Advertisement
ಮಕ್ಕಳಿಗೆ ಪ್ರೋತ್ಸಾಹ ನೀಡುವ ಆನ್‌ಲೈನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ತಮ್ಮ ವೃತ್ತಿ ಬದುಕಿನಲ್ಲಿ ಎದುರಿಸಿದ ಹಲವು ಸವಾಲುಗಳ ಕುರಿತಾಗಿ ಮಾತನಾಡಿದರು.
“ರಾಜ್ಯ ತಂಡದ ಆಯ್ಕೆ ಸಮಿತಿಯಿಂದ ನಾನು ಮೊದಲ ಬಾರಿ ತಿರಸ್ಕೃತಗೊಂಡಿದ್ದೆ. ಈ ಘಟನೆ ಈಗಲೂ ನೆನಪಿದೆ. ಆ ದಿನ ತಡರಾತ್ರಿ ನಾನು ತುಂಬಾ ಅತ್ತಿದ್ದೆ. ಬೆಳಗ್ಗೆ ಮೂರು ಗಂಟೆಯವರೆಗೂ ನಾನು ಅಳುತ್ತಲೇ ಇದ್ದೆ. ನನಗೆ ತಂಡದಲ್ಲಿ ಸ್ಥಾನ ಸಿಗದೇ ಹೋದ ವಿಚಾರ ನಂಬಲು ಸಾಧ್ಯವಾಗಿರಲಿಲ್ಲ. ಏಕೆಂದರೆ ಆ ಸಂದರ್ಭ ನಾನು ಉತ್ತಮವಾಗಿ ರನ್ ಗಳಿಸುತ್ತಿದ್ದೆ.ಎಲ್ಲವೂ ಅತ್ಯುತ್ತಮ ರೀತಿಯಲ್ಲಿ ಸಾಗಿತ್ತು. ಅಷ್ಟೆಲ್ಲ ಶ್ರೇಷ್ಠ ಪ್ರದರ್ಶನ ನೀಡಿಯೂ ಆಯ್ಕೆ ಸಮಿತಿ ನನ್ನನ್ನು ತಿರಸ್ಕರಿಸಿದ್ದು ಬಹಳ ನೋವು ತಂದಿತ್ತು ಎಂದು ಕೊಹ್ಲಿ ಹೇಳಿದರು. ಅಂದು ಎರಡು ಗಂಟೆಗೂ ಅಧಿಕ ಕಾಲ ನಾನು ನನ್ನ ಕೋಚ್ ಬಳಿ ಆಯ್ಕೆ ಆಗದೇ ಇರಲು ಕಾರಣವೇನು? ಎಂದು ಕೇಳುತ್ತಲೇ ಇದ್ದೆ. ನಾನು ಆಯ್ಕೆ ಆಗದೇ ಇರುವುದಕ್ಕೆ ಕಾರಣವೇ ಅರ್ಥವಾಗುತ್ತಿರಲಿಲ್ಲ. ಆದರೆ ಬದ್ಧತೆ ಮತ್ತು ಒಲವಿದ್ದರೆ ಸಾಧನೆ ಕಂಡಿತ ಸಾಧ್ಯ. ಒಂದು ವೇಳೆ ನಾನು ಅಂದು ಈ ವಿಚಾರವನ್ನು ಸವಾಲಾಗಿ ಸ್ವಿಕರಿಸದಿದ್ದರೆ ಇಂದು ಈ ಮಟ್ಟದಲ್ಲಿ ಹೆಸರು ಮಾಡುತ್ತಿರಲಿಲ್ಲ. ಪ್ರತಿಯೊಬ್ಬರ ಜೀವನದಲ್ಲಿಯೂ ಹಿನ್ನಡೆ ಎನ್ನುವುದು ಬಂದೇ ಬರುತ್ತದೆ. ಅದನ್ನು ಸವಾಲಾಗಿ ಸ್ವೀಕರಿಸಿದಾಗ ಮಾತ್ರ ಮುಂದಿನ ದಿನಗಳಲ್ಲಿ ಓರ್ವ ಸಮರ್ಥ ಸಾಧಕನಾಗಿ ರೂಪುಗೊಳ್ಳಲು ಸಾಧ್ಯ ಎಂದು ವಿರಾಟ್ ಮಕ್ಕಳಿಗೆ ಆತ್ಮಸ್ಥೈರ್ಯದ ಮಾತುಗಳನ್ನು ಹೇಳಿದ್ದಾರೆ.