ಹುಣಸೂರು: ಕೊಡಗಿನ ಎಸ್ಟೇಟ್‌ನಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದಾತ, ಸಹ ಕಾರ್ಮಿಕನಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಾಗರಹೊಳೆ ಉದ್ಯಾನದಂಚಿನ ಕೊಡಗಿನ ವಿರಾಜಪೇಟೆ ತಾಲೂಕಿನ ಕೊಳತ್ತೂರು ಪಲಿಯಂಡ ರಾಜೇಶ್‌ರ ಎಸ್ಟೇಟ್‌ನಲ್ಲಿ ಘಟನೆ ನಡೆದಿದ್ದು.ತಾಲೂಕಿನ ಬಿಲ್ಲೇನಹೊಸಹಳ್ಳಿ ಗ್ರಾಮದ ಶಂಕರಶೆಟ್ಟಿ ಪುತ್ರ ಶಿವು ಅಲಿಯಾಸ್ ಜಲೇಂದ್ರ(24) ಮೃತಪಟ್ಟಾತ.
ಘಟನೆ ವಿವರ: ಶಿವು ಅವಿವಾಹಿತನಾಗಿದ್ದು ಕೂಲಿ ಕೆಲಸಕ್ಕಾಗಿ ವಿರಾಜಪೇಟೆ ತಾಲೂಕಿನ ಕೊಳತ್ತೂರಿನ ಪಲಿಯಂಡ ರಾಜೇಶ್‌ರ ಎಸ್ಟೇಟ್‌ನಲ್ಲಿ ಕೆಲಸಕ್ಕೆ ತೆರಳಿದ್ದ, ಈ ವೇಳೆ ಪಿರಿಯಾಪಟ್ಟಣ ತಾಲೂಕಿನ ಉತ್ತೇನಹಳ್ಳಿ ಹಾಡಿಯ ಬಸಪ್ಪ ಸಹ ಇದೇ ಎಸ್ಟೇಟ್‌ನಲ್ಲಿ ಕೆಲಸಕ್ಕೆ ಸೇರಿದ್ದು. ಎಸ್ಟೇಟ್‌ನ ಲೈನ್ ಮನೆಯಲ್ಲಿ ವಾಸವಿದ್ದರು.
ಜೂ.14 ರಂದು ಕ್ಲುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ನಡೆದ ವೇಳೆ ಬಸಪ್ಪ ಕತ್ತಿಯಿಂದ ಶಿವು ಮೇಲೆ ಹಲ್ಲೆ ನಡೆಸಿದ್ದ, ಕುತ್ತಿಗೆ ಭಾಗದಲ್ಲಿ ತೀವ್ರಗಾಯಗೊಂಡು ಪ್ರಜ್ಞಾಹೀನನಾಗಿದ್ದ ಶಿವುನನ್ನು ಎಸ್ಟೇಟ್ ಮಾಲಿಕ ರಾಜೇಶರೆ ಚಿಕಿತ್ಸೆಗಾಗಿ ಗೋಣಿಕೊಪ್ಪ, ವಿರಾಜಪೇಟೆ, ಮಡಿಕೇರಿ ಆಸ್ಪತ್ರೆಗೆ ದಾಖಲಿಸಿದ್ದರು,
ನಂತರ ಹೆಚ್ಚಿನ ಚಿಕಿತ್ಸೆ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಿ ಕೊಡಿಸಿದ್ದರು. ಶಿವುನನ್ನು ಬುಧವಾರದಂದು ಬಿಲ್ಲೇನಹೊಸಹಳ್ಳಿಗೆ ಕರೆತರಲಾಗಿತ್ತು. ಕೋಮಾ ಸ್ಥಿತಿಗೆ ತಲುಪಿ ಅಸ್ಪಸ್ಥಗೊಂಡಿದ್ದ ಶಿವುನನ್ನು ಗುರುವಾರದಂದು ನೇರಳಕುಪ್ಪೆ ಗ್ರಾ.ಪಂ.ಅಧ್ಯಕ್ಷ ಉದಯ್, ತಾ.ಪಂ.ಮಾಜಿ ಸದಸ್ಯ ಗಣಪತಿ ಹಾಗೂ ಗ್ರಾಮಸ್ಥರು ಹನಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹುಣಸೂರು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆಯಲ್ಲಿ ಮೃತಪಟ್ಟಿದ್ದಾನೆ. ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ತೆಕ್ಕಟ್ಟೆ: ಬಾವಿಗೆ ಬಿದ್ದ ಪುನುಗಿನ ಬೆಕ್ಕು; ರಕ್ಷಿಸಿದ ಸ್ಥಳೀಯರು
ಶವಪರೀಕ್ಷೆಗೆ ನಿರಾಕರಿಸಿದ ವೈದ್ಯರು
ಮಧ್ಯಾಹ್ನ ಮೃತಪಟ್ಟ ಶಿವು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹುಣಸೂರು ಆಸ್ಪತ್ರೆಯ ಶವಾಗಾರಕ್ಕೆ ತಂದರೂ ಶವಾಗಾರದಲ್ಲಿ ಶವ ಇಡಲು ಅವಕಾಶವನ್ನೇ ನೀಡಲಿಲ್ಲ. ಮೈಸೂರಿನಲ್ಲಿ ಶವಪರೀಕ್ಷೆ ನಡೆಸಿರೆಂದು ಹುಣಸೂರು ಸಾರ್ವಜನಿಕ ಆಸ್ಪತ್ರೆ ವೈದ್ಯರು ನಿರಾಕರಿಸಿದ್ದು, ರಾತ್ರಿಯಾದರೂ ಮರಣೋತ್ತರ ಪರೀಕ್ಷೆ ಆಗದೆ ವಾಹನದಲ್ಲೇ ಶವ ಇರಿಸಿಕೊಂಡು ಕಾಯುವಂತಾಗಿದೆ. ಟಿಎಚ್.ಓ, ಡಿಎಚ್.ಓರಿಗೆ ಕರೆಮಾಡಿದರೂ ಸ್ವೀಕರಿಸಲಿಲ್ಲವೆಂದು ತಾ.ಪಂ.ಮಾಜಿ ಸದಸ್ಯ ಗಣಪತಿ, ಗ್ರಾ.ಪಂ.ಅಧ್ಯಕ್ಷ ಉದಯ್, ಸದಸ್ಯ ಕುಮಾರ್ ಆರೋಪಿಸಿದ್ದಾರೆ.