Advertisement

ಕೈಗೂಡದ ಕೋಡಿ ಹೊಸಬೆಂಗ್ರೆ ನಿವಾಸಿಗಳ ಹಕ್ಕುಪತ್ರದ ಕನಸು

10:18 PM Oct 22, 2020 | mahesh |

ಕೋಟ: ಕೋಡಿ ಗ್ರಾ.ಪಂ. ವ್ಯಾಪ್ತಿಯ ಹೊಸಬೆಂಗ್ರೆಯ ಕಡಲ ತಡಿಯಲ್ಲಿ ವಾಸಿಸುವ ಸುಮಾರು 471 ಕುಟುಂಬಗಳು ನಾಲ್ಕು ದಶಕಗಳಿಂದ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಿವೆ. ಆದರೆ ಸಿ.ಆರ್‌.ಝಡ್‌. ಕಠಿನ ನಿಯಮದಿಂದಾಗಿ ಇವರಿಗೆ ಹಕ್ಕುಪತ್ರ ಸಿಗುತ್ತಿಲ್ಲ ಮತ್ತು ಸರಕಾರದ ವಸತಿ ಯೋಜನೆ, ವಿದ್ಯುತ್‌, ಶೌಚಾಲಯ, ಸಾಲ ಸೌಲಭ್ಯಗಳು ಸಿಗುತ್ತಿಲ್ಲ.

Advertisement

ಈ ಕುಟುಂಬಗಳಿಗೆ ಸಿ.ಆರ್‌.ಝಡ್‌. ನಿರಾಪೇಕ್ಷಣಾ ಪತ್ರ ನೀಡಬೇಕಾದರೆ 1991ಕ್ಕಿಂತ ಮೊದಲಿನ ಕಂದಾಯ ಪಾವತಿ ರಶೀದಿ ಅಥವಾ ವಿದ್ಯುತ್‌ ಬಿಲ್‌ ಮುಂತಾದ ದಾಖಲೆಗಳನ್ನು ಹಾಜರುಪಡಿಸುವಂತೆ ಕೇಳುತ್ತಿದೆ. ಆದರೆ 1991ಕ್ಕೆ ಮೊದಲು ಇಲ್ಲಿನ ಹೆಚ್ಚಿನ ಮನೆಗಳಲ್ಲಿ ವಿದ್ಯುತ್‌ ಇರಲಿಲ್ಲ. ಕಂದಾಯ ಪಾವತಿಯ ರಶೀದಿ ಜೋಪಾನವಾಗಿಟ್ಟಿಲ್ಲ. ಹೀಗಾಗಿ ಇಪ್ಪತ್ತು ವರ್ಷ ಹಿಂದಿನ ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. ಆದರೆ ಅವೆಲ್ಲವೂ ತಿರಸ್ಕೃತಗೊಂಡಿವೆ.

