ಮಡಿಕೇರಿ: ಕೊಡವ ಬುಡಕಟ್ಟು ಕುಲದ ಹೆಗ್ಗುರುತಾಗಿರುವ ಬಂದೂಕು ಹಕ್ಕು ಸಂವಿಧಾನ ಬದ್ದವಾಗಿ ಕೊಡವ ಸಮುದಾಯಕ್ಕೆ ಆಬಾಧಿತವಾಗಿ ಮುಂದುವರಿಯಬೇಕೆಂದು ಕೊಡವ ನ್ಯಾಷನಲ್ ಸಂಘಟನೆಯ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಒತ್ತಾಯಿಸಿದ್ದಾರೆ. ನಾಪೋಕ್ಲು ಸಮೀಪದ ಕೊಳಕೇರಿಯಲ್ಲಿ ಸಿಎನ್‍ಸಿ ಸಂಘಟನೆಯ ವತಿಯಿಂದ ನಡೆದ 10ನೇ ವರ್ಷದ “ತೋಕ್ ನಮ್ಮೆ” (ಬಂದೂಕು ಹಬ್ಬ)ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಿಎನ್‍ಸಿ ಸಂಘಟನೆ ಸಂವಿಧಾನದ ಆಶಯಗಳಿಗೆ ಬದ್ದವಾಗಿ ಸ್ವತಂತ್ರವಾಗಿ ಕೊಡವರ ಹಕ್ಕುಗಳಿಗೆ ಹೋರಾಡುತ್ತಿರುವ ಒಂದು ಸಂಘಟನೆಯಾಗಿದ್ದು, ಇನ್ಯಾವುದೇ ಸಂಘಟನೆಯ ಅಂಗ ಸಂಸ್ಥೆಯಲ್ಲ ಎಂಬುದನ್ನು ಸಿಎನ್‍ಸಿ ಬೆಂಬಲಿಗರು ಮತ್ತು ಅಭಿಮಾನಿಗಳು ಮೊದಲು ಅರಿತುಕೊಳ್ಳಬೇಕು ಎಂದು ನಾಚಪ್ಪ ಹೇಳಿದರು. ಸಂವಿಧಾನ ಮೂಲಕವೇ ಕೊಡವರ ಹೆಗ್ಗುರುತುಗಳಿಗೆ ಮಾನ್ಯತೆ ದೊರೆಯಬೇಕಿದ್ದು, ಆ ದಿಸೆಯಲ್ಲಿ ಕಳೆದ 31 ವರ್ಷಗಳಿಂದ ಸಿಎನ್‍ಸಿ ನಿರಂತರ ಹೋರಾಟ ನಡೆಸುತ್ತಿದೆ. ಮಡಿಕೇರಿ ಕೋಟೆ, ನಾಲ್ಕುನಾಡು ಅರೆಮನೆಗಳಲ್ಲಿ ಕೆಳದಿಯ ಅರಸರ ಕೃಪಾಕಟಾಕ್ಷದಲ್ಲಿ ಟಿಪ್ಪು ಮತ್ತಿತ್ತರರು 210 ವರ್ಷಕ್ಕೂ ಹೆಚ್ಚು ಕಾಲ ದೌರ್ಜನ್ಯ ನಡೆಸಿದ್ದು, ಇದನ್ನು ಯಾವ ಕೊಡವರು ಮರೆಯಲು ಸಾಧ್ಯವಿಲ್ಲ. ಅಲ್ಲಿ ಅಂಟಿರುವ ಕೊಡವರ ರಕ್ತದ ಕಲೆಗಳಿಗೆ ಸಂವಿಧಾನಿಕವಾಗಿ ನ್ಯಾಯ ದೊರೆಯಲೇ ಬೇಕಿದೆ ಎಂದು ನಾಚಪ್ಪ ಪ್ರತಿಪಾದಿಸಿದರು. ಟಿಪ್ಪುವನ್ನು ಕೊಡವರು 37 ಬಾರಿ ಯುದ್ದದಲ್ಲಿ ಸೋಲಿಸಿದ್ದಾರೆ. ಇದಕ್ಕೆ ದ್ವೇಷದ ಮೂಲಕ ಪ್ರತಿಕಾರ ತೀರಿಸಿಕೊಳ್ಳಲು ದೇವಾಟ್ ಪರಂಬು ನರಮೇಧ ನಡೆಸಲಾಯಿತು. ಸಿಎನ್‍ಸಿ ಸಂಘಟನೆ ದೇವಾಟ್ ಪರಂಬು ಸ್ಮಾರಕಕ್ಕೆ 76 ಬಾರಿ ತೆರಳಿ ಪುಷ್ಪ ನಮನದ ಮೂಲಕ ಬಾಷ್ಪಾಂಜಲಿ ಸಲ್ಲಿಸಿದೆ. ಈ ನರಮೇಧಕ್ಕೆ ಜಾಗತಿಕ ಮಟ್ಟದಲ್ಲಿ ನ್ಯಾಯ ಸಿಗಲೇಬೇಕು ಎಂಬುದು ಸಿಎನ್‍ಸಿಯ ಒತ್ತಾಸೆಯಾಗಿದೆ ಎಂದು ನಾಚಪ್ಪ ಹೇಳಿದರು.
ಸಂವಿಧಾನ ಒಂದು ಸಮುದ್ರವಿದ್ದಂತೆ ಎಂದು ಹೇಳಿದ ನಾಚಪ್ಪ, ಸಂವಿಧಾನದ ಆರ್ಟಿಕಲ್ 14, 19 ಮತ್ತು 21ರ ಅಡಿಯಲ್ಲಿ ಕೊಡವರ ಹಕ್ಕುಗಳಿಗಾಗಿ ಹೋರಾಟ ಮಾಡಲಾಗುತ್ತಿದೆ. ಕೊಡವ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ, ಕೊಡವ ಸಮುದಾಯಕ್ಕೆ ಸಂವಿಧಾನದ ಭದ್ರತೆ, ಕೋವಿ ಹಕ್ಕು, ಕೊಡವ ಭಾಷೆ, ಸಂಸ್ಕøತಿ, ಕಲೆ, ಆಚಾರ ವಿಚಾರ ಮತ್ತು ಪರಂಪರೆಗಳಿಗೆ ಸಂವಿಧಾನಿಕ ಮಾನ್ಯತೆ ಸಿಗಲೇಬೇಕಿದೆ ಎಂದು ನಾಚಪ್ಪ ಹೇಳಿದರು.
ಅನಾದಿ ಕಾಲದಲ್ಲಿ ಬಿಲ್ಲು, ಭರ್ಜಿಯ ಮೂಲಕ ಬೇಟೆ ಮತ್ತು ಯುದ್ದವನ್ನೇ ಕೊಡವರು ತಮ್ಮ ಜೀವನ ಮಾಡಿಕೊಂಡಿದ್ದರು ಎಂಬುದನ್ನು ಇತಿಹಾಸ ತಿಳಿಸುತ್ತದೆ. ಇಂತಹ ಕ್ಷಾತ್ರ ಕುಲಕ್ಕೆ ಕಾಲಾಂತರದಲ್ಲಿ ಬಂದ ಬಂದೂಕು ಕೂಡ ಬದುಕಿನ ಅವಿಭಾಜ್ಯ ಅಂಗವಾಗಿ, ಸಮುದಾಯದ ಹೆಗ್ಗುರುತಾಗಿ ರೂಪುಗೊಂಡಿದೆ. ಇಂತಹ ಸಮುದಾಯದ ರಕ್ಷಣೆ ಸಂವಿಧಾನ ಮತ್ತು ಕೇಂದ್ರ ಸರಕಾರದ ಹೊಣೆಯಾಗಿದೆ. ಈ ವಿಚಾರವನ್ನೇ ಸಿಎನ್‍ಸಿ ಸಂಘಟನೆ ಸರಕಾರದ ಮುಂದಿಟ್ಟುಕೊಂಡು ಬರುತ್ತಿದೆ ಎಂದು ಹೇಳಿದರು. ದೇವಾಟ್ ಪರಂಬು ನರಮೇಧ ವಿಚಾರ ಬಂದಾಗಲೆಲ್ಲ ಕೊಡವ ಸಮುದಾಯದ ಜನಸಂಖ್ಯೆಯ ಬಗ್ಗೆ ಆಕ್ಷೇಪದ ಮಾತುಗಳು ಕೇಳಿ ಬಂದಿದ್ದು, ಇಂದಿಗೂ ಇದು ಚಾಲ್ತಿಯಲ್ಲಿದೆ. ಈ ಬಗ್ಗೆ ಕೊಡವರು ದೃತಿಗೆಡುವ ಅಗತ್ಯವಿಲ್ಲ ಎಂದು ನಾಚಪ್ಪ ಹೇಳಿದರು. ಅತ್ಯಂತ ಚಿಕ್ಕ, ವಿಶಿಷ್ಟ ಸಂಸ್ಕೃತಿ ಮತ್ತು ಬುಡಕಟ್ಟು ಕುಲದ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಕೊಡವ ಸಮುದಾಯ ಸಂವಿಧಾನ ಬದ್ದ ಹಕ್ಕುಗಳನ್ನು ಪಡೆಯಲು ಎಲ್ಲಾ ಅರ್ಹತೆಗಳನ್ನು ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ತೋಕ್ ನಮ್ಮೆಯ ಅಂಗವಾಗಿ ನೂರಾರು ಬಂದೂಕುಗಳಿಗೆ ನಾಚಪ್ಪ ಮತ್ತು ಸಿಎನ್ ಸಿ ಸಂಘಟನೆಯ ಮಹಿಳಾ ಪ್ರತಿನಿಧಿಗಳು ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ಬಳಿಕ ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸುವ ಮೂಲಕ ತೋಕ್ ನಮ್ಮೆಯ ಸಂದೇಶ ಸಾರಿದರು. ಕೊಡವ ಕೊಡವತಿಯರು ‘ದುಡಿಕೊಟ್ಟ್ ಪಾಟ್’ ಸಹಿತ ಸಾಂಕೇತಿಕವಾಗಿ ಬಂದೂಕು ಸಹಿತ ಮೆರವಣಿಗೆ ತೆರಳಿ ತೋಕ್ ನಮ್ಮೆ ಆಚರಿಸಿದರು.
ಇದೇ ಸಂದರ್ಭ ಸಿಎನ್‍ಸಿ ಮತ್ತು ಕೊಡವ ಸಮುದಾಯಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ ಕೊಡಗು ಜಿಲ್ಲಾ ಜನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತ ಶಯನ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಸಾಹಿತಿ ಚಕ್ಕೇರ ತ್ಯಾಗರಾಜ್ ಅಪ್ಪಯ್ಯ, ಹಂಚೆಟ್ಟೀರ ಮುದ್ದಯ್ಯ, ಕಲಿಯಂಡ ಮೀನಾಕ್ಷಿ, ಪುಲ್ಲೇರ ಸ್ವಾತಿ ಕಾಳಪ್ಪ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಬಾಚಮಂಡ ಕಸ್ತೂರಿ ಪೂವಪ್ಪ, ಬೇಪಡಿಯಂಡ ಬಿದ್ದಪ್ಪ, ಮದ್ರೀರ ಕರುಂಬಯ್ಯ, ಅಪ್ಪಚ್ಚೀರ ರೆಮ್ಮಿ ನಾಣಯ್ಯ, ಕಲಾವಿದ ಬಿ.ಆರ್ ಸತೀಶ್, ಬೊಟ್ಟಂಗಡ ಗಿರೀಶ್, ಪೊದುಮಾಡ ದಿನಮಣಿ, ಅಳಮಂಡ ಜೈ ಅವರುಗಳಿಗೆ ನಂದಿನೆರವಂಡ ನಾಚಪ್ಪ ಅವರು ಕೊಡವ ವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.
ಬಳಿಕ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ನೆರೆದಿದ್ದ ಕೊಡವ ಕೊಡವತಿಯರು ತಮ್ಮ ಗುರಿ ಪ್ರದರ್ಶಿಸಿದರು. ಸಾಹಿತಿ ಚಕ್ಕೇರ ತ್ಯಾಗರಾಜ್ ಅಪ್ಪಯ್ಯ ಅವರು ನಂಗ ಕೊಡವಂಗ ಕೊಡಗ್‍ರ ಒಡೆಯಂಗ ಎಂಬ ಹಾಡು ಹಾಡುವ ಮೂಲಕ ತೋಕ್ ನಮ್ಮಗೆ ಮೆರುಗು ತುಂಬಿದರು.
ಕೋವಿ ಹಬ್ಬದಲ್ಲಿ 12 ಮಹತ್ವದ ನಿರ್ಣಯಗಳನ್ನು ನಂದಿನೆರವಂಡ ನಾಚಪ್ಪ ಮಂಡಿಸಿದರು. ಕೊಡವ ಬುಡಕಟ್ಟು ಕುಲದ ಆಯುಧಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಇದರ ಹಕ್ಕು ಮತ್ತು ರಕ್ಷಣೆ ಅಭಾದಿತವಾಗಿ ಮುಂದುವರೆಯಲು ರಾಜ್ಯಾಂಗ ಖಾತ್ರಿ ನೀಡುವುದು. ಕೊಡವರನ್ನು ಎಸ್.ಟಿ. ಪಟ್ಟಿಗೆ ಸೇರಿಸಬೇಕು.
ಕೊಡವ ಬುಡಕಟ್ಟು ಕುಲವನ್ನು ಎಸ್.ಟಿ. ಪಟ್ಟಿಗೆ ಸೇರಿಸಿ ರಕ್ಷಿಸಬೇಕಿರುವ ತುರ್ತು ಅವಶ್ಯಕತೆ ಮನಮುಟ್ಟುವಂತೆ ರಾಜ್ಯಸಭೆಯಲ್ಲಿ ವಿಷಯ ಮಂಡನೆ ಮಾಡಿ ರಾಷ್ಟ್ರದ ಮತ್ತು ಸರ್ಕಾರದ ಗಮನ ಸೆಳೆಯುವಲ್ಲಿ ಸಫಲರಾದ ರಾಜ್ಯಸಭೆಯ ಹಿರಿಯ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಮತ್ತು ರಾಜ್ಯಸಭೆಯ ಸದಸ್ಯರಾದ ಕುಪೇಂದ್ರ ರೆಡ್ಡಿಯವರಿಗೆ ಕೊಡವ ಗನ್ ಕಾರ್ನಿವಲ್ ವಿಶೇಷವಾದ ಗೌರವ ಮತ್ತು ಅಭಿನಂದನೆ ಸೂಚಿಸುವ ನಿರ್ಣಯ ಅಂಗೀಕರಿಸಲಾಯಿತು.
ಕೊಡವ ಬುಡಕಟ್ಟಿನ ಜೀವನ ಸಂಸ್ಕಾರವಾದ ಕೋವಿ ಅವರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಕೊಡವರಿಗೆ ಶಾಶ್ವತ ಬಂದೂಕು ವಿನಾಯಿತಿ ನೀಡಬೇಕು. ಕೊಡವ ಬುಡಕಟ್ಟು ಕುಲವನ್ನು ತುರ್ತಾಗಿ ಸಂವಿಧಾನದ 340-342ನೇ ವಿಧಿಯಂತೆ ಎಸ್.ಟಿ. ಪಟ್ಟಿಗೆ ಸೇರಿಸಿ ಅಳಿವಿನಂಚಿನಲ್ಲಿರುವ ಅಪರೂಪದ ಕೊಡವ ಕುಲವನ್ನು ರಕ್ಷಿಸಿ, ಪೋಷಿಸಿ, ಸಬಲೀಕರಣಗೊಳಿಸಬೇಕು ಸೇರಿದಂತೆ ಇನ್ನಿತರ ಮಹತ್ವದ ನಿರ್ಣಯಗಳನ್ನು ಮಂಡಿಸಲಾಯಿತು. ನೆರೆದಿದ್ದ ಕೊಡವ ಸಮುದಾಯ ಈ ನಿರ್ಣಯಗಳಿಗೆ ಅಂಗೀಕಾರ ನೀಡಿತು.
ತೋಕ್ ನಮ್ಮೆಯಲ್ಲಿ ಪುಲ್ಲೇರ ಕಾಳಪ್ಪ, ಚಂಬಂಡ ಜನತ್, ಮಂದಪಂಡ ಮನೋಜ್, ಅಪ್ಪಚ್ಚಿರ ರೀನಾ, ಬಡುವಂಡ ಅರುಣ, ಅಪ್ಪಾರಂಡ ಪ್ರಸಾದ್, ಅಪ್ಪಾರಂಡ ಶ್ರೀನಿವಾಸ್, ಅರೆಯಡ ಗಿರೀಶ್, ಮಾಳೆಯಂಡ ವಿಜು, ನಂದಿನೆರವಂಡ ವಿಜು, ಬಾಚಮಂಡ ರಾಜಾ ಪೂವಣ್ಣ, ಬೇಪಡಿಯಂಡ ದಿನು, ಕಾಟುಮಣಿಯಂಡ ಉಮೇಶ್, ಕೊಂಗೆಟ್ಟಿರ ಲೋಕೇಶ್, ಕಿರಿಯಮಾಡ ಶರೀನ್, ಪುಳ್ಳಂಗಡ ನಟೇಶ್, ಅಪ್ಪಚಿರ ಬೋಪಣ್ಣ, ಅರೆಯಡ ಸವಿತ ಸೇರಿದಂತೆ ಮತ್ತಿತ್ತರು ಹಾಜರಿದ್ದರು.