Advertisement

ಮೂಡುಬಿದಿರೆ: ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸ್ಥಾಪಕ ಜಯರಾಮ ಹೆಗ್ಡೆ ನಿಧನ

04:39 PM Nov 23, 2022 | Team Udayavani |

ಮೂಡುಬಿದಿರೆ: ಅನಿವಾಸಿ ಉದ್ಯಮಿ, ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ   ಸ್ಥಾಪಕ ಮತ್ತು ಆಡಳಿತ ಮೊಕ್ತೇಸರ ಕೊಡ್ಯಡ್ಕ ಜಯರಾಮ ಹೆಗ್ಡೆ (73) ಅನಾರೋಗ್ಯದಿಂದ ನ.23ರ ಮಂಗಳವಾರ ಮಧ್ಯಾಹ್ನ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

Advertisement

ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

23ನೇ ವಯಸ್ಸಿನಲ್ಲಿ ಮಸ್ಕತ್ ನಲ್ಲಿ ಎಲೆಕ್ಟ್ರಿಕಲ್ ಹಾರ್ಡ್ ವೇರ್ ಶೋರೂಮ್ ಆರಂಭಿಸಿದ್ದರು. ನಂತರ ಹೋಟೇಲ್ ಉದ್ಯಮಕ್ಕೆ ಕಾಲಿರಿಸಿ ಯಶಸ್ವಿ ಉದ್ಯಮಿ ಎನಿಸಿಕೊಂಡರು.

1996ರಲ್ಲಿ ಕೊಡ್ಯಡ್ಕದಲ್ಲಿ ಅನ್ನಪೂರ್ಣೇಶ್ವರಿ ದೇವಸ್ಥಾನ ಕಟ್ಟಿಸಿ, ಅದನ್ನೊಂದು ಧಾರ್ಮಿಕ ಕ್ಷೇತ್ರ ಮಾತ್ರವಲ್ಲದೇ ಪ್ರವಾಸಿ ಆಕರ್ಷಣೆಯ ತಾಣವಾಗಿ, ಶಿಸ್ತು, ಸೌಂದರ್ಯ ಪ್ರಜ್ಞೆಯ ಆರಾಧನಾ ಕೇಂದ್ರವನ್ನಾಗಿ ರೂಪಿಸಿದರು.

ಬೃಹತ್ ಆಂಜನೇಯ ಸಿಮೆಂಟ್ ಶಿಲ್ಪ, ಪುರಂದರ ದಾಸ, ಸಾಯಿಬಾಬಾ ಮಂದಿರ, ದೇವಸ್ಥಾನದ ಪಕ್ಕ ಅಯ್ಯಪ್ಪ ಸನ್ನಿಧಿ, ಒಳಗಡೆ ಪ್ರಧಾನ ಅನ್ನಪೂರ್ಣೇಶ್ವರಿ ದೇವೀ ಅಲ್ಲದೆ ಗಣಪತಿ, ಆಂಜನೇಯ, ಸೋಮನಾಥ, ನವಗ್ರಹ ಮಂಟಪ ಹಂತಹಂತವಾಗಿ ಸ್ಥಾಪನೆಗೊಂಡಿದ್ದವು. ಸುಸಜ್ಜಿತ ಅತಿಥಿ ಗೃಹ, ಎರಡು ಸಭಾಂಗಣಗಳು ನಿರ್ಮಾಣಗೊಂಡಿದ್ದವು.

Advertisement

ಕ್ಷೇತ್ರದಲ್ಲಿ ಹಲವಾರು ಬಾರಿ ನಾಗಮಂಡಲೋತ್ಸವಗಳು ನಡೆದಿವೆ. ವಿದೇಶಿ ವಿ.ವಿ.ಯೊಂದರ ಗೌರವ ಡಾಕ್ಟರೇಟ್ ಗೂ ಅವರು ಪಾತ್ರರಾಗಿದ್ದರು.

ನಿತ್ಯ ಅನ್ನದಾನ, ಪರಿಸರದಲ್ಲಿ ಹೂದೋಟ, ಆಕರ್ಷಕ ಶಿಲ್ಪಗಳು, ನೀರಿನೊತ್ತಡದಲ್ಲಿ ತಿರುಗುವ ಶಿಲಾಗೋಳ ಹೀಗೆ ಹಲವಾರು ಆಕರ್ಷಣೆಯ ಅಂಶಗಳನ್ನು ಹೊಂದಿರುವ ಕೊಡ್ಯಡ್ಕ ಕ್ಷೇತ್ರದಿಂದ ಕೆಜಿಎಫ್ ಗೆ ಸರಕಾರಿ ಬಸ್ಸಿನ ವ್ಯವಸ್ಥೆ ಇದೆ.

ಜಯರಾಮ ಹೆಗ್ಡೆ ಅವರು ಹೆಗ್ಗಡೆ ಸಮಾಜದ ಮುಂದಾಳು, ದಾನಿಯೂ ಆಗಿದ್ದು, ಇವರ ಮುಂದಾಳತ್ವದಲ್ಲಿ ಕೋಟೆಬಾಗಿಲು ವೀರಮಾರುತಿ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸಿ ಮೂರು ಬಾರಿ ಬ್ರಹ್ಮಕಲಶೋತ್ದವ ನಡೆಸಲಾಗಿತ್ತು. ಇತರ ಪುರಾತನ ಕ್ಷೇತ್ರಗಳು, ಸಮುದಾಯಗಳಿಗೂ ಅವರು ಯಥಾಶಕ್ತಿ ಪ್ರೋತ್ಸಾಹಕರಾಗಿದ್ದರು.  ಬೆಂಗಳೂರಿನಲ್ಲೂ ಹೋಟೆಲ್ ಉದ್ಯಮಕ್ಕೆ ಕಾಲಿರಿಸಿದ ಇವರು ಪುತ್ರ ವೈಭವ್ ಹೆಗ್ಡೆಯೊಂದಿಗೆ ಕೆಲವು ವರ್ಷಗಳ ಹಿಂದೆ ಅಶ್ವತ್ಥಪುರದಲ್ಲಿ ದಿ ಎಸ್ಟೇಟ್ ರೆಸಾರ್ಟ್  ಉದ್ಯಮವನ್ನು ಆರಂಭಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next