Advertisement
ಶಾಲಾ ಕಾಲೇಜುಗಳಿಗೆ 2 ದಿನ ರಜೆರಸ್ತೆ ಸಂಪರ್ಕ ಕಡಿತ ಮತ್ತು ಕೆಲವು ಶಾಲೆಗಳಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳನ್ನು ತೆರೆದಿರುವುದರಿಂದ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಆ.13 ಮತ್ತು 14ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.
ಮಡಿಕೇರಿ-ವೀರಾಜಪೇಟೆ ರಾಜ್ಯ ಹೆದ್ದಾರಿಯ ಬೇತ್ರಿ ಸೇತುವೆಗೆ ಪ್ರವಾಹದ ಸಂದರ್ಭ ಮರ ಬಡಿದ ಪರಿಣಾಮ ಸಣ್ಣ ಪ್ರಮಾಣದ ಬಿರುಕು ಕಾಣಿಸಿಕೊಂಡಿರುವುದಾಗಿ ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಲಘು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬಸ್ ಸೇರಿದಂತೆ ಇತರ ವಾಹನಗಳು ಮಡಿಕೇರಿ-ಹಾಕತ್ತೂರು-ಮೂರ್ನಾಡು-ಕೊಂಡಂಗೇರಿ-ಹಾಲುಗುಂದ ಮಾರ್ಗವಾಗಿ ವೀರಾಜಪೇಟೆಗೆ ಸಂಚರಿಸಬಹುದಾಗಿದೆ. ತೋರಾದಲ್ಲಿ ಶವ ಪತ್ತೆ
ವೀರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಆ. 9ರಂದು ಮಣಿಪಾರೆ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಪ್ರಾಣ ಕಳೆದುಕೊಂಡ ಎಂಟು ಮಂದಿಯಲ್ಲಿ ಒರ್ವ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ಪ್ರಭು ಎಂಬವರ ಪತ್ನಿ ಅನುಸೂಯ (45) ಅವರ ಮೃತದೇಹವನ್ನು ಮಣ್ಣಿನಡಿಯಿಂದ ಹೊರ ತೆಗೆಯಲಾಗಿದೆ.
Related Articles
Advertisement
ಸೋಮವಾರ ಬೆಳಗಿನಿಂದಲೇ 4 ಹಿಟಾಚಿ ಯಂತ್ರಗಳನ್ನು ಬಳಸಿಕೊಂಡು ನಾಪತ್ತೆಯಾದವರಿಗಾಗಿ ಸ್ಥಳದಲ್ಲಿ ಹುಡುಕಾಟ ನಡೆಸಲಾಯಿತು.ಮಧ್ಯಾಹ್ನದ ವೇಳೆಗೆ ಅನುಸೂಯ ಅವರ ಮೃತದೇಹ ಪತ್ತೆಯಾಗಿದ್ದು, ವೀರಾಜಪೇಟೆ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿ, ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಮನೆಯೊಳಗೆ ಶವ ಮಡಿಕೇರಿ ಸಮೀಪ ಕಟ್ಟೆಮಾಡು ಗ್ರಾಮದ ಪರಂಬು ಪೈಸಾರಿಯಲ್ಲಿ ಮನೆಯೊಂದರಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಪ್ರವಾಹದ ಸಂದರ್ಭ ಈ ಮನೆ ಮುಳುಗಡೆಯಾಗಿದ್ದು, ಇದೀಗ ನೀರಿನ ಹರಿವು ಕಡಿಮೆಯಾಗಿರುವುದರಿಂದ ಮನೆ ಯೊಳಗೆ ಮೃತ ದೇಹವಿರುವುದು ಕಂಡು ಬಂದಿದೆ. ಮೃತರನ್ನು ಕುಜ್ಞಣ್ಣ ಎಂದು ಗುರುತಿಸಲಾಗಿದೆ. ಸಂತ್ರಸ್ತರಿಗೆ ಅಗತ್ಯ ನೆರವು
ಪರಿಹಾರ ಸಾಮಗ್ರಿಗಳನ್ನು ತಲುಪಿಸುವುದರೊಂದಿಗೆ ನಾವು ಕೂಡ ಸಂತ್ರಸ್ತರ ಜತೆಯಲ್ಲಿದ್ದೇವೆ ಎಂಬ ಭರವಸೆ ಮೂಡಿಸಲಾಗುತ್ತಿದೆ. ಕೇಂದ್ರದಿಂದಲೂ ಹೆಚ್ಚು ಪರಿಹಾರ ನೀಡುವಂತೆ ಕೋರಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ನಾವು ಆಗಮಿಸಿದ್ದೇವೆ. ಜಿಲ್ಲೆಗೆ ಅಗತ್ಯ ಪರಿಹಾರ ಕಲ್ಪಿಸಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೊಡಗಿನ ನಷ್ಟದ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು. ರಾಜ್ಯ ಸರಕಾರದ ಜತೆಗೆ ಕೇಂದ್ರದಿಂದಲೂ ಹೆಚ್ಚು ಪರಿಹಾರ ದೊರೆಯುವ ವಿಶ್ವಾಸವಿದೆ. ಕೇಂದ್ರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.