Advertisement

ಕೊಡಗಿನಲ್ಲಿ ಮುಂದುವರಿದ ಮಹಾಮಳೆ; ಸಚಿವರಿಂದ ಪರಿಶೀಲನೆ

08:44 AM Aug 09, 2022 | Team Udayavani |

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮಹಾಮಳೆ ಮುಂದುವರಿದಿದೆ. ಹಲವೆಡೆ ಮನೆಗಳು ಬಿದ್ದಿವೆ, ಸಂಪರ್ಕ ರಸ್ತೆಗಳು ಪ್ರವಾಹದಿಂದ ಆವರಿಸಲ್ಪಟ್ಟಿವೆ. ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಗಳ ಪ್ರವಾಹದಿಂದ ನದಿ ಪಾತ್ರದ ನಿವಾಸಿಗಳ ಬದುಕು ಅಸ್ತವ್ಯಸ್ತಗೊಂಡಿದೆ.

Advertisement

ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಕಳೆದ ಒಂದು ದಿನದ ಅವಧಿಯಲ್ಲಿ 7 ಇಂಚಿಗೂ ಹೆಚ್ಚಿನ ಮಳೆೆಯಾಗಿದ್ದು, ಕ್ಷೇತ್ರ ವ್ಯಾಪ್ತಿಯ ಎಲ್ಲ ಕಿರು ತೊರೆಗಳು ಉಕ್ಕಿ ಹರಿದು ಕಾವೇರಿಯನ್ನು ಸೇರುತ್ತಿರುವುದರಿಂದ ಪ್ರವಾಹದ ಮಟ್ಟ ಗಣನೀಯ ಪ್ರಮಾಣದಲ್ಲಿ ಹೆಚ್ಚಿ ಆತಂಕವನ್ನು ಹುಟ್ಟು ಹಾಕಿದೆ.

ನದಿ ಪಾತ್ರದ ನಾಪೋಕ್ಲು, ಮೂರ್ನಾಡು, ಸಿದ್ದಾಪುರದಲ್ಲೂ ಉತ್ತಮ ಮಳೆೆಯಾಗುತ್ತಿದ್ದು, ಸಿದ್ದಾಪುರ ಬಳಿಯ ನೆಲ್ಲಿಹುದಿಕೇರಿ, ಕರಡಿಗೋಡು ವಿಭಾಗಗಳಲ್ಲಿ ಸಂಪರ್ಕ ರಸ್ತೆಗಳು ಮುಳುಗಡೆಯಾಗಿದೆ. ಕಾವೇರಿಯ ಪ್ರವಾಹದಿಂದ ಮಡಿಕೇರಿ-ಮೂರ್ನಾಡು ನಡುವಿನ ಬೇತ್ರಿಯ ಸೇತುವೆಯಲ್ಲಿ ಪ್ರವಾಹದ ಮಟ್ಟ ಏರಿಕೆಯಾಗುತ್ತಿದ್ದು, ಮಳೆಯ ತೀವ್ರತೆ ಮುಂದುವರಿದಲ್ಲಿ ಸಂಪರ್ಕ ಕಡಿತವಾಗುವ ಆತಂಕ ಎದುರಾಗಿದೆ.

35 ಕುಟುಂಬಗಳ ಸ್ಥಳಾಂತರ
ಭಾರೀ ಜಲಸ್ಫೋಟವಾಗಿದ್ದ ಎರಡನೇ ಮೊಣ್ಣಂಗೇರಿ ಗ್ರಾಮ ವ್ಯಾಪ್ತಿಯಲ್ಲಿ ನೆಲೆಸಿರುವ 35 ಕುಟುಂಬಗಳನ್ನು ಮುಂಜಾಗ್ರತ ಕ್ರಮವಾಗಿ ಮಡಿಕೆೇರಿ ರೆಡ್‌ ಕ್ರಾಸ್‌ ಭವನದ ಕಾಳಜಿ ಕೇಂದ್ರಕ್ಕೆ ದಾಖಲಿಸಲಾಗಿದೆ.

ವಿವಿಧೆಡೆ ಮನೆಗಳಿಗೆ ಹಾನಿ
ಭಾರೀ ಗಾಳಿ ಮಳೆಯಿಂದ ಜಿಲ್ಲೆಯ ಹಲವೆಡೆಗಳಲ್ಲಿ ಮನೆಗಳ ಗೋಡೆಗಳು ಕುಸಿದು ಹಾನಿಯುಂಟಾಗಿರುವ ಘಟನೆಗಳು ವರದಿಯಾಗಿದ್ದು, ಹೆಬ್ಟಾಲೆಯ ಬಸಮ್ಮ ಎಂಬವರ ಮನೆಯ ಪಾರ್ಶ್ವ ಕುಸಿದಿದ್ದರೆ, ಅದೇ ಗ್ರಾಮದ ಪುಟ್ಟರಾಜ ಎಂಬವರ ಮನೆಗೂ ಹಾನಿಯಾಗಿದೆ.

Advertisement

“ಕೊಡಗನ್ನು ಅವಗಣಿಸುವ ಪ್ರಶ್ನೆಯೇ ಇಲ್ಲ’
ಮಡಿಕೇರಿ, ಆ. 8: ಕೊಡಗು ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ಪ್ರವಾಹ ಪೀಡಿತ ಪ್ರದೇಶ, ಮನೆ ಹಾನಿ ಮತ್ತು ನಗರದ ಕಾಳಜಿ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಸೋಮವಾರಪೇಟೆ ತಾಲೂಕಿನ ಬೆಸೂರು, ನಿರುಗುಂದ ಹಾಗೂ ಕೆಳಕೊಡ್ಲಿ ಗ್ರಾಮದಲ್ಲಿ ನಿರಂತರ ಮಳೆಯಿಂದಾಗಿ ಹಾನಿಯಾಗಿರುವ ಮನೆಗಳನ್ನು ವೀಕ್ಷಿಸಿ ಸ್ಥಳದಲ್ಲಿಯೇ ಪರಿಹಾರದ ಚೆಕ್‌ ವಿತರಿಸಿದರು.

ಅನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು ಮಳೆಹಾನಿ ಪರಿಹಾರದ ವಿಚಾರದಲ್ಲಿ ಕೊಡಗನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದರು.

ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಜಿಲ್ಲಾಧಿಕಾರಿ ಅವರ ಖಾತೆಯಲ್ಲಿ 35 ಕೋಟಿ ರೂ. ಹಣವಿದೆ. ಮುಂದಿನ ದಿನಗಳಲ್ಲಿ ಅನುದಾನದ ಅವಶ್ಯಕತೆ ಇದ್ದಲ್ಲಿ ಕೂಡಲೇ ಜಿಲ್ಲಾಡಳಿತಕ್ಕೆ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲೆಯ 2ನೇ ಮೊಣ್ಣಂಗೇರಿ, ಚೆಂಬು, ಪೆರಾಜೆ ಭಾಗದಲ್ಲಿ ಆಗಾಗ ಸಂಭವಿಸುತ್ತಿರುವ ಭೂಕಂಪನ ಹಾಗೂ ಭೂ ಕುಸಿತಗಳಿಗೆ ಸೂಕ್ತ ಕಾರಣ ತಿಳಿಯಲು ಕೇಂದ್ರ ತಜ್ಞರ ತಂಡವು ಜಿಲ್ಲೆಗೆ ಆಗಮಿಸಲಿದೆ. ಮಳೆ ನಿಂತ ಕೂಡಲೇ ತಜ್ಞರು ಪರಿಶೀಲಿಸಿ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

5 ಕಾಳಜಿ ಕೇಂದ್ರಗಳು
ಜಿಲ್ಲಾಧಿಕಾರಿ ಡಾ| ಬಿ.ಸಿ.ಸತೀಶ ಅವರು ಮಾತನಾಡಿ ಜಿಲ್ಲೆಯಲ್ಲಿ 5 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಹಲವು ಮಂದಿ ಸಂತ್ರಸ್ತರು ಇದ್ದಾರೆ. ನಗರದ ರೆಡ್‌ಕ್ರಾಸ್‌ ಭವನದಲ್ಲಿ ಇರುವ ಕಾಳಜಿ ಕೇಂದ್ರಕ್ಕೆ ಸಚಿವರು ಭೇಟಿ ನೀಡಿ ಸಂತ್ರಸ್ತರ ಯೋಗ ಕ್ಷೇಮ ವಿಚಾರಿಸಿದರು. ಕಾಳಜಿ ಕೇಂದ್ರದಲ್ಲಿರುವ ಮಕ್ಕಳ ಜತೆ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡರು, ಸಂತ್ರಸ್ತ ಮಕ್ಕಳು ಸಚಿವರ ಜತೆ ಕೇಕ್‌ ಕತ್ತರಿಸಿ ಸಂಭ್ರಮಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next