ನಿರಂತರ ಹೋರಾಟ
ಮೀನುಗಾರ ಮುಖಂಡರಾದ ಡಾ| ಜಿ.ಶಂಕರ್‌ ಅವರ ನೇತೃತ್ವದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮುಂತಾದ ಜನಪ್ರತಿನಿಧಿಗಳ ಮೂಲಕ ಇವರ ಸಮಸ್ಯೆಗಳನ್ನು ಸರಕಾರಕ್ಕೆ ಮುಟ್ಟಿಸಲಾಗಿತ್ತು ಮತ್ತು 2012ರಲ್ಲಿ ಸರ್ವೇ ಕಾರ್ಯ ನಡೆಸಲಾಗಿತ್ತು. ಸಂತತಿ ನಕ್ಷೆ, ವಂಶವೃಕ್ಷ, ತೋಟಗಾರಿಕೆ ಇಲಾಖೆ ಜತೆಗೂಡಿ ತೆಂಗು ಮುಂತಾದ ಮರಗಳ ವರ್ಷವನ್ನು ಅವಲೋಕಿಸಿ, ವರದಿ ರಚಿಸಿ ಸರಕಾರಕ್ಕೆ ಕಳುಹಿಸಲಾಗಿತ್ತು. ಆದರೆ ಆರಂಭದಲ್ಲಿ ಒಂದು ಕುಟುಂಬವಿದ್ದ ಮನೆಗಳು ಇದೀಗ ನಾಲ್ಕೈದು ಕುಟುಂಬವಾಗಿ ಬದಲಾಗಿದ್ದರಿಂದ ಸಂತತಿ ನಕ್ಷೆ ತಯಾರಿಸಲು ಸಾಕಷ್ಟು ಸಮಸ್ಯೆಯಾಗಿತ್ತು. ಕೆಲವರು ವಾಸಿಸುತ್ತಿರುವ ಜಾಗಕ್ಕೆ ಸರ್ವೆ ನಂಬ್ರವೇ ಇರಲಿಲ್ಲ. ಹೀಗಾಗಿ ಪರಂಬೋಕು, ಸಮುದ್ರ ಎಂದು ನಕ್ಷೆಯಲ್ಲಿ ಉಲ್ಲೇಖಗೊಂಡ ಪ್ರದೇಶವನ್ನು ಆ ಶೀರ್ಷಿಕೆಯಿಂದ ವಿರಹಿತಗೊಳಿಸಿ ಹೊಸ ಸರ್ವೇ ನಂಬರ್‌ ನೀಡುವಂತೆ 2018ರಲ್ಲಿ ಆದೇಶವಾಯಿತು. ಆದರೆ ಅದು ಕೂಡ ನನೆಗುದಿಗೆ ಬಿತ್ತು. ಅನಂತರ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸಮಸ್ಯೆಯನ್ನು ಅರ್ಜಿ ಸಮಿತಿಯಲ್ಲಿ ಚರ್ಚಿಸಿ, ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಆದರೆ ದಾಖಲೆಗಳನ್ನು ಸಲ್ಲಿಸಿದ ಪೈಕಿ ಕೇವಲ 18 ಕುಟುಂಬಗಳಿಗೆ ಮಾತ್ರ ಹಕ್ಕುಪತ್ರ ಸಿಕ್ಕಿದ್ದು ಮಿಕ್ಕುಳಿದ 471 ಕುಟುಂಬಗಳು ವಂಚಿತವಾಗಿವೆ.

ಮೀನುಗಾರರೇ ಹೆಚ್ಚು
ಮೊಗವೀರ ಹಾಗೂ ಖಾರ್ವಿ ಸಮಾಜದವರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿ ದ್ದಾರೆ. ಇವರ ಮುಖ್ಯ ಕಸುಬು ಮೀನುಗಾರಿಕೆ. ಹೀಗಾಗಿ ಈ ಕಡಲ ಪ್ರದೇಶವನ್ನು ತೊರೆದು ಬೇರೆ ಕಡೆ ವಲಸೆ ಹೋಗಲು ಇವರಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇದೇ ಭೂಮಿಯ ಹಕ್ಕನ್ನು ತಮಗೆ ನೀಡಬೇಕು ಎನ್ನುವುದು ಇವರ ಬೇಡಿಕೆಯಾಗಿದೆ.

ನಿಯಮ ಸಡಿಲಿಕೆ ಒತ್ತಾಯ
ಸಿ.ಆರ್‌.ಝಡ್‌. ಇಲಾಖೆ ಕೇಳುತ್ತಿರುವ 1991ಕ್ಕಿಂತ ಹಿಂದಿನ ದಾಖಲೆಗಳನ್ನು ನೀಡಲು ಅಸಾಧ್ಯವಾಗಿರುವುದು ಈ ಎಲ್ಲ ಸಮಸ್ಯೆಗೆ ಮೂಲ ಕಾರಣ. ಆದ್ದರಿಂದ ನಿಯಮಗಳನ್ನು ಸರಳೀಕರಿಸಿ ವಿಶೇಷ ಪ್ರಕರಣವಾಗಿ ಪರಿಗಣಿಸಿ ಹಕ್ಕುಪತ್ರ ನೀಡಬೇಕು ಎನ್ನುವುದು ಸ್ಥಳೀಯರ ಬೇಡಿಕೆ.

