶೀದ್‌ ಗೈರಿನಿಂದ ಹಿನ್ನಡೆ
ಲೆಗ್‌ಸ್ಪಿನ್ನರ್‌ ರಶೀದ್‌ ಖಾನ್‌ ಗೈರು ಖಂಡಿತವಾಗಿಯೂ ಅಫ್ಘಾನ್‌ಗೆ ಒಂದು ಹಿನ್ನಡೆ. ರಶೀದ್‌ ಇದ್ದಿದ್ದರೆ ಬಹುಶಃ ಮೊದಲ ಪಂದ್ಯ 20ನೇ ಓವರ್‌ ತನಕ ಎಳೆಯಲ್ಪಡುತ್ತಿತ್ತೋ ಏನೋ. ಇವರ ಗೈರಲ್ಲಿ ಬಹುತೇಕ ಬೌಲರ್ ದುಬಾರಿ ಆಗಿದ್ದರು. ನಿಯಂತ್ರಣ ಸಾಧಿಸಿದ್ದು ಮುಜೀಬ್‌ ಉರ್‌ ರೆಹಮಾನ್‌ ಮಾತ್ರ. ಒಂದು ಮೇಡನ್‌ ಓವರ್‌ ಕೂಡ ಎಸೆದಿದ್ದರು.

ಅಫ್ಘಾನ್‌ ಅಪಾಯಕಾರಿ ತಂಡವಾ ದರೂ ಬ್ಯಾಟಿಂಗ್‌ ವಿಭಾಗದಲ್ಲಿ ಇದೇನೂ ಗೋಚರಕ್ಕೆ ಬರಲಿಲ್ಲ. ಮೊಹಮ್ಮದ್‌ ನಬಿ ಮಾತ್ರ ಟಿ20 ಜೋಶ್‌ನಲ್ಲಿದ್ದರು. ಅಗ್ರ ಕ್ರಮಾಂಕದ ಮೂವರು ತಲಾ ಒಂದು ಸಿಕ್ಸರ್‌, 2 ಬೌಂಡರಿ ಹೊಡೆದರೂ ಮೂವತ್ತರ ಗಡಿಯಾಚೆ ಸಾಗಲಿಲ್ಲ. ದೊಡ್ಡ ಮೊತ್ತ ಅಥವಾ ನಿಯಂತ್ರಿತ ಬೌಲಿಂಗ್‌ನಿಂದ ಮಾತ್ರ ಅಫ್ಘಾನ್‌ ಮೇಲುಗೈ ನಿರೀಕ್ಷಿಸಬಹುದು.

ಆರಂಭ: ರಾತ್ರಿ 7.00
ಪ್ರಸಾರ: ಸ್ಪೋರ್ಟ್ಸ್ 18

Advertisement

Udayavani is now on Telegram. Click here to join our channel and stay updated with the latest news.

Next