Advertisement

ನಂಜನಗೂಡಲ್ಲಿ ಸೋತರೆ ರಾಜೀನಾಮೆ ಕೊಡ್ತೀರಾ?

01:14 PM Feb 18, 2017 | Team Udayavani |

ಮೈಸೂರು: ನಂಜನಗೂಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರಾಭವಗೊಂಡರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಪಡೆಯುತ್ತೀರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಸವಾಲು ಹಾಕಿದ್ದಾರೆ.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಂಜನಗೂಡು ಉಪ ಚುನಾವಣೆ ಶ್ರೀನಿವಾಸಪ್ರಸಾದ್‌ ಹಾಗೂ ಸಿದ್ದರಾಮಯ್ಯ ನಡುವಿನ ಹಣಾಹಣಿ ಎಂಬುದು ಜಗಜಾಹೀರಾಗಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಹಾಕುತ್ತಿದ್ದೇನೆ. ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟದ ಜೊತೆಗೆ ಎಐಸಿಸಿಯ ಎಲ್ಲ ಮುಖಂಡರನ್ನೂ ಕರೆದುಕೊಂಡು ಬರಲಿ.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರೆ ತಾವು ಜನನಾಯಕ, ಸಿದ್ದರಾಮಯ್ಯ ಅವರಿಗಿಂತ ಕಡಿಮೆ ಇಲ್ಲ. ಆದ್ದರಿಂದ ಉಪ ಚುನಾವಣೆಯಲ್ಲಿ ತಾವು ಸೋತರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ. ಕಾಂಗ್ರೆಸ್‌ ಸೋತರೆ ನೀವು ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ತೆಗೆದು ಕೊಳ್ಳುತ್ತೀರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

ಗೆದ್ದು ತೋರಿಸಿ: ನಂಜನಗೂಡು ವಿಧಾನಸಬಾ ಕ್ಷೇತ್ರದಲ್ಲಿ ಈವರೆಗೂ ಕಾಂಗ್ರೆಸ್‌ ಗೆಲ್ಲುತ್ತಿತ್ತು, ಶ್ರೀನಿವಾಸಪ್ರಸಾದ್‌ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಇಂತಹ ಕಾಂಗ್ರೆಸ್‌ ಪಕ್ಷಕ್ಕೆ ಇಂದಿಗೂ ಒಬ್ಬ ಅಭ್ಯರ್ಥಿ ಸಿಗುತ್ತಿಲ್ಲ. ಹೀಗಾಗಿ ಉಪ ಚುನಾವಣೆಯಲ್ಲಿ ಗೆದ್ದು ತಮ್ಮ ಶಕ್ತಿ ಏನೆಂದು ತೋರಿಸಿ ಎಂದು ಸವಾಲು ಹಾಕಿದರು.

ದುಷ್ಟಕೂಟ ರಚನೆ: ಕಾಂಗ್ರೆಸ್‌ ಹೈಕಮಾಂಡ್‌ಗೆ ಕಪ್ಪ ಕೊಡುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ದುಷ್ಟಕೂಟವನ್ನೇ ರಚಿಸಿಕೊಂಡಿ ದ್ದಾರೆ. ಆ ಕೂಟದ ಮೂಲಕವೇ ಎಲ್ಲರನ್ನೂ ಸಮಾಧಾನಪಡಿಸುತ್ತಿದ್ದಾರೆ. ದುಷ್ಟಕೂಟಕ್ಕೆ ದಿಗ್ವಿಜಯಸಿಂಗ್‌ ಮುಖ್ಯಸ್ಥರಾಗಿದ್ದಾರೆ. ಈ ಕೂಟದ ಮೂಲಕವೇ ಕಾಂಗ್ರೆಸ್‌ ಹೈಕಮಾಂಡ್‌ಗೆ ಕಪ್ಪ ನೀಡುತ್ತಿರುವ ಸಿದ್ದರಾಮಯ್ಯ ತನ್ನ ಸ್ಥಾನ ಉಳಿಸಿಕೊಂಡಿದ್ದಾರೆ. ಇಲ್ಲವಾಗಿದ್ದರೆ ಕಾಂಗ್ರೆಸ್‌ನಲ್ಲಿ ಆದ ಬೆಳವಣಿಗೆಗೆ ಸಿದ್ದರಾಮಯ್ಯ ಎಂದಿಗೋ ಸಿಎಂ ಸ್ಥಾನದಿಂದ ಕೇಳಗಿಳಿಯಬೇಕಿತ್ತು ಎಂದರು.

Advertisement

ಗುಲಾಮ: “ಲೋಕೋಪಯೋಗಿ ಸಚಿವ ಎಚ್‌.ಸಿ.ಮಹದೇವಪ್ಪ ಸಿದ್ದರಾಮಯ್ಯ ಅವರ ಗುಲಾಮ. ಅವರು ರಾಜಕೀಯದಲ್ಲಿ ಇರುವುದೇ ಸಿದ್ದರಾಮಯ್ಯರಿಂದ. ಅವರ ಕೃಪಾ ಕಟಾಕ್ಷವಿಲ್ಲದೇ ಹೋದರೆ ಮಹದೇವಪ್ಪಗೆ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುವ ಶಕ್ತಿಯೂ ಇಲ್ಲ. ಇವರ ಮೂಲಕ ಹೈಕಮಾಂಡ್‌ ಕಿವಿ ಊದಿ, ಇವರಿಲ್ಲದಿದ್ದರೆ ಕಾಂಗ್ರೆಸ್‌ ಇಲ್ಲ ಎಂಬ ಪರಿಸ್ಥಿತಿಗೆ ತಂದಿದ್ದಾರೆ. ಹೀಗಾಗಿ ಎಐಸಿಸಿ ಅತ್ಯಂತ ದುರ್ಬಲವಾಗಿದೆ. ಸೋನಿಯಾ ಗಾಂಧಿ ಅತ್ಯಂತ ಮುಗೆ. ಇನ್ನು ರಾಹುಲ್‌ ಗಾಂಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂಬುದು ಗೊತ್ತಾಗುವುದು ಅವರನ್ನು ಆರು ತಿಂಗಳಿಗೊಮ್ಮೆ ನೋಡಿದಾಗ ಮಾತ್ರ’ ಎಂದು ಲೇವಡಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಉಡಾಫೆ ವ್ಯಕ್ತಿ ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಪಕ್ಕದಲ್ಲಿ ಕುಳಿತುಕೊಳ್ಳಲು ನಾಚಿಕೆ ಆಗುತ್ತಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು ರಾಜ್ಯದ ಜನರ ದುರದೃಷ್ಟ. ಮುಖ್ಯಮಂತ್ರಿ ಹುದ್ದೆಗೆ ಇದ್ದ ಸಂಪ್ರದಾಯವನ್ನು ಬದಲಾಯಿಸಿದ ಸಿದ್ದರಾಮಯ್ಯರಿಗೆ ಆ ಹುದ್ದೆಯ ಘನತೆ, ಗೌರವವೇ ತಿಳಿದಿಲ್ಲ.            
-ಶ್ರೀನಿವಾಸ ಪ್ರಸಾದ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next