Advertisement

ತಹಶೀಲ್ದಾರ್‌ ನೇತೃತ್ವದಲ್ಲಿ ಸಮಿತಿ
ಅರ್ಹ ಫಲಾನುಭವಿಗಳನ್ನು ಗುರುತಿಸಿ ಹಕ್ಕುಪತ್ರಕ್ಕೆ ವ್ಯವಸ್ಥೆ ಮಾಡುವ ಸಲುವಾಗಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಬ್ರಹ್ಮಾವರ ತಹಶೀಲ್ದಾರ್‌ ಕಿರಣ್‌ ಗೌರಯ್ಯ ಅವರ ಅಧ್ಯಕ್ಷತೆಯಲ್ಲಿ ಸಿ.ಆರ್‌.ಝಡ್‌. ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ, ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಸ್ಥಳೀಯ ಪಿ.ಡಿ.ಒ. ಸರ್ವೇ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದ್ದು ಇದಕ್ಕೆ ದಾಖಲೆಗಳನ್ನು ಕಲೆಹಾಕಲಾಗುತ್ತಿದೆ.

ಶೀಘ್ರ ವರದಿ ನೀಡಲಿದ್ದೇವೆ
ಅಗತ್ಯ ದಾಖಲೆಗಳ ಕೊರತೆಯಿಂದ ಕೋಡಿ ಕನ್ಯಾಣ ಗ್ರಾಮಸ್ಥರಿಗೆ ಹಕ್ಕುಪತ್ರ ಪಡೆಯಲು ಹಿನ್ನಡೆಯಾಗಿದೆ. ಈ ಕುರಿತು ಪರಿಶೀಲಿಸಲು ಜಿಲ್ಲಾಧಿಕಾರಿಗಳು ನನ್ನ ನೇತೃತ್ವದ ಸಮಿತಿಯೊಂದನ್ನು ನೇಮಿಸಿದ್ದು ಒಂದೆರಡು ಸಭೆಗಳನ್ನು ನಡೆಸಲಾಗಿದೆ. ಶೀಘ್ರವಾಗಿ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಜತೆ ಸೇರಿಸಿ ಸಭೆ ನಡೆಸಿ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿದ್ದೇವೆ.
-ಕಿರಣ್‌ ಗೌರಯ್ಯ, ತಹಶೀಲ್ದಾರರು, ಬ್ರಹ್ಮಾವರ

ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ
ನಮ್ಮ ಬಳಿ ಇರುವ ಎಲ್ಲ ದಾಖಲೆ ಹಾಜರುಪಡಿಸಿದ್ದು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ . ಸಿ.ಆರ್‌.ಝಡ್‌. ಕೇಳುವ ದಾಖಲೆ ನಮ್ಮ ಬಳಿ ಇಲ್ಲದಿರುವುದರಿಂದ ಜಿಲ್ಲಾಧಿಕಾರಿಗಳು ನೇಮಕ ಮಾಡಿದ ತಹಶೀಲ್ದಾರರ ನೇತೃತ್ವದ ಸಮಿತಿಯಿಂದಲೂ ಹೆಚ್ಚಿನ ಪ್ರಯೋಜನವಾಗುವ ಲಕ್ಷಣ ಕಾಣುತ್ತಿಲ್ಲ. ಈ ಕುರಿತು ಚರ್ಚೆ ನಡೆಸಲು ಗ್ರಾಮಸ್ಥರ ಸಭೆ ಕರೆಯಲಾಗಿದ್ದು ಈ ಬಾರಿಯ ಗ್ರಾ.ಪಂ. ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ.
-ಲಕ್ಷ್ಮಣ ಸುವರ್ಣ, ಸ್ಥಳೀಯರು

ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next