ಬೆಂಗಳೂರು: ಹೀರೋ ಎಂದರೆ ಸುಂದರವಾಗಿರಬೇಕು, ಒಳ್ಳೆಯ ಕಲರ್, ಕಟ್ಟುಮಸ್ತು ದೇಹವಿರಬೇಕು, ಆತನಿಗೊಂದು ಗ್ರ್ಯಾಂಡ್ ಎಂಟ್ರಿ ಇರಬೇಕು, ಫೈಟ್ ನಲ್ಲಿ ಎಂಟು ಜನ ಗಾಳಿಯಲ್ಲಿ ತೇಲಾಡಬೇಕು, ಸಿನಿಮಾದಲ್ಲಿ ಎಲ್ಲವೂ ಆತನ ಮೂಗಿನ ನೇರಕ್ಕೆ ನಡೆಯಬೇಕು …ಇಂತಹ “ಬೇಕು’ಗಳ ಮಧ್ಯೆಯೇ ಬಹುತೇಕರು ಸಿನಿಮಾ ಮಾಡುತ್ತಾರೆ. ಆದರೆ, ಇದನ್ನೇ ಉಲ್ಟಾ ಯೋಚನೆ ಮಾಡಿದರೆ ಹೇಗಿರುತ್ತದೆ ಹೇಳಿ…
ಹೌದು, ಈ ವಾರ ತೆರೆ ಕಂಡಿರುವ “ಕೊಡೆಮುರುಗ’ ಚಿತ್ರ ಒಂದು ವಿಭಿನ್ನ ಕಥಾಹಂದರದೊಂದಿಗೆ ಮೂಡಿಬಂದಿದೆ. ಸಿನಿಮಾ ಮಾಡಲು ಹೊರಟಿರುವ ಯುವ ನಿರ್ದೇಶಕನ ಚಿತ್ರ ರಂಗದಲ್ಲಿ ಯಾವ ರೀತಿ ಕಷ್ಟಪಡುತ್ತಾನೆ, ಆತ ಅನಿವಾರ್ಯವಾಗಿ ಹೇಗೆ ತನ್ನ ಕನಸಿನೊಂದಿಗೆ ಕಾಂಪ್ರಮೈಸ್ ಆಗುತ್ತಾನೆ ಎಂಬ ಅಂಶದ ಜೊತೆಗೆ ಸಿದ್ಧಸೂತ್ರ ಬಿಟ್ಟು ಹೀರೋ ಒಬ್ಬನನ್ನು ಹೇಗೆ ತಯಾರಿಸಬಹುದು ಎಂಬ ಅಂಶವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.
ಒಂದರ್ಥದಲ್ಲಿ ಇದು ಸಿನಿಮಾದೊಳಗಿನ ಸಿನಿಮಾದ ಕಥೆ. ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್ ತಮ್ಮ ಚೊಚ್ಚಲ ನಿರ್ದೇಶನದಲ್ಲಿ ಭರವಸೆ ಮೂಡಿಸಿದ್ದಾರೆ. ರೆಗ್ಯುಲರ್ ಪ್ಯಾಟರ್ನ್ ಬದಿಗೊತ್ತಿ, ಒಂದಷ್ಟು ಹೊಸತನದೊಂದಿಗೆ ಈ ಸಿನಿಮಾವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.
ಒಂದರ್ಥದಲ್ಲಿ ಚಿತ್ರರಂಗದಲ್ಲಿ ಹೊಸ ಬರು ಎದುರಿಸುವ ತಾಪತ್ರಯಗಳೇ ಇವರ ಸಿನಿಮಾದ ಜೀವಾಳ ಎನ್ನಬಹುದು. ಹೀರೋ ಆಗುವ ಕನಸು ಈಡೇರಿಸಿಕೊಳ್ಳಲು ಆತ ಮಾಡುವ ಪ್ಲ್ರಾನ್, ಅದರ ಜೊತೆಗೆ ನಂಬಿದವರಿಗೆ ನ್ಯಾಯ ಒದಗಿಸಲು ಹೊರಡುವ ನಿರ್ದೇಶಕ … ಹೀಗೆ ಹಲವು ಅಂಶಗಳು ಸಿನಿಮಾದಲ್ಲಿ ಗಮನ ಸೆಳೆಯುತ್ತವೆ. ಜೊತೆಗೆ ಸಿನಿಮಾದಲ್ಲಿ ಹೀರೋ ಆಗಲು ಹೈಟು, ಕಲರ್ ಮುಖ್ಯವಲ್ಲ, ಪ್ರತಿಭೆ ಮುಖ್ಯ ಎಂಬ ಸೂಕ್ಷ್ಮ ಸಂದೇಶವೂ ಇದೆ.
ಹಾಗಂತ ಇದು ಗಂಭೀರವಾಗಿ ಸಾಗುವ ಸಿನಿಮಾವಲ್ಲ, ಇಡೀ ಸಿನಿಮಾವನ್ನು ಕಾಮಿಡಿ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಸಿದ್ಧ ಸೂತ್ರದೊಂದಿಗೆ ಸಾಗದೇ, ಅದರಾಚೆ ಈ ಚಿತ್ರ ನಗೆಬುಗ್ಗೆ ಚಿಮ್ಮಿಸುತ್ತದೆ. ಚಿತ್ರದಲ್ಲಿ ಮುರುಗನಾಗಿ ಕಾಣಿಸಿಕೊಂಡಿರುವ ಮುನಿ ಕೃಷ್ಣ ಅವರ ಮ್ಯಾನರೀಸಂ ಇಷ್ಟವಾಗುತ್ತದೆ. ನಿರ್ದೇಶಕರ ಕಲ್ಪನೆಗೆ ಅವರು ಜೀವ ತುಂಬಿದ್ದಾರೆ. ಉಳಿದಂತೆ ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್, ಕುರಿ ಪ್ರತಾಪ್ ಸೇರಿದಂತೆ ಇತರರು ತಮ್ಮ ಪಾತ್ರ ಕ್ಕೆ ನ್ಯಾಯ ಒದಗಿಸಿದ್ದಾರೆ. ಒಂದು ಸರಳ ಸುಂದರ ಸಿನಿಮಾವಾಗಿ “ಕೊಡೆ ಮುರುಗ’ ನಿಮ್ಮನ್ನು ರಂಜಿಸುತ್ತಾನೆ
ಚಿತ್ರ: ಕೊಡೆಮುರುಗ
ರೇಟಿಂಗ್: ***
ನಿರ್ಮಾಣ: ಕೆ. ರವಿ ಕುಮಾರ್, ಅಶೋಕ್ ಶಿರಾಲಿ
ನಿರ್ದೇಶನ: ಸುಬ್ರಹ್ಮಣ್ಯ ಪ್ರಸಾದ್
ತಾರಾಗಣ: ಮುನಿಕೃಷ್ಣ, ಕುರಿ ಪ್ರತಾಪ್, ಸ್ವಾತಿ, ಅಶೋಕ್, ಸ್ವಯಂವರ ಚಂದ್ರು, ತುಮಕೂರು ಮೋಹನ್, ಮೋಹನ್ ಜುನೇಜಾ ಮತ್ತಿತರರು.