ಗಂಗೊಳ್ಳಿ: ಮೃತ ವ್ಯಕ್ತಿಯ ಹೆಸರಿನಲ್ಲಿ ನಕಲಿ ಸಹಿ ಮಾಡಿ ಜನರಲ್ ಪವರ್ ಆಫ್ ಅಟಾರ್ನಿ ತಯಾರಿಸಿ ವಂಚಿಸಿರುವ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರೇಮಾ ಎಂಬವರು ದೂರು ದಾಖಲಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
ಗುಜ್ಜಾಡಿ ಗ್ರಾಮದ ಕೊಡಪಾಡಿ ಎಂಬಲ್ಲಿ ಬಾಬು ಅವರಿಗೆ ಸೇರಿದ್ದ ಸರ್ವೆ ನಂಬರ್ 62/3ರಲ್ಲಿ 93 ಸೆಂಟ್ಸು, 62/15ರಲ್ಲಿ 15 ಸೆಂಟ್ಸು, 62/12ಬಿರಲ್ಲಿ 16 ಸೆಂಟ್ಸು, 62/4ರಲ್ಲಿ 68 ಸೆಂಟ್ಸು ಜಾಗ ಕರ್ನಾಟಕ ಭೂ ಮಸೂದೆ ಕಾಯ್ದೆಯಂತೆ ಕುಂದಾಪುರ ಭೂ ನ್ಯಾಯ ಮಂಡಳಿಯ ಅಧಿಬೋಗದಾರಿಕೆಯಲ್ಲಿ ತೀರ್ಪು ಆಗಿರುತ್ತದೆ.
ಪಿರ್ಯಾದಿದಾರರಾದ ಪ್ರೇಮಾ ಅವರ ತಂದೆ ಸುಮಾರು 10 ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. 2ನೇ ಆರೋಪಿ ರಾಜು ಪಿರ್ಯಾದಿದಾರರ ತಂದೆಯ ಆಸ್ತಿಯನ್ನು 1ನೇ ಆರೋಪಿತರಾದ ತುಂಗಾ ಅವರ ಹೆಸರಿಗೆ ಮಾಡಿಕೊಡುವಂತೆ ಒತ್ತಡ ಹೇರುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪಿರ್ಯಾದಿದಾರ ಪ್ರೇಮಾ ಅವರ ತಂದೆ ಬಾಬು ಅವರು ಮಾತನಾಡುವ ಹಾಗೂ ಸಹಿ ಹಾಕುವ ಸ್ಥಿತಿಯಲ್ಲಿ ಇಲ್ಲದಿದ್ದರೂ, ಆರೋಪಿತರು ಪಿರ್ಯಾದಿದಾರರ ತಂದೆಯ ಆಸ್ತಿಯನ್ನು ಲಪಟಾಯಿಸುವ ಉದ್ದೇಶದಿಂದ ಬಾಬು ಅವರ ಹೆಸರಿನಲ್ಲಿ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆಯಲು ಮನವಿ ಪತ್ರ ತಯಾರಿಸಿ ಅದರಲ್ಲಿ ಪಿರ್ಯಾದಿದಾರರ ಪೋರ್ಜರಿ ಸಹಿ ಮಾಡಿ ಅದನ್ನು ತಹಶೀಲ್ದಾರರಿಗೆ ನೀಡಿ 3 ನಿರಾಕ್ಷೇಪಣಾ ಪತ್ರ ಪಡೆದುಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
18/07/2023ರಂದು ಅನಾರೋಗ್ಯದಲ್ಲಿದ್ದ ಬಾಬು ಅವರು ಮೃತಪಟ್ಟಿದ್ದರು. ಬಳಿಕ 02/11/2023ರಂದು ಮೃತ ಬಾಬು ಅವರ ಹೆಸರಿನಲ್ಲಿ 200 ರೂಪಾಯಿ ಮುಖಬೆಲೆಯ ಸ್ಟ್ಯಾಂಪ್ ಪೇಪರ್ ನಲ್ಲಿ ಬಾಬು ಅವರ ನಕಲಿ ಸಹಿ ಮಾಡಿ ಪವರ್ ಆಫ್ ಅಟಾರ್ನಿ ತಯಾರಿಸಿದ್ದರು. ಅದಲ್ಲದೇ ಜನರಲ್ ಪವರ್ ಆಫ್ ಅಟಾರ್ನಿಯ ಮೂಲಕ ವ್ಯವಸ್ಥಾಪನಾ ಪತ್ರ ತಯಾರಿಸಿ ಉಪನೋಂದಣಾಧಿಕಾರಿ ಮುಂದೆ ಹಾಜರುಪಡಿಸಿ ನೊಂದಾವಣೆ ಮಾಡಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದು, ಅದರನ್ವಯ ಆರೋಪಿತರ ವಿರುದ್ಧ ಐಪಿಸಿ ಕಲಂ 420, 465, 468, 471ರಂತೆ